ಮೈಸೂರಿನ ವಿಜ್ಞಾನ ಶಿಕ್ಷಕ ಮಧುಸೂದನ್‌ಗೆ ರಾಷ್ಟ್ರ ಪ್ರಶಸ್ತಿ

Public TV
1 Min Read

ಮೈಸೂರು: ಜಿಲ್ಲೆಯ ವಿಜ್ಞಾನ ಶಿಕ್ಷಕ ಕೆ.ಎಸ್‌.ಮಧುಸೂದನ್‌ (Madhusudan) ಅವರಿಗೆ ಈ ಬಾರಿಯ  ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ (National Teachers’ Award) ಬಂದಿದೆ.

ಮೈಸೂರಿನ ಹಿನಕಲ್ ಸರ್ಕಾರಿ ಶಾಲೆಯಲ್ಲಿ ಮಧುಸೂದನ್ ವಿಜ್ಞಾನ ಶಿಕ್ಷಕರಾಗಿದ್ದಾರೆ. ವರ್ಚುಯಲ್ ರಿಯಾಲಿಟಿ, ಕೃತಕ ಬುದ್ಧಿಮತ್ತೆ, ರೋಬೊಟಿಕ್ಸ್‌ನಂತಹ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದು ಸರ್ಕಾರಿ ಶಾಲೆ ಬಲವರ್ಧನೆಗೆ ಪಣತೊಟ್ಟು ಕಾರ್ಯ ನಿರ್ವಹಿಸುತ್ತಿದ್ದಾರೆ.

ಕೆ.ಎಸ್‌.ಮಧುಸೂದನ್‌ ನವೋದಯ ಶಾಲೆ ವಿದ್ಯಾರ್ಥಿಯಾಗಿದ್ದರು. ಹೀಗಾಗಿ ನವೋದಯ ಶಾಲೆಯಲ್ಲಿ ಸಿಗುವ ರಾಷ್ಟ್ರಮಟ್ಟದ ಶಿಕ್ಷಣ ರಾಜ್ಯಮಟ್ಟದ ಶಾಲೆಗಳಿಗೂ ಸಿಗಬೇಕೆಂದು ಪಣ ತೊಟ್ಟಿದ್ದಾರೆ. ಈ ಬಾರಿ ದೇಶದ 45 ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಬಂದಿದ್ದು ಇದರಲ್ಲಿ ರಾಜ್ಯದಿಂದ ಆಯ್ಕೆಯಾದ ಏಕೈಕ ಶಿಕ್ಷಕ ಮಧುಸೂದನ್‌ ಆಗಿರುವುದು ವಿಶೇಷ. ಇದನ್ನೂ ಓದಿ: 99,900 ರೂಪಾಯಿಗೆ TVS ಆರ್ಬಿಟರ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಸರ್ಕಾರಿ ಶಾಲೆಯಲ್ಲಿ ಅತ್ಯಾಧುನಿಕ ಲ್ಯಾಬ್ ರೂಪಿಸಿದ್ದು ಹಿನಕಲ್ ನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 5 ರಿಂದ 7ನೇ ತರಗತಿವರೆಗಿನ ಮಕ್ಕಳಿಗಾಗಿ ಒಂದು ವಿಜ್ಞಾನ ಲ್ಯಾಬ್‌ ನಿರ್ಮಾಣ ಮಾಡಿದ್ದಾರೆ.

ಬೇಸಿಕ್‌ ಎಲೆಕ್ಟ್ರಾನಿಕ್ಸ್‌ ಕಲಿಕೆ, ಲರ್ನಿಂಗ್‌ ಮ್ಯಾನೇಜ್‌ಮೆಂಟ್‌, ಇಂಗ್ಲಿಷ್‌ ಶಿಕ್ಷಣ, ಕೃತಕ ಬುದಿಮತ್ತೆ, ರೋಬೊಟಿಕ್ಸ್‌ ತಂತ್ರಜ್ಞಾನದ ಶಿಕ್ಷಣ, 1 ಮತ್ತು 2ನೇ ತರಗತಿ ಮಕ್ಕಳಿಗೆ ಪ್ರೊಜೆಕ್ಟರ್‌ ಮೂಲಕ ಸ್ಮಾರ್ಟ್‌ ಕ್ಲಾಸ್‌. ಕ್ಯೂಆರ್‌ ಕೋಡ್‌ ಮತ್ತು ಸ್ಕ್ಯಾ‌ನರ್‌ ಬಳಸಿ ಮಕ್ಕಳ ದಾಖಲಾತಿ ನಮೂದು, ಮಕ್ಕಳ ಹಾಜರಾತಿ ಮಾಹಿತಿಯು ಪಾಲಕರ ಮೊಬೈಲ್‌ಗೆ ರವಾನೆ, ವಿದ್ಯಾರ್ಥಿಗಳ ಕಲಿಕಾ ಪ್ರಗತಿಯ ಬಗ್ಗೆ ವೆಬ್‌ಸೈಟ್‌ ಮುಖಾಂತರ ಪಡೆದುಕೊಳ್ಳುವ ರೀತಿಯಲ್ಲಿ ಮಧುಸೂದನ್‌ ಸಾಫ್ಟ್‌ವೇರ್‌ ಅಭಿವೃದ್ಧಿ ಮಾಡಿದ್ದಾರೆ.

Share This Article