ತನ್ವೀರ್ ಸೇಠ್‍ಗೆ 3 ಪಟ್ಟು ಭದ್ರತೆ ಹೆಚ್ಚಿಸಿದ ರಾಜ್ಯ ಸರ್ಕಾರ

Public TV
2 Min Read

ಮೈಸೂರು: ಹಲ್ಲೆಗೆ ಒಳಗಾಗಿ ಆಸ್ಪತ್ರೆ ಸೇರಿರುವ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಅವರಿಗೆ ರಾಜ್ಯ ಸರ್ಕಾರ ಮೂರು ಪಟ್ಟು ಭದ್ರತೆಯನ್ನು ಹೆಚ್ಚಿಸಿದೆ.

ಭಾನುವಾರ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತನ್ವೀರ್ ಸೇಠ್ ಗೆ ಯುವಕನೋರ್ವ ಕುತ್ತಿಗೆಗೆ ಚಾಕು ಹಾಕಿದ್ದ. ಈ ಘಟನೆಯ ಹಿನ್ನೆಲೆಯಲ್ಲಿ ಬುಧವಾರ ಅವರ ಹಾಲಿ ಗನ್‍ಮ್ಯಾನ್ ಫೈರೋಜ್ ಖಾನ್‍ನನ್ನು ಅಮಾನತು ಮಾಡಲಾಗಿತ್ತು. ಈಗ ತನ್ವೀರ್ ಸೇಠ್ ಅವರಿಗೆ ಮೂರು ಪಟ್ಟು ಭದ್ರತೆಯನ್ನು ಹೆಚ್ಚಿಸಲಾಗಿದೆ.

ಹಲ್ಲೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ತನ್ವೀರ್ ಸೇಠ್ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯದಲ್ಲಿ ಚೇತರಿಕೆಯಾಗಿದ್ದು, ನಾಲ್ಕನೆ ದಿನವು ಐಸಿಯೂನಲ್ಲಿ ಚಿಕಿತ್ಸೆ ಮುಂದುವರಿದಿದೆ. ಸಮರ್ಪಕವಾಗಿ ಚಿಕಿತ್ಸೆಗೆ ಸ್ಪಂದಿಸುತ್ತಿರುವ ತನ್ವೀರ್ ಸೇಠ್ ಅವರನ್ನು ಇಂದು ಅಥವಾ ನಾಳೆ ವಾರ್ಡ್ ಗೆ ಶಿಫ್ಟ್ ಮಾಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಭದ್ರತೆ ಆದೇಶಿಸಿರುವ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಅವರು ದಿನದ 24 ಗಂಟೆ ಮೂರು ಪಾಳಿಯದಲ್ಲಿ ಕರ್ತವ್ಯ ನಿರ್ವಹಿಸಲು ಗನ್‍ಮ್ಯಾನ್‍ಗಳಿಗೆ ಸೂಚನೆ ನೀಡಿದ್ದಾರೆ. ಇದನ್ನು ಓದಿ: ‘ಗಣ್ಯರನ್ನು ಕೊಲೆ ಮಾಡಿ ಫೇಮಸ್ ಆಗ್ತೀನಿ’ – ಸ್ನೇಹಿತರ ಬಳಿ ಕೊಚ್ಚಿಕೊಂಡಿದ್ದ ಫರಾನ್

ಭಾನುವಾರ ತನ್ವೀರ್ ಸೇಠ್ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಮೈಸೂರು ಪೊಲೀಸರು, ಹಲವಾರು ಆಯಾಮಗಳಲ್ಲಿ ತನಿಖೆ ಮಾಡುತ್ತಿದ್ದಾರೆ. ಈ ವೇಳೆ ಆರೋಪಿ ತನ್ವೀರ್ ಸೇಠ್ ಅವರ ಮೇಲೆ ಹಲ್ಲೆ ಮಾಡುವ ಮುನ್ನ ಬಾಲಿವುಡ್ ಸಿನಿಮಾವೊಂದನ್ನು ಐದಾರು ಬಾರಿ ನೋಡಿದ್ದ ಎಂದು ಆತನ ಸ್ನೇಹಿತರು ಹೇಳಿದ್ದರು.

ಆರೋಪಿ ಫರಾನ್ ಪಾಷಾ ತನ್ವೀರ್ ಸೇಠ್ ಅವರ ಹತ್ಯೆಗೆ ಯತ್ನ ಮಾಡುವ ಹಿಂದಿನ ರಾತ್ರಿ ಬಾಲಿವುಡ್‍ನ ‘ವಾಸ್ತವ್’ ಸಿನಿಮಾವನ್ನು ಐದಾರು ಬಾರಿ ನೋಡಿದ್ದ. ಇದು ಬಾಲಿವುಡ್ ನಟ ಸಂಜಯ್ ದತ್ ನಟನೆಯ ಗ್ಯಾಂಗ್ ಸ್ಟಾರ್ ಸಿನಿಮಾವಾಗಿದ್ದು, ಸಿನಿಮಾವನ್ನು ಹಲ್ಲೆ ಮಾಡುವ ಹಿಂದಿನ ರಾತ್ರಿ ಐದಾರು ಬಾರಿ ನೋಡಿದ್ದ ಎಂದು ಆರೋಪಿ ಸ್ನೇಹಿತರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದೇ ಸಿನಿಮಾ ಯಾಕೆ ನೋಡ್ತಿದ್ದೀಯಾ ಎಂದು ಪ್ರಶ್ನಿಸಿದಾಗ ಆ ಸಿನಿಮಾ ಹೀರೋ ಥರ ನಾನು ಆಗಬೇಕು. ನನಗೆ ಇದು ಪ್ರೇರಣೆ ಆಗ್ತಿದೆ ಎಂದು ಫರಾನ್ ಹೇಳಿದ್ದನಂತೆ. ಇದನ್ನು ಓದಿ: ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಿದ್ದಾನೆ ಎಂದುಕೊಂಡ್ವಿ, ಆದ್ರೆ ಮಚ್ಚಿನಿಂದ ಹೊಡೆದು ಓಡಿ ಹೋದ: ಪ್ರತ್ಯಕ್ಷದರ್ಶಿ

ಭಾನುವಾರ ರಾತ್ರಿ ತನ್ವೀರ್ ಸೇಠ್ ಮೈಸೂರಿನ ಬನ್ನಿ ಮಂಟಪ ಸಮೀಪದ ಪಾರ್ಟಿ ಹಾಲಿಗೆ ತಮ್ಮ ಆತ್ಮೀಯ ಮಗನ ಮದುವೆಯ ಬೀಗರೂಟಕ್ಕೆ ಆಗಮಿಸಿದ್ದರು. ಈ ವೇಳೆ ಯುವಕ ಫರಾನ್ ಚಾಕುವಿನಿಂದ ಹಲ್ಲೆ ಮಾಡಿದ್ದ. ಅವರ ಕತ್ತಿಗೆ ಭಾಗಕ್ಕೆ ಚಾಕು ಹಾಕಿ ಪರಾರಿಯಾಗುತ್ತಿದ್ದ ಆತನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ನಂತರ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಸೇಠ್ ಅವರನ್ನು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸದ್ಯ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *