ಮೋದಿ ಹೆಸರೇಳದಿದ್ದರೆ ಅವರ ಭಾಷಣ ಕೇಳಲು ಯಾರು ಬರುತ್ತಾರೆ – ಸೂಲಿಬೆಲೆಗೆ ಸಿಂಹ ಟಾಂಗ್

Public TV
1 Min Read

ಮೈಸೂರು: ಪ್ರಧಾನಿ ಮೋದಿ ವಿರುದ್ಧ ಮಾತನಾಡುವವರಿಗೆ ಮೋದಿಯೇ ಬಂಡವಾಳ ಎಂದು ಹೇಳುವ ಮೂಲಕ ಸಂಸದ ಪ್ರತಾಪ್ ಸಿಂಹ ಪರೋಕ್ಷವಾಗಿ ಚಕ್ರವರ್ತಿ ಸೂಲಿಬೆಲಿ ವಿರುದ್ಧ ಕಿಡಿಕಾರಿದ್ದಾರೆ.

ಮೋದಿ ಹೆಸರನ್ನು ಹೇಳಿಕೊಂಡು ಕೆಲ ಸಂಸದರು ಗೆದ್ದಿದ್ದಾರೆ ಎಂಬ ಟೀಕೆ ಸಂಬಂಧ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಮೋದಿ ಅವರ ವಿರುದ್ಧ ಮಾತನಾಡುತ್ತಿರುವವರ ಭಾಷಣಕ್ಕೆ ಮೋದಿಯೇ ಬಂಡವಾಳ ಮೋದಿ. ಮೋದಿ ಹೆಸರೇಳದಿದ್ದರೆ ಅವರ ಭಾಷಣ ಕೇಳಲು ಯಾರು ಬರುತ್ತಾರೆ ಎಂದು ಚಕ್ರವರ್ತಿ ಸೂಲಿಬೆಲೆಯವರ ಹೆಸರನ್ನು ನೇರವಾಗಿ ಹೇಳದೇ ಟಾಂಗ್ ಕೊಟ್ಟಿದ್ದಾರೆ.

ಅವರು ಭಾಷಣ ಶುರುಮಾಡುವುದಕ್ಕಿಂತ ಮುಂಚೆಯೇ ನಾನು ಮೋದಿಯವರ ಆತ್ಮಕಥೆ ಬರೆದಿದ್ದೆ. ಇವರಿಂದ ನಾನು ಮೋದಿ ಪ್ರೇಮ ಕಲಿಯಬೇಕಾಗಿಲ್ಲ. ಇವರ ಟೀಕೆ ವಿವೇಚನ ರಹಿತವಾಗಿದೆ. ನಾನಾಗಲಿ ಕೆಲ ಸಂಸದರಾಗಲಿ ಗೆದ್ದಿದ್ದು ಮೋದಿಯವರ ಹೆಸರಿನಿಂದಲೇ. ಆದರೆ ಸದಾನಂದಗೌಡ, ರಮೇಶ್ ಜಿಗಜಣಗಿ, ನಳಿನ್ ಕುಮಾರ್ ಕಟೀಲ್ ಮತ್ತಿತರರು ಮೋದಿ ರಾಷ್ಟ್ರ ರಾಜಕಾರಣಕ್ಕೆ ಬರುವ ಮೊದಲೇ ಸಂಸದರಾಗಿದ್ದಾರೆ. ಟೀಕೆ ಮಾಡುವ ವ್ಯಕ್ತಿ ಇದನ್ನು ನೆನಪಿಟ್ಟುಕೊಳ್ಳಲಿ ಎಂದು ತಿರುಗೇಟು ನೀಡಿದರು.

ಮೋದಿಯವರನ್ನು ಟೀಕೆ ಮಾಡಬಾರದು ಎಂದು ನಾನು ಹೇಳಿಲ್ಲ. ವಿಚಾರಗಳನ್ನು ಇಟ್ಟುಕೊಂಡು ಟೀಕೆ ಮಾಡಿ ಎಂದಷ್ಟೆ ಹೇಳಿದ್ದೇನೆ. ಕೇಂದ್ರದ ನೆರೆ ಪರಿಹಾರ ನಿಧಿ ಕರ್ನಾಟಕ ಮಾತ್ರವಲ್ಲದೆ ಉಳಿದ ರಾಜ್ಯಗಳಿಗೂ ಬಂದಿಲ್ಲ. ಮಹಾರಾಷ್ಟ್ರದಲ್ಲಿ 377 ಜನ ಸಾವನ್ನಪ್ಪಿದ್ದಾರೆ. ಪಶ್ಚಿಮ ಬಂಗಾಳದಲ್ಲಿ 225 ಜನ ಸಾವನ್ನಪ್ಪಿದ್ದಾರೆ ಯಾವ ರಾಜ್ಯಗಳಿಗೂ ಕೇಂದ್ರ ನೆರೆ ಪರಿಹಾರ ನೀಡಿಲ್ಲ. ಅದ್ದರಿಂದ ಮೋದಿಯನ್ನು ಟೀಕಿಸುವುದು ಸರಿಯಲ್ಲ ಎಂದು ಹೇಳಿದರು.

ಆ ರಾಜ್ಯಗಳಿಗೆ ಬಿಡುಗಡೆಯಾಗಿ ನಮ್ಮ ರಾಜ್ಯಕ್ಕೆ ಬಿಡುಗಡೆಯಾಗಿಲ್ಲ ಅಂದರೆ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಪ್ರಶ್ನೆ ಮಾಡಬೇಕಿತ್ತು. ಈಗ ನಿಯಮದ ಪ್ರಕಾರವೇ ಎಲ್ಲ ನಡೆಯುತ್ತಿದೆ. ಕಲವೇ ದಿನಗಳಲ್ಲಿ ಪರಿಹಾರದ ಹಣ ಬರುತ್ತದೆ ಎಂದು ಭರವಸೆ ನೀಡಿದರು. ಮೋದಿ ಸರ್ಕಾರ ಕರ್ನಾಟಕ್ಕೆ ಯಾವ ವಿಚಾರದಲ್ಲೂ ಅನ್ಯಾಯ ಮಾಡಿಲ್ಲ. ಕಾವೇರಿ, ಮೇಕೆದಾಟು ಎಲ್ಲಾ ವಿಚಾರದಲ್ಲೂ ಮೋದಿ ಕರ್ನಾಟಕದ ಪರವಾಗಿ ನಿಂತಿದ್ದಾರೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *