ಮೈಸೂರು: ನವರಾತ್ರಿ ಹಬ್ಬದ ಸಂಭ್ರಮ ಮುಗಿದು ಇಂದು ವಿಜಯ ದಶಮಿ ಸಂಭ್ರಮ. ನಾಡಹಬ್ಬದ ಖುಷಿಯಲ್ಲಿ ಕಂಗೊಳಿಸುತ್ತಿರುವ ಅರಮನೆ ಮೈಸೂರಲ್ಲೂ ವಿಜಯ ದಶಮಿ ಹಬ್ಬದ ಸಂಭ್ರಮ ಜೋರಿದೆ.
ಬೆಳಗ್ಗೆ 10 ಗಂಟೆಗೆ ಜಟ್ಟಿಕಾಳಗ ನಡೆಯಲಿದೆ. ಜಟ್ಟಿ ಕಾಳಗದಲ್ಲಿ ಜಟ್ಟಿಯ ಶಿರದಿಂದ ರಕ್ತ ಚಿಮ್ಮಿದ್ರೆ ಇಲ್ಲಿಂದ ಎಲ್ಲಾ ಕಾರ್ಯಕ್ರಮಕ್ಕೂ ಚಾಲನೆ ಸಿಕ್ಕಂತೆಯೇ. ಬಳಿಕ ಬೆಳ್ಳಿರಥದಲ್ಲಿ ಯದುವೀರ್ ಮೆರವಣಿಗೆ ನಡೆಯಲಿದ್ದು, 10 ಗಂಟೆಯಿಂದ 12 ಗಂಟೆಯೊಳಗೆ ಬನ್ನಿಮರಕ್ಕೆ ಯದುವೀರ್ ಪೂಜೆ ಸಲ್ಲಿಸಲಿದ್ದಾರೆ. ಇಲ್ಲಿ ಯದುವೀರ್ ಕಂಕಣ ತೆಗೆಯಲಿದ್ದಾರೆ.
ನಂತರ ಎಲ್ಲರೂ ಕಾತುರದಿಂದ ಕಾಯ್ತಿರೋ ಜಂಬೂ ಸವಾರಿ ಆರಂಭವಾಗಲಿದೆ. ಜಂಬೂ ಸವಾರಿ ವೀಕ್ಷಿಸಲು ಅಂಬಾವಿಲಾಸ ಅರಮನೆ ಮುಂಭಾಗ 26 ಸಾವಿರ ಜನರಿಗೆ ಕುರ್ಚಿ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ, ಅಂಬಾರಿ ಸಾಗುವ ರಸ್ತೆಯ ಬದಿಯಲ್ಲೂ ಆಸನಗಳ ವ್ಯವಸ್ಥೆ ಇದೆ. ಪೊಲೀಸರು ಟೈಟ್ ಸೆಕ್ಯೂರಿಟಿ ಮಾಡಿದ್ದಾರೆ. ಭಾರೀ ಜನಸ್ತೋಮ ಅರಮನೆ ನಗರಿಯಲ್ಲಿದೆ.
ಜಂಬೂ ಸವಾರಿಗೂ ಮುನ್ನ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ಸಿಎಂ ಯಡಿಯೂರಪ್ಪ ಅವರು ಮಧ್ಯಾಹ್ನ 2.30ರ ಸುಮಾರಿಗೆ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಲಿದ್ದಾರೆ. ಈ ನಿಟ್ಟಿನಲ್ಲಿ ಇದೀಗ ನಂದಿ ಧ್ವಜಕ್ಕೆ 9 ದಿನಗಳಿಂದ ಪೂಜೆ ಮಾಡುವ ಮೂಲಕ ಇಂದಿನ ನಂದಿ ಧ್ವಜ ಪೂಜೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹುಡಿಗಾಲದ ಮಹದೇವಪ್ಪ ಹಾಗೂ ಅವರ ಕುಟಂಬದವರು ಹಲವು ವರ್ಷಗಳಿಂದ ನಂದಿ ಧ್ವಜಕ್ಕೆ ಪೂಜೆ ಮಾಡಿಕೊಂಡು, ದಸರಾ ಮೆರವಣಿಗೆಯ ವೇಳೆ ನಂದಿ ಧ್ವಜವನ್ನು ತರಲಾಗುತ್ತಿದ್ದಾರೆ. ಈಗಾಗಲೇ ಮಹದೇವಪ್ಪ ಅವರ ಮನೆಯಲ್ಲಿ ನಂದಿ ಧ್ವಜಕ್ಕೆ ಪೂಜೆ ಮಾಡಿ ಸಿದ್ಧತೆಗೊಳಿಸಲಾಗಿದೆ.
ಪಂಜಿನ ಕವಾಯತು ಮೂಲಕ ಮೈಸೂರಲ್ಲಿ ನಾಡಹಬ್ಬಕ್ಕೆ ತೆರೆಬೀಳಲಿದೆ. ಸಂಜೆ 4.30ಕ್ಕೆ ಹೊರಟ ಅಂಬಾರಿ ಸಂಜೆ 7 ಗಂಟೆಗೆ ಬನ್ನಿ ಮಂಟಪ ತಲುಪುತ್ತದೆ. ಇತ್ತ ರಾತ್ರಿ 7.30ಕ್ಕೆ ಬನ್ನಿಮಂಟಪದಲ್ಲಿ ಪಂಜಿನ ಕವಾಯತು ಆರಂಭವಾಗುತ್ತದೆ. ನೂರಾರು ಮಂದಿ ಪಂಜನ್ನು ಹಿಡಿದು ಸಾಹಸ ಪ್ರದರ್ಶಿಸುತ್ತಾರೆ. ಈ ಪಂಜಿನ ಕವಾಯತಿನ ಬಳಿಕ ರಾತ್ರಿ 10 ಗಂಟೆಗೆ ಪಟಾಕಿ ಸಿಡಿಸೋ ಮೂಲಕ ದಸರಾಕ್ಕೆ ತೆರೆ ಬೀಳುತ್ತದೆ.