ಚುನಾವಣೆಗೆ ಮುನ್ನವೇ ಮೈಸೂರಿನಲ್ಲಿ ಸೋತ ಸಿಎಂ ಸಿದ್ದರಾಮಯ್ಯ!

Public TV
4 Min Read

ಬೆಂಗಳೂರು: ಅರಮನೆ ನಗರಿಯ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ಯಶಸ್ವಿಯಾಗಿದ್ದು, ಈ ಮೈತ್ರಿ ವಿಧಾನಸಭಾ ಚುನಾವಣೆಗೂ ಅನ್ವಯವಾಗುತ್ತಾ ಎನ್ನುವ ಪ್ರಶ್ನೆ ಈಗ ಮತ್ತೊಮ್ಮೆ ಎದ್ದಿದೆ.

ಹೌದು. ಮೈಸೂರು ಮಹಾನಗರಪಾಲಿಕೆಯ ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಭಾರೀ ಹೈಡ್ರಾಮಾ ನಡೆದಿದ್ದು, ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಭಾಗ್ಯವತಿ ಜೆಡಿಎಸ್, ಬಿಜೆಪಿ ಸದಸ್ಯರಿಂದಾಗಿ ಮೇಯರ್ ಪಟ್ಟ ಅಲಂಕರಿಸಿದ್ದಾರೆ. ಈ ಮೂಲಕ ಸಿಎಂ ಸಿದ್ದರಾಮಯ್ಯನವರಿಗೆ ತವರಿನಲ್ಲಿ ಭಾರೀ ಮುಖಭಂಗವಾಗಿದೆ.  ಇದನ್ನೂ ಓದಿ: ಮೈಸೂರು ಮೇಯರ್ ಚುನಾವಣೆಯಲ್ಲಿ ಹೈಡ್ರಾಮ ನಡೆದಿದ್ದು ಹೀಗೆ

ಕಾಂಗ್ರೆಸ್ ಸೋಲಿಸಲು ಮೈಸೂರು ಜಿಲ್ಲೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಂದಾಗುತ್ತಿರುವುದು ಇದೆ ಮೊದಲಲ್ಲ. ಕಳೆದ ಶುಕ್ರವಾರ ಹುಣಸೂರು ನಗರಸಭೆ ಚುನಾವಣೆಯಲ್ಲೂ ಮೈತ್ರಿ ನಡೆದಿತ್ತು. ಕಾಂಗ್ರೆಸ್‍ನಿಂದ ಜೆಡಿಎಸ್‍ಗೆ ವಲಸೆ ಹೋಗಿದ್ದ ಶಿವಕುಮಾರ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಸಂಸದ ಪ್ರತಾಪ್ ಸಿಂಹ ಅವರು ಜೆಡಿಎಸ್ ಬೆಂಬಲಿತ ಅಭ್ಯರ್ಥಿಯ ಪರವಾಗಿ ಮತ ಚಲಾಯಿಸಿ ಗೆಲುವಿಗೆ ಕಾರಣರಾಗಿದ್ದರು.

ಹುಣಸೂರು ನಗರಸಭೆಯಲ್ಲಿ 15 ಕಾಂಗ್ರೆಸ್, 9 ಜೆಡಿಎಸ್, 3 ಪಕ್ಷೇತರ ಸದಸ್ಯರು, ಒಬ್ಬರು ಶಾಸಕರು ಹಾಗೂ ಲೋಕಸಭಾ ಸದಸ್ಯರು ಸೇರಿ ಒಟ್ಟು 29 ಸಂಖ್ಯಾಬಲ ಹೊಂದಿತ್ತು. ಕಾಂಗ್ರೆಸ್ ನ ಮೊದಲ ವಾರ್ಡ್ ಸದಸ್ಯ ಶಿವಕುಮಾರ್ ಹಾಗೂ 5ನೇ ವಾರ್ಡ್ ಶಿವರಾಜು, 3ನೇ ವಾರ್ಡ್‍ನ ಮಂಜುಳಾ, 9ನೇ ವಾರ್ಡ್ ಸುನೀತಾ, 10ನೇ ವಾರ್ಡ್‍ನ ಯೋಗಾನಂದ, 18 ವಾರ್ಡ್‍ನ ರವಿಕುಮಾರ್ ಜೆಡಿಎಸ್ ಗೆ ವಲಸೆ ಬಂದಿದ್ದರು.

ಒಟ್ಟು 29 ಸದಸ್ಯ ಬಲದ ನಗರಸಭೆ ಚುನಾವಣೆಯಲ್ಲಿ ಎರಡೂ ಕಡೆಯೂ ತಲಾ 14 ಸದಸ್ಯರಿದ್ದರು. ಒಂದು ವೇಳೆ ಸಂಸದರು ಭಾಗವಹಿಸದೇ ಇದ್ದಲ್ಲಿ ಲಾಟರಿ ಎತ್ತುವ ಮೂಲಕ ಆಯ್ಕೆ ನಡೆಯಬೇಕಿತ್ತು. ಈ ಚುನಾವಣೆಯಲ್ಲಿ ಸಂಸದ ಪ್ರತಾಪ್ ಸಿಂಹ ಭಾಗವಹಿಸಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಶಿವಕುಮಾರ್ ಪರ ವೋಟು ಚಲಾಯಿಸಿದ್ದರು. ಸದಸ್ಯರು ಕೈ ಎತ್ತುವ ಮೂಲಕ ಮತದಾನ ಮಾಡಿದರು. ಶಿವಕುಮಾರ್ ವಿಜೇತರಾಗಿದ್ದಾರೆಂದು ಚುನಾವಣಾಧಿಕಾರಿಯಾದ ಉಪ ವಿಭಾಗಾಧಿಕಾರಿ ಕೆ.ನಿತಿನ್ ಘೋಷಿಸಿದ್ದರು. ಈ ಮೂಲಕ ಬಹುಮತವಿದ್ದರೂ ಕಾಂಗ್ರೆಸ್ ಅಧಿಕಾರವನ್ನು ಕಳೆದುಕೊಂಡಿತ್ತು. ಇದನ್ನೂ ಓದಿ: ಜೆಡಿಎಸ್‍ಗೆ ಮತ ಹಾಕಿದ್ದು ಯಾಕೆ? ಸಂಸದ ಪ್ರತಾಪ್ ಸಿಂಹ ಹೇಳಿದ್ದು ಏನು?

ಬಿಬಿಎಂಪಿಯಲ್ಲಿ ಮೈತ್ರಿ: 2015ರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಚುನಾವಣೆಯಲ್ಲಿ ಬಿಜೆಪಿ 100, ಕಾಂಗ್ರೆಸ್ 76, ಜೆಡಿಎಸ್ 14, ಪಕ್ಷೇತರರಿಗೆ 8 ಸ್ಥಾನಗಳು ಲಭಿಸಿತ್ತು. ಆದರೆ ಅಂತಿಮವಾಗಿ ಕಾಂಗ್ರೆಸ್ ಜೆಡಿಎಸ್ ಮತ್ತು ಪಕ್ಷೇತರರ ಬೆಂಬಲ ಗಳಿಸಿ ಬಿಬಿಎಂಪಿ ಗದ್ದುಗೆ ಏರಿತ್ತು. ಈ ಸಂದರ್ಭದಲ್ಲಿ ಬಿಬಿಎಂಪಿಗೆ ಅನುದಾನ ಬರುವುದು ರಾಜ್ಯ ಸರ್ಕಾರದಿಂದ. ಒಂದು ವೇಳೆ ಅಧಿಕಾರಕ್ಕೆ ಏರಿದರೂ ಅನುದಾನ ಸಿಗದೇ ಇದ್ದರೆ ಬೆಂಗಳೂರಿನ ಅಭಿವೃದ್ಧಿ ಕಷ್ಟವಾಗಿ ವಿಧಾನಸಭಾ ಚುನಾವಣೆ ಸಂದರ್ಭಲ್ಲಿ ತಿರುಗುಬಾಣವಾಗಬಹುದು ಎನ್ನುವ ಕಾರಣಕ್ಕೆ ಬಿಜೆಪಿ ಅಧಿಕಾರಕ್ಕೆ ಏರಲು ಹೆಚ್ಚಿನ ಪ್ರಯತ್ನ ನಡೆಸಲಿಲ್ಲ. ಇದಾದ ಬಳಿಕ ರಾಜ್ಯದಲ್ಲಿ ಬಹಳ ವಿದ್ಯಮಾನಗಳು ನಡೆದಿದ್ದು,  ವಿಧಾನ ಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ  ಮೈಸೂರು ಜಿಲ್ಲೆಯಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಇದನ್ನೂ ಓದಿ: ಹೆಚ್‍ಡಿಡಿ ವಿರುದ್ಧ ರಫ್&ಟಫ್ ವರ್ತನೆ ಬೇಡ- ಬಿಜೆಪಿ ನಾಯಕರಿಗೆ ಹೈಕಮಾಂಡ್ ಸೂಚನೆ

ಈ ಹಿಂದೆ ರೈಲ್ವೇ ಸಚಿವ ಪಿಯೂಶ್ ಗೋಯಲ್ ಅವರು ಮಾಜಿ ಪ್ರಧಾನಿ ದೇವೇಗೌಡ ಅವರ ನಿವಾಸಕ್ಕೆ ತೆರಳಿ ಮಾತನಾಡಿದ್ದರು. ಪಿಯೂಶ್ ಗೋಯಲ್ ಕರ್ನಾಟಕ ರಾಜ್ಯ ಬಿಜೆಪಿಯ ಚುನಾವಣಾ ಉಸ್ತುವಾರಿಯಾಗಿದ್ದ ಕಾರಣ ಈ ಭೇಟಿ ಬಹಳ ಮಹತ್ವ ಪಡೆದಿತ್ತು. ಪ್ರಧಾನಿ ನರೇಂದ್ರ ಮೋದಿಯವರು ಸಹ ದೇವೇಗೌಡ ಅವರ ಜೊತೆ ಉತ್ತಮ ಸಂಬಂಧವನ್ನು ಇಟ್ಟುಕೊಂಡಿದ್ದಾರೆ. ದೇವೇಗೌಡ ಅವರು ದೆಹಲಿಗೆ ಹೋದ ಸಮಯದಲ್ಲಿ ಹಲವು ಬಾರಿ ಪ್ರಧಾನಿ ಅವರನ್ನು ಭೇಟಿ ಮಾಡಿದ್ದಾರೆ. ವಿಶೇಷವಾಗಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) ಜಾರಿ ಸಮಯದಲ್ಲಿ ದೇವೇಗೌಡ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಸ್ತುತ ಸ್ವಿಜರ್ಲ್ಯಾಂಡ್  ದಾವೋಸ್‍ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆ ಜಾಗತಿಕ ಶೃಂಗ ಸಭೆಯಲ್ಲಿ ಮಂಗಳವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಭಾಷಣದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೆಸರು ಪ್ರಸ್ತಾಪಿಸಿದ್ದರು.  ಇದನ್ನೂ ಓದಿ: ನನ್ನ ಮನೆಗೆ ಕೇಂದ್ರ ಸಚಿವ ಗೋಯಲ್ ಬಂದಿದ್ದು ಯಾಕೆ: ದೇವೇಗೌಡ್ರು ವಿವರಿಸಿದ್ರು

ಬಿಜೆಪಿ ಮತ್ತು ಜೆಡಿಎಸ್ ಜೊತೆ ಸಂಬಂಧ ಉತ್ತಮವಾಗುತ್ತಿರುವ ಹಿನ್ನೆಲೆಯಲ್ಲಿ ಮೈತ್ರಿ ನಡೆಯುತ್ತಾ ಎನ್ನುವ ಪ್ರಶ್ನೆಗೆ ದೇವೇಗೌಡ ಅವರು ಮಂಗಳೂರಿನಲ್ಲಿ, ಫಲಿತಾಂಶ ಬಂದ ಬಳಿಕ ಯಾರ ಜೊತೆಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಚುನಾವಣಾ ಮೈತ್ರಿ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಈ ಕ್ಷಣದಲ್ಲಿ ಯಾವುದೇ ತೀರ್ಮಾನ ತೆಗೆದುಕೊಳ್ಳಲ್ಲ. ಎರಡು ರಾಷ್ಟ್ರೀಯ ಪಕ್ಷಗಳ ಲೋಪವನ್ನು ಹಿಡಿದುಕೊಂಡು ಪಕ್ಷ ಕಟ್ಟುವ ಅಗತ್ಯ ಇಲ್ಲ. ನಮ್ಮ ಸಿದ್ಧಾಂತಗಳನ್ನು ಹಿಡಿದುಕೊಂಡು ಪಕ್ಷ ಕಟ್ಟುತ್ತೇವೆ ಎಂದು ಉತ್ತರಿಸಿದ್ದರು. ಇದನ್ನೂ ಓದಿ: ಮೋದಿ ಬಗ್ಗೆ ಸಾಫ್ಟ್ ಕಾರ್ನರ್ ಇದೆ ಎಂಬ ಆರೋಪಕ್ಕೆ ದೇವೇಗೌಡ್ರು ಪ್ರತಿಕ್ರಿಯಿಸಿದ್ದು ಹೀಗೆ

ರಾಜಕೀಯ ಪಕ್ಷಗಳು ಈಗ ಯಾವುದೇ ವಿಚಾರವನ್ನು ತಿಳಿಸದೇ ಇದ್ದರೂ  ಸಮೀಕ್ಷೆಗಳಲ್ಲಿ ಕರ್ನಾಟಕದಲ್ಲಿ ಈ ಬಾರಿ ಅತಂತ್ರ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯಿದೆ ಎನ್ನುವ ಫಲಿತಾಂಶ ಪ್ರಕಟವಾಗಿದೆ. ಅತಂತ್ರ ಪರಿಸ್ಥಿತಿ ನಿರ್ಮಾಣವಾದರೆ ಮೈತ್ರಿ ಅನಿವಾರ್ಯವಾಗುತ್ತದೆ. ಚುನಾವಣೆ ಹತ್ತಿರದಲ್ಲಿರುವಾಗಲೇ ಹುಣಸೂರು ನಗರಸಭೆ ಮತ್ತು ಮೈಸೂರು ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್, ಬಿಜೆಪಿ ಒಂದಾಗಿ ಸಿದ್ದರಾಮಯ್ಯನವರನ್ನು ಸೋಲಿಸಿದೆ. ಹೀಗಾಗಿ ಈ ಮೈತ್ರಿ ಈ ಚುನಾವಣೆಗೆ ಮಾತ್ರವೇ ಅಥವಾ ಚುನಾವಣೆಯ ಫಲಿತಾಂಶದ ಬಳಿಕವೂ ಮುಂದುವರಿಯುತ್ತಾ ಎನ್ನುವ ಪ್ರಶ್ನೆಗೆ ಮೇ ತಿಂಗಳಿನಲ್ಲಿ ಸ್ಪಷ್ಟ ಉತ್ತರ ಸಿಗಲಿದೆ. ಇದನ್ನೂ ಓದಿ: ಯಾರಿಗೂ ಬಹುಮತವಿಲ್ಲ, ಮತ್ತೊಮ್ಮೆ ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣ! ಈಗ ಚುನಾವಣೆ ನಡೆದರೆ ಯಾರಿಗೆ ಎಷ್ಟು ಸ್ಥಾನ?

https://youtu.be/rbIYLnwQSCs

 

Share This Article
Leave a Comment

Leave a Reply

Your email address will not be published. Required fields are marked *