ಮೈಸೂರಿನಿಂದ ಲಕ್ಷ್ಮಣ್‌, ಚಾಮರಾಜನಗರದಿಂದ ಹೆಚ್.ಸಿ.ಮಹದೇವಪ್ಪ ಪುತ್ರನಿಗೆ ʼಕೈʼ ಟಿಕೆಟ್ ಫೈನಲ್?

Public TV
2 Min Read

– ಮೈಸೂರು ಕ್ಷೇತ್ರದಿಂದ ಯಾವುದೇ ಕಾರಣಕ್ಕೂ ಯತೀಂದ್ರ ಸ್ಪರ್ಧೆ ಬೇಡ ಎಂದ ಸಿದ್ದರಾಮಯ್ಯ
– ಕಾಂಗ್ರೆಸ್ ಸ್ಥಳೀಯ ನಾಯಕರಿಗೆ ಸಿಎಂ ಮಾಹಿತಿ

ಮೈಸೂರು: ಮುಂಬರುವ ಲೋಕಸಭಾ ಚುನಾವಣೆಗೆ ಮೈಸೂರು-ಕೊಡಗು ಕ್ಷೇತ್ರಕ್ಕೆ ಎಂ.ಲಕ್ಷ್ಮಣ್‌ ಹಾಗೂ ಚಾಮರಾಜನಗರ ಕ್ಷೇತ್ರಕ್ಕೆ ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ ಪುತ್ರ ಸುನೀಲ್ ಬೋಸ್ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಅಂತಿಮ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಕುರಿತು ಸ್ಥಳೀಯ ನಾಯಕರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ ಹಂಚಿಕೊಂಡಿದ್ದಾರೆ ಎನ್ನಲಾಗಿದೆ.

ಮೈಸೂರು ರಾಜವಂಶಸ್ಥ ಹಾಗೂ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವಿರುದ್ಧ ಸ್ಪರ್ಧೆಗೆ ಕಾಂಗ್ರೆಸ್ ಅಭ್ಯರ್ಥಿ ಅಂತಿಮಗೊಳಿಸಲಾಗಿದೆ. ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಕಾಂಗ್ರೆಸ್ ಅಭ್ಯರ್ಥಿ ಎಂದು ಶುಕ್ರವಾರ ಸಂಜೆ ಕಾಂಗ್ರೆಸ್ ಸ್ಥಳೀಯ ನಾಯಕರಿಗೆ ಸಿಎಂ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಮೈಸೂರು ಲೋಕಸಭಾ ಕ್ಷೇತ್ರದಿಂದ ಮಗನನ್ನು ಕಣಕ್ಕೆ ಇಳಿಸಲು ಸಿದ್ದರಾಮಯ್ಯ ಸುತಾರಾಂ ಒಪ್ಪಿಲ್ಲ. ಯಾವುದೇ ಕಾರಣಕ್ಕೂ ಡಾ. ಯತೀಂದ್ರ ಸಿದ್ದರಾಮಯ್ಯ ಸ್ಪರ್ಧೆ ಇಲ್ಲ ಅಂತಾ ಕಡ್ಡಿ ತುಂಡಾಗುವಂತೆ ಕಾಂಗ್ರೆಸ್‌ನ ಸ್ಥಳೀಯ ನಾಯಕರಿಗೆ ಸಿಎಂ ಸ್ಪಷ್ಟಪಡಿಸಿದ್ದಾರೆ.

ಈ ಹಂತದಲ್ಲಿ ಯತೀಂದ್ರ ಸ್ಪರ್ಧೆ ಬೇಡವೆ ಬೇಡ. ಸುಮ್ನೆ ಅದೇ ಕಥೆ ಹೇಳಿಕೊಂಡು ನನ್ನ ಮುಂದೆ ಕೂರಬೇಡಿ ಅಂತಾ ನಾಯಕರಿಗೆ ಸ್ವಲ್ಪ ಗರಂ ಆಗಿಯೆ ಹೇಳಿರುವ ಸಿಎಂ, ಬಿಜೆಪಿ-ಜೆಡಿಎಸ್ ಮೈತ್ರಿ ಇಲ್ಲದೆ ಇದ್ದಿದ್ದರೆ ಅದು ಬೇರೆ ಪ್ರಶ್ನೆ. ಇಲ್ಲಿಗೆ ಒಕ್ಕಲಿಗ ಅಭ್ಯರ್ಥಿಯೆ ಬೇಕು. ಹೀಗಾಗಿ ಯತೀಂದ್ರ ಸ್ಪರ್ಧೆ ಬೇಡ ಅಂತಾ ತಮ್ಮದೆ ಶೈಲಿಯಲ್ಲಿ ಮೈಸೂರು ಕಾಂಗ್ರೆಸ್ ನಾಯಕರಿಗೆ ಹೇಳಿದ್ದಾರೆ.

ಇತ್ತ ಚಾಮರಾಜನಗರ ಕ್ಷೇತ್ರಕ್ಕೂ ಕಾಂಗ್ರೆಸ್ ಅಭ್ಯರ್ಥಿ ಅಂತಿಮ ಆಗಿದ್ದಾರೆ ಎನ್ನಲಾಗಿದೆ. ಲೋಕಸಭಾ ಚುನಾವಣೆ ಬಲೆಯಿಂದ ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ ತಪ್ಪಿಸಿಕೊಂಡಿದ್ದಾರೆ. ಚಾಮರಾಜನಗರ ಲೋಕಸಭಾ ಕ್ಷೇತ್ರದ ಟಿಕೆಟ್ ಅನ್ನು ತಮ್ಮ ಮಗನಿಗೆ ಕೊಡಿಸುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ. ಸುನೀಲ್ ಬೋಸ್ ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂದು ಹೇಳಲಾಗಿದೆ. ನಿನ್ನೆ ಅಂತಿಮ ಹಂತದ ಸಭೆ ನಡೆಸಿ ಸಿಎಂ ಹೆಸರು ಅಂತಿಮಗೊಳಿಸಿದ್ದಾರೆ. ಕೊನೆ ಕ್ಷಣದವರೆಗೂ ಮಹದೇವಪ್ಪ ಅವರನ್ನು ಸ್ಪರ್ಧೆಗೆ ಇಳಿಯುವಂತೆ ಮನವೊಲಿಸಲು ಸಿಎಂ ಪ್ರಯತ್ನಿಸಿದರು.
ಮಹಾದೇವಪ್ಪ ಸ್ಪರ್ಧೆಗೆ ಮನಸ್ಸು ಮಾಡದ ಕಾರಣ ಸುನೀಲ್ ಬೋಸ್‌ಗೆ ಟಿಕೆಟ್ ಫೈನಲ್ ಮಾಡಲಾಗಿದೆ.

Share This Article