ಮಾಜಿ ಸಿಎಂ ‘ಸ್ವಾಭಿಮಾನ’ಕ್ಕೆ ಪೆಟ್ಟು ಕೊಟ್ಟ ಎಚ್‍ಡಿಕೆ – ಯತೀಂದ್ರ ಕ್ಷೇತ್ರದಲ್ಲಿ ಜೆಡಿಎಸ್ ‘ಹಸ್ತ’ಕ್ಷೇಪ?

Public TV
2 Min Read

ಮೈಸೂರು: ಮೈಸೂರು ಇನ್ಸ್ ಪೆಕ್ಟರ್ ರವಿ ವರ್ಗಾವಣೆ ಸಂಬಂಧಿಸಿದಂತೆ ಸಿಎಂ ಕುಮಾರಸ್ವಾಮಿ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸ್ವಾಭಿಮಾನಕ್ಕೆ ಪೆಟ್ಟು ನೀಡಿದ್ದಾರೆ ಎನ್ನಲಾಗಿದ್ದು, ಮೈಸೂರು ಎಸ್‍ಪಿ ಹಾಗೂ ಇನ್ಸ್ ಪೆಕ್ಟರ್ ನಡುವಿನ ಗಲಾಟೆಗೆ ಟ್ವಿಸ್ಟ್ ಸಿಕ್ಕಿದೆ.

ಮೈಸೂರು ಎಸ್‍ಪಿ ಅಮಿತ್‍ಸಿಂಗ್, ಇನ್ಸ್ ಪೆಕ್ಟರ್ ರವಿ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಧ್ವನಿ ಸುರುಳಿ ರಾಜ್ಯಾದ್ಯಂತ ಸದ್ದು ಮಾಡಿತ್ತು. ಈ ಪ್ರಕರಣದ ನಂತರ ಇನ್ಸ್ ಪೆಕ್ಟರ್ ಸಿ.ವಿ. ರವಿ ಅವರನ್ನು ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಿಂದ ಉಡುಪಿಗೆ ವರ್ಗಾವಣೆ ಮಾಡಲಾಗಿತ್ತು. ಆದರೆ ಒಂದೇ ದಿನದಲ್ಲಿ ಸರ್ಕಾರದ ಈ ಆದೇಶ ರದ್ದಾಗಿದ್ದು, ಬೆಂಗಳೂರಿಗೆ ಪೊಲೀಸ್ ಪ್ರಧಾನ ಕಚೇರಿಯಲ್ಲಿ ವರದಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.

ಸರ್ಕಾರದಲ್ಲಿ ವರ್ಗಾವಣೆ ಮಾಡುವುದೇ ದಂಧೆಯನ್ನಾಗಿ ಮಾಡಿಕೊಳ್ಳಲಾ ಎಂದು ಸಿಎಂ ಕುಮಾರಸ್ವಾಮಿ ಬೆಂಗಳೂರಿನಲ್ಲಿ ನಡೆದಿದ್ದ ಜೆಡಿಎಸ್ ಸಮಾವೇಶದಲ್ಲಿ ಪ್ರಶ್ನೆ ಮಾಡಿದ್ದರು. ಅಲ್ಲದೇ ತಮ್ಮ ಮೇಲಿನ ಒತ್ತಡ ಬಗ್ಗೆ ತಿಳಿಸಿ ಜನರ ಕೆಲಸ ಮಾಡಲಾ? ಅಥವಾ ವರ್ಗಾವಣೆ ಮಾಡಿಕೊಂಡು ಕುಳಿತುಕೊಳ್ಳ ಬೇಕೇ ಎಂದು ಪ್ರಶ್ನೆ ಮಾಡಿದ್ದರು. ಇತ್ತ ಸಮ್ಮಿಶ್ರ ಸರ್ಕಾರದಲ್ಲಿ ಅಧಿಕಾರಿಗಳನ್ನು ಅವರ ಶಾಸಕರು ವರ್ಗಾವಣೆ ಮಾಡಿಕೊಳ್ಳುತ್ತಾರೆ. ನಮ್ಮ ಜನರ ಕೆಲಸ ಆಗಬೇಕಾದರೆ ನನಗೆ ಮಾಹಿತಿ ನೀಡಿ ಎಂದು ಸಿದ್ದರಾಮಯ್ಯ ಅವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದರು.

ಏನಿದು ವರ್ಗಾವಣೆ ಪ್ರಕರಣ:
ದೊಸ್ತಿ ಸರ್ಕಾರದ ನಾಯಕರ ನಡುವಿನ ಮುಸುಕಿನ ಗುದ್ದಾಟದಿಂದ ಪೊಲೀಸ್ ಅಧಿಕಾರಿಗಳು ಈಗ ತ್ರಿಶಂಕು ಸ್ಥಿತಿಯಲ್ಲಿ ಸಿಲುಕಿದ್ದಾರೆ. ಅದರಲ್ಲೂ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಜಿ.ಟಿ. ದೇವೇಗೌಡ ನಡುವಿನ ಫೈಟ್‍ನ ಭಾಗವಾಗಿಯೇ ಈ ಪ್ರಹಸನ ನಡೆಯುತ್ತಿದೆ ಎನ್ನುವ ವಿಚಾರ ಈಗ ಜಿಲ್ಲೆಯಲ್ಲಿ ಚರ್ಚೆಯಾಗುತ್ತಿದೆ.

ಇನ್ಸ್ ಪೆಕ್ಟರ್ ಸಿ.ವಿ. ರವಿ ಅವರನ್ನು ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗ ಮಾಡಿಸಿದ್ದು ಬೇರೆ ಯಾರು ಅಲ್ಲ. ಸಚಿವ ಜಿ.ಟಿ. ದೇವೇಗೌಡರಿಂದಾಗಿ ರವಿ ಮೈಸೂರಿಗೆ ವರ್ಗವಾಗಿ ಬಂದಿದ್ದರಂತೆ. ಯಾವಾಗ ಜಿಟಿಡಿ ಅವರ ಕಡೆಯವರು ಮೈ.ಗ್ರಾ. ಪೊಲೀಸ್ ಠಾಣೆಗೆ ಇನ್ಸ್ ಪೆಕ್ಟರ್ ಆಗಿ ನಿಯೋಜನೆಗೊಂಡರೋ ತಕ್ಷಣ ಮಾಜಿ ಸಿಎಂ ಸಿದ್ದರಾಮಯ್ಯ ಅದಕ್ಕೆ ತಡೆ ಹಾಕಿಸಿದ್ದರು. ಕಾರಣ ಅವರ ಪುತ್ರ ಯತೀಂದ್ರ ಪ್ರತಿನಿಧಿಸುವ ವರುಣಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆ ಬರುತ್ತದೆ. ಹೀಗಾಗಿ ಜಿಟಿಡಿ ಕಡೆಯವರು ಇನ್ಸ್ ಪೆಕ್ಟರ್ ಆಗುವುದು ಬೇಡ ಎನ್ನುವುದು ಸಿದ್ದರಾಮಯ್ಯನವರ ಪಟ್ಟಾಗಿತ್ತು. ಪರಿಣಾಮ ಸಿವಿ ರವಿ ವರ್ಗಾವಣೆಯನ್ನೇ ರದ್ದು ಮಾಡಿಸಿ ಉಡುಪಿಗೆ ಎತ್ತಂಗಡಿ ಮಾಡಿಸಿದ್ದರಂತೆ. ಈಗ ಮತ್ತೆ ಜಿಟಿಡಿ ತಮ್ಮ ಪ್ರಭಾವ ಬಳಸಿಕೊಂಡು ಆ ವರ್ಗಾವಣೆಯನ್ನು ರದ್ದು ಮಾಡಿಸಿದ್ದಾರೆ. ಈಗ ರವಿಯರು ಉಡುಪಿಗೂ ಹೋಗದೇ, ಮೈಸೂರಿಗೂ ಹೋಗಲು ಸಾಧ್ಯವಾಗದೇ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಕುಳಿತುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.

ಜನವರಿ 29 ರಂದು ಉಡುಪಿಗೆ ವರ್ಗಾವಣೆ ಆದೇಶ ಜಾರಿಯಾದ ಒಂದೇ ದಿನದಲ್ಲಿ ವರ್ಗಾವಣೆ ರದ್ದಾಗಿ ಬೆಂಗಳೂರಿನ ಪೊಲೀಸ್ ಪ್ರಧಾನ ಕಚೇರಿಯಲ್ಲಿ ವರದಿ ಕೊಳ್ಳುವಂತೆ ಆದೇಶವಾಗಿದೆ. ಕೇವಲ ಇದೊಂದೇ ಪ್ರಕರಣ ಅಲ್ಲದೇ ಹಲವು ವರ್ಗಾವಣೆ ಪ್ರಕರಣಗಳು ರಾಜ್ಯದಲ್ಲಿ ನಡೆಯುತ್ತಿದ್ದು, ಮೈಸೂರು ಪ್ರಕರಣ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *