– ಸಾವಿನ ಸಂಖ್ಯೆ 2ಕ್ಕೆ ಏರಿಕೆ
ಮೈಸೂರು: ಅಂಬಾವಿಲಾಸ ಅರಮನೆ ಮುಂಭಾಗದ ದ್ವಾರದಲ್ಲಿ ಗುರುವಾರ ರಾತ್ರಿ ಸಂಭವಿಸಿದ ಹಿಲಿಯಂ ಗ್ಯಾಸ್ ಸಿಲಿಂಡರ್ ಸ್ಫೋಟ (Mysuru Helium Cylinder Blast) ಪ್ರಕರಣದ ತನಿಖೆ ಚುರುಕು ಪಡೆದುಕೊಂಡಿದೆ. ಹತ್ತು ಹಲವು ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದು, ಇದಕ್ಕೆ ಎನ್‌ಐಎ (NIA) ತಂಡ ಕೂಡ ಎಂಟ್ರಿಯಾಗಿದೆ. ಈ ನಡುವೆ ಸ್ಫೋಟದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಮಂಜುಳಾ ಎಂಬ ಮಹಿಳೆ ಸಾವನ್ನಪ್ಪಿದ್ದಾರೆ.
ಸ್ಫೋಟದ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಮಂಜುಳಾ ಕೆ.ಆರ್ ಆಸ್ಪತ್ರೆಯಲ್ಲಿ (KR Hospital) ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಮೃತರ ಸಂಖ್ಯೆ 2ಕ್ಕೆ ಏರಿಕೆಯಾಗಿದೆ. ಇದನ್ನೂ ಓದಿ: ಸಲೀಂ ಹೊಟ್ಟೆಪಾಡಿಗಾಗಿ ಕೆಲಸ ಮಾಡ್ತಿದ್ದ, ಆತಂಕ ಪಡುವ ಅಗತ್ಯವಿಲ್ಲ: ಮಹದೇವಪ್ಪ
ಇನ್ನೂ ಮತ್ತೋರ್ವ ಗಾಯಾಳು ಲಕ್ಷ್ಮಿ ಪರಿಸ್ಥಿತಿ ಕೂಡ ಗಂಭೀರವಾಗಿದ್ದು, ಉಳಿಯುವುದು ಕಷ್ಟ ಎಂದು ವೈದ್ಯರ (Doctors) ಮೂಲಗಳು ಹೇಳಿರುವುದಾಗಿ ತಿಳಿದುಬಂದಿದೆ. ಇದನ್ನೂ ಓದಿ: 15 ದಿನಗಳಿಂದ ಲಾಡ್ಜ್‌ನಲ್ಲಿ ವಾಸ – ಮೈಸೂರು ಸ್ಫೋಟಕ್ಕೆ ಎನ್‌ಐಎ ಎಂಟ್ರಿ
ಸ್ಫೋಟದ ತೀವ್ರತೆಗೆ ಮೃತದೇಹ ಛಿದ್ರ-ಛಿದ್ರ
ಮೈಸೂರು ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ನಿನ್ನೆ ಸಂಜೆ ಹೀಲಿಯಂ ಸಿಲಿಂಡರ್ ಸ್ಫೋಟಗೊಂಡಿದೆ. ಇದರ ಪರಿಣಾಮ ಬಲೂನ್ ಮಾರುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಅಲ್ಲದೇ ಈ ಘಟನೆಯಲ್ಲಿ ಐವರು ಗಾಯಗೊಂಡಿದ್ದಾರೆ. ಕ್ರಿಸ್ಮಸ್ ಹಿನ್ನೆಲೆಯಲ್ಲಿ ಪ್ರವಾಸಿಗರು ಹೆಚ್ಚಿದ್ದಾಗ ಈ ಘಟನೆ ನಡೆದಿದೆ. ಘಟನೆಯಲ್ಲಿ ಗಾಯಗೊಂಡವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಫೊಟದ ಸದ್ದು 1 ಕಿ.ಮೀ. ವ್ಯಾಪ್ತಿಯವರೆಗೂ ಕೇಳಿಸಿದ್ದು, ಅರಮನೆ ಸೇರಿದಂತೆ ಸುತ್ತಲಿನ ಜನರು ಬೆಚ್ಚಿ ಬಿದ್ದಿದ್ದಾರೆ. ಬೆಂಗಳೂರಿನ ಕಾಮಾಕ್ಷಿ ಪಾಳ್ಯದ ಲಕ್ಷ್ಮೀ, ನಂಜನಗೂಡಿನ ಮಂಜುಳಾ, ಕೋಲ್ಕತ್ತದ ಶಮಿನಾ ಶಬಿಲ್, ರಾಣೆಬೆನ್ನೂರಿನ ಕೊಟ್ರೆಶ್ ಗುಟ್ಟೆ, ಹಾಗೂ ಮತ್ತೊಂದು ಮಗು ಗಾಯಾಗೊಂಡಿದ್ದರು. ಉತ್ತರ ಪ್ರದೇಶದ ಕನ್ನೌಜ್ ಜಿಲ್ಲೆಯ ಶುಕ್ಲನ್‌ಪೂರ್ವಾ ಗ್ರಾಮದ ಸಲೀಂ ಮೃತ ವ್ಯಕ್ತಿ ಯಾಗಿದ್ದಾನೆ. ಈತ ತಿಂಗಳ ಹಿಂದೆ ಬಲೂನ್ ಮಾರಲು ಮೈಸೂರಿಗೆ ಬಂದಿದ್ದು, ಲಾಡ್ಜ್‌ನಲ್ಲಿ ವಾಸವಿದ್ದ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಸಿಲಿಂಡರ್ ಸ್ಫೋಟ| ಯಾವತ್ತೂ ಕಾಣಿಸದವನು ನಿನ್ನೆ ಅರಮನೆ ಬಳಿ ಕಾಣಿಸಿದ್ದು ಹೇಗೆ – ಸಲೀಂ ಹಿನ್ನೆಲೆ ಕೆದಕಲು ಮುಂದಾದ ಖಾಕಿ
ಹೀಲಿಯಂ ಸಿಲಿಂಡರ್ ಸ್ಫೋಟದ ಹಿಂದೆ ಹತ್ತಾರು ಅನುಮಾನ
ಮೈಸೂರಿನ ಅರಮನೆ ಮುಂಭಾಗ ಸ್ಫೋಟ ಪ್ರಕರಣಕ್ಕೆ ಸಂಬಂಧ ಹಿಲಿಯಂ ಗ್ಯಾಸ್ ಸಿಲಿಂಡರ್ ಸ್ಫೋಟದ ಹಿಂದೆ ಹಲವು ಅನುಮಾನ ಮೂಡಿದೆ. ಬಲೂನ್ ಮಾರಾಟಗಾರ ಮೇಲೆ ನಾನಾ ಅನುಮಾನ ಶುರುವಾಗಿದೆ. ಒಂದು ತಿಂಗಳ ಹಿಂದಷ್ಟೇ ಮೈಸೂರಿಗೆ ಬಂದಿದ್ದ ಸಲೀಂ ನಿನ್ನೆಯೇ ಮೊದಲ ಬಾರಿಗೆ ಅರಮನೆಯ ಬಳಿ ಬಲೂನ್ ಮಾರಾಟ ಮಾಡಲು ಬಂದಿದ್ದ. ಸ್ಫೋಟಕ್ಕೆ ಅರ್ಧ ಗಂಟೆ ಮುಂಚೆಯಷ್ಟೇ ಅರಮನೆ ಬಳಿ ನಿಂತಿದ್ದ ಜಯಮಾರ್ತಾಂಡ ಗೇಟ್ ಬಳಿ ಬಂದ ಕೆಲವೇ ಕ್ಷಣಗಳಲ್ಲಿ ಸ್ಫೋಟ ಉಂಟಾಗಿದೆ. ಆತ ಅರಮನೆ ಮುಂಭಾಗ ಯಾವತ್ತೂ ಬಲೂನ್ ಮಾರುತ್ತಿರಲಿಲ್ಲ ಅಂತ ಪ್ರತ್ಯಕ್ಷದರ್ಶಿ ಹೇಳಿದ್ದಾರೆ. ಜೊತೆಗೆ ನಿನ್ನೆಯೂ ಆ ಸ್ಥಳದಲ್ಲಿ ಆತ ನಿಂತಿರಲಿಲ್ಲ ಎಂದು ಪ್ರತ್ಯಕ್ಷದರ್ಶಿ ಮಾಹಿತಿ ನೀಡಿದ್ದಾರೆ.

