Mysuru Dasara | ಜಂಬೂ ಸವಾರಿ ರೂಟ್‌ ಮ್ಯಾಪ್‌ ಹೇಗಿದೆ?

Public TV
2 Min Read

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) ಜಂಬೂ ಸವಾರಿಗೆ ಕ್ಷಣಗಣನೆ ಶುರುವಾಗಿದ್ದು, ಅಂಬಾವಿಲಾಸ ಅರಮನೆಯಲ್ಲಿ ಭರದ ಸಿದ್ಧತೆ ನಡೆದಿದೆ.

ಈ ನಡುವೆ ಜಿಲ್ಲಾಡಳಿತ ಜಂಬೂ ಸವಾರಿ ಮಾರ್ಗವನ್ನ ಬದಲಾವಣೆ ಮಾಡಿದೆ. ಅರಮನೆ ಆವರಣದಲ್ಲಿ ಜಂಬೂ ಸವಾರಿ ಮಾರ್ಗ ಬದಲಾವಣೆ ಮಾಡಿದ್ದು, ಹೊಸ ಸಂಪ್ರದಾಯ ಆರಂಭಿಸಲು ಮೈಸೂರು ಜಿಲ್ಲಾಡಳಿತ ಮುಂದಾಗಿದೆ.

ಪ್ರತಿ ಬಾರಿ ಅಂಬಾರಿ ಕಟ್ಟಿದ ನಂತರ ಆನೆ ನೇರವಾಗಿ ಪುಷ್ಪಾರ್ಚನೆಗೆ ಬಂದು ನಿಲ್ಲುತ್ತಿತ್ತು. ಆದ್ರೆ ಈ ಬಾರಿ ಪುಷ್ಪಾರ್ಚನೆಗೆ ಮೊದಲೇ ಸುಮಾರು 400 ಮೀಟರ್ ಸಂಚಾರ ಮಾಡುವಂತೆ ಪ್ಲಾನ್ ಮಾಡಲಾಗಿದೆ. ಅಂಬಾರಿ ಕಟ್ಟಿದ ನಂತರ ಅಭಿಮನ್ಯುವು ತ್ರಿನಯನೇಶ್ವರ ದೇವಸ್ಥಾನ ತಲುಪಿ, ಅಲ್ಲಿಂದ ಶ್ವೇತ ವರಹ ದೇವಸ್ಥಾನ ಬಳಿ ಸಾಗಿ ನಂತರ ಗಣ್ಯರ ಬಳಿ ಬಂದು ನಿಲ್ಲುತ್ತದೆ. ಹೀಗಾಗಿ ಗಣ್ಯರ ಪುಷ್ಪಾರ್ಚನೆಗೆ ಮುನ್ನವೇ 10 ಸಾವಿರಕ್ಕೂ ಹೆಚ್ಚು ಮಂದಿಗೆ ಅಂಬಾರಿಯಲ್ಲಿ ಅಲಂಕಾರ ಭೂಷಿತಳಾದ ತಾಯಿ ಚಾಮುಂಡಿ ದರ್ಶನ ಕೊಡಲಿದ್ದಾಳೆ.

10 ರಿಂದ 15 ಸಾವಿರ ಆಸನ ವ್ಯವಸ್ಥೆ:
ಇನ್ನೂ ಕೋವಿಡ್‌ ಸಮಯ ಹೊರತುಪಡಿಸಿ ಉಳಿದೆಲ್ಲ ವರ್ಷ ಜಂಬೂ ಸವಾರಿಗೆ ಅರಮನೆ ಆವರಣದಲ್ಲಿ 25 ರಿಂದ 30 ಸಾವಿರ ಜನರಿಗೆ ಆಸನದ ವ್ಯವಸ್ಥೆ ಮಾಡಲಾಗುತ್ತಿತ್ತು. ಆದ್ರೆ ಈ ಬಾರಿ 10 -15 ಸಾವಿರ ಹೆಚ್ಚುವರಿ ಆಸನಗಳ ವ್ಯವಸ್ಥೆಗೆ ಜಿಲ್ಲಾಡಳಿತ ಪ್ಲ್ಯಾನ್‌ ಮಾಡಿದೆ. ಹಾಗಾಗಿ 40 ಸಾವಿರ ಆಸನಗಳ ವ್ಯವಸ್ಥೆಗೆ ತೀರ್ಮಾನಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಮೆರವಣಿಗೆಯಲ್ಲಿ 9 ಆನೆಗಳು ಭಾಗಿ:
ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳ ಮೆರವಣಿಗೆಗೆ ಸಂಬಂಧಿಸಿದಂತೆ ಮಾತನಾಡಿರುವ ಡಿಸಿಎಫ್ ಪ್ರಭುಗೌಡ, ಕಳೆದ 50 ದಿನಗಳಿಂದ ಆನೆಗಳಿಗೆ ತಯಾರಿ ನೀಡಿದ್ದೇವೆ, ಯಾವುದೇ ಸಮಸ್ಯೆಗಳಿಲ್ಲ. ಯಶಸ್ವಿಯಾಗಿ ಜಂಬೂ ಸವಾರಿ ಮಾಡುವ ಕಾನ್ಪಿಡೆನ್ಸ್‌ನಲ್ಲಿದ್ದೇವೆ. ನಿನ್ನೆ ಸಂಜೆ ಕೂಡ ಮಾವುತ, ಕಾವಾಡಿಗರ ತಂಡದ ಜೊತೆ ಸಭೆ ಮಾಡಿದ್ದೇವೆ ಅವರೆಲ್ಲರೂ ಕೂಡ ಉತ್ಸಾಹದಲ್ಲಿದ್ದಾರೆ. 14 ಆನೆಗಳ ಪೈಕಿ 9 ಆನೆಗಳು ಮೆರವಣಿಗೆಯಲ್ಲಿ ಭಾಗಿಯಾಗಲಿವೆ. 5 ಆನೆಗಳು ಮೀಸಲು ಆನೆಗಳಾಗಿರಲಿವೆ. ಇವು ಮೆರವಣಿಗೆಯಲ್ಲಿ ಭಾಗಿಯಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಶ್ರೀರಂಗಪಟ್ಟಣ ಜಂಬೂ ಸವಾರಿ ಮೆರವಣಿಗೆ ವೇಳೆ ಲಕ್ಷ್ಮಿ ಆನೆ ಗಲಿಬಿಲಿ ಆಗಿತ್ತು. ಅದು ಲಾರಿ ಹತ್ತೋಕೆ ಹಠ ಮಾಡಿತ್ತು. ಅದನ್ನ ಹೊರತು ಪಡಿಸಿದ್ರೆ ಜನ ನೋಡಿ ನಮ್ಮ ಆನೆಗಳು ಗಾಬರಿಯಾಗಲ್ಲ. ಆ ರೀತಿಯ ಯಾವುದೇ ತೊಂದರೆ ಇಲ್ಲ ಎಂದು ಡಿಸಿಎಫ್ ಪ್ರಭುಗೌಡ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

Share This Article