ನಾಡಹಬ್ಬ ದಸರಾ ಮಹೋತ್ಸವಕ್ಕೆ ನಾಳೆ ವಿಧ್ಯುಕ್ತ ಚಾಲನೆ – ಚಾಮುಂಡಿ ಬೆಟ್ಟದಲ್ಲಿ ಭರದ ಸಿದ್ಧತೆ

Public TV
2 Min Read

– ಬೃಹತ್ ವೇದಿಕೆ ನಿರ್ಮಾಣ, 1 ಸಾವಿರ ಆಸನದ ವ್ಯವಸ್ಥೆ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) ಮಹೋತ್ಸವಕ್ಕೆ ನಾಳೆ ವಿಧ್ಯುಕ್ತಚಾಲನೆ ಸಿಗಲಿದ್ದು, ಇಂದು ಚಾಮುಂಡಿ ಬೆಟ್ಟದಲ್ಲಿ ಭರದ ಸಿದ್ಧತೆ ಮಾಡಿಕೊಳ್ಳಲಾಗ್ತಿದೆ. ಚಾಮುಂಡೇಶ್ವರಿ ದೇವಾಲಯದ ಆವರಣದಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದೆ. ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸಿ ನಾಡಹಬ್ಬಕ್ಕೆ ಅದ್ಧೂರಿ ಚಾಲನೆ ನೀಡಲು ಜಿಲ್ಲಾಡಳಿತ ಸಜ್ಜಾಗಿದೆ.

ದಸರಾ ಸ್ವಾಗತಿಸಲು ಸಾಂಸ್ಕೃತಿಕ ನಗರಿ ಮೈಸೂರು ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ. ನಾಳೆ ಚಾಮುಂಡಿ ಬೆಟ್ಟದಲ್ಲಿ ದಸರಾ ಮಹೋತ್ಸವ ಉದ್ಘಾಟನೆ ಆಗಲಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಲೇಖಕಿ ಬಾನು ಮುಷ್ತಾಕ್ ಈ ಬಾರಿ ದಸರಾ ಉದ್ಘಾಟನೆ ನೆರವೇರಿಸಲಿದ್ದು, ಇದಕ್ಕೆ ಪರ-ವಿರೋಧ ಚರ್ಚೆ ಜೋರಾಗಿದೆ. ಇದರ ನಡುವೆ ಸರ್ಕಾರ ಬಾನು ಮುಷ್ತಾಕ್‌ರಿಂದ ದಸರಾ ಮಹೋತ್ಸವಕ್ಕೆ ಚಾಲನೆ ಕೊಡಿಸಲು ಬಿಗಿ ಬಂದೋಬಸ್ತ್ ಜೊತೆಗೆ ಬೃಹತ್ ವೇದಿಕೆ ತಯಾರಿ ಮಾಡಿದೆ. ಇದನ್ನೂ ಓದಿ: ಶ್ರೀರಂಗಪಟ್ಟಣದಿಂದ ಮೈಸೂರಿಗೆ ದಸರಾ ಬಂದಿದ್ದು ಹೇಗೆ?

ಈಗಾಗಲೇ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ಉತ್ಸವ ಮೂರ್ತಿ ಶುಚಿಗೊಳಿಸಿರುವ ಅರ್ಚಕರು, ತಾಯಿಗೆ ಹಸಿರು ಸೀರೆಯುಡಿಸಿ ತಯಾರಿ ಮಾಡಿಕೊಂಡಿದ್ದಾರೆ. ನಾಳೆ ಮುಂಜಾನೆಯಿಂದಲೇ ವಿವಿಧ ಅಭಿಷೇಕ, ಪೂಜಾಕೈಂಕರ್ಯಗಳು ನೆರವೇರಲಿದ್ದು, ಬಳಿಕ ಬೆಳ್ಳಿರಥಯಲ್ಲಿ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನ ವೇದಿಕೆಗೆ ತಂದು ಪುಷ್ಪಾರ್ಚನೆ ಮಾಡಲಿದ್ದಾರೆ. ಬೆಳಗ್ಗೆ 10:10 ರಿಂದ 10:40ರ ವೃಶ್ಚಿಕ ಶುಭ ಲಗ್ನದಲ್ಲಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಲೇಖಕಿ ಬಾನು ಮುಷ್ತಾಕ್‌ ಪುಷ್ಪಾರ್ಚನೆ ಮಾಡಿ ದಸರಾ ಉದ್ಘಾಟನೆ ಮಾಡಲಿದ್ದಾರೆ.

Banu Mushtaq

ಇನ್ನೂ ಚಾಮುಂಡೇಶ್ವರಿ ದೇವಾಲಯದ ಆವರಣದಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದ್ದು, 1 ಸಾವಿರ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ. ಮಳೆ ಹಿನ್ನೆಲೆ ಜರ್ಮನ್ ಟೆಂಟ್ ವ್ಯವಸ್ಥೆ ಮಾಡಲಾಗಿದ್ದು, ವಿವಿಐಪಿ, ವಿಐಪಿ ಹಾಗೂ ಪಾಸ್ ಹೊಂದಿದವರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ದಸರಾ ಉದ್ಘಾಟನೆ ಮುಗಿಯುವವರೆಗೂ ಚಾಮುಂಡಿಬೆಟ್ಟಕ್ಕೆ ಸಾರ್ವಜನಿಕರ ನಿರ್ಬಂಧ ಹೇರಲಾಗಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಸೇರಿ ಹಲವು ಸಚಿವರು, ಶಾಸಕರು, ಸಂಸದರು ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ಬಿಜೆಪಿ ಶಾಸಕ ಶ್ರೀವತ್ಸ, ಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಿರುದ್ಧ FIR

ದಸರಾ ಉದ್ಘಾಟನೆಗೊಂಡ ಬಳಿಕ ಹಲವು ದಸರಾ ಕಾರ್ಯಕ್ರಮಗಳಿಗೆ ನಾಳೆಯೇ ಚಾಲನೆ ಸಿಗಲಿದೆ. ಮಧ್ಯಾಹ್ನ 12.30ಕ್ಕೆ ಫಲಪುಷ್ಪ ಪ್ರದರ್ಶನ ಉದ್ಘಾಟನೆ, ಬಳಿಕ ಮಹಾರಾಜ ಕಾಲೇಜು ಮೈದಾನದಲ್ಲಿ ಆಹಾರ ಮೇಳಕ್ಕೆ ಚಾಲನೆ, ಸಂಜೆ 4ಕ್ಕೆ ದೇವರಾಜ ಅರಸು ಕ್ರೀಡಾಂಗಣದಲ್ಲಿ ದಸರಾ ಕುಸ್ತಿ ಪಂದ್ಯಾವಳಿಗೆ ಉದ್ಘಾಟನೆ ಭಾಗ್ಯ. ಅರಮನೆ ಆರವಣದಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ ಮಾಡಲಾಗುತ್ತೆ. ಸಂಜೆ 6.30ಕ್ಕೆ ಸಯ್ಯಾಜಿರಾವ್ ರಸ್ತೆಯಲ್ಲಿ ವಿದ್ಯುತ್ ದೀಪಾಲಂಕಾರ ಉದ್ಘಾಟನೆ ಭಾಗ್ಯ ಸಿಗಲಿದೆ.

ಒಟ್ಟಾರೆ, ಒಂದೆಡೆ ದಸರಾ ಉದ್ಘಾಟನೆಗೆ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದ್ರೆ ಅತ್ತ ಅರಮನೆಯಲ್ಲೂ ನಾಳೆಯಿಂದ ವಿವಿಧ ಪೂಜಾ ಕೈಂಕರ್ಯ ಹಾಗೂ ಖಾಸಗಿ ದರ್ಬಾರ್ ಆರಂಭಗೊಳ್ಳಲಿದೆ. ನವರಾತ್ರಿಯ ವೈಭವ ಕಣ್ತುಂಬಿಕೊಳ್ಳಲು ಲಕ್ಷಾಂತರ ಪ್ರವಾಸಿಗರು ಮೈಸೂರಿನತ್ತ ಬರ್ತಿದ್ದು, ಪ್ರವಾಸಿಗರ ಆಕರ್ಷಿಸಲು ಮೈಸೂರು ಸಜ್ಜಾಗಿದೆ. ಇದನ್ನೂ ಓದಿ: ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‌ ಆಹ್ವಾನಕ್ಕೆ ವಿರೋಧ; ಸುಪ್ರೀಂನಲ್ಲೂ ಅರ್ಜಿ ವಜಾ

Share This Article