ವಿಶ್ವವಿಖ್ಯಾತ ಮೈಸೂರು ದಸರಾಗೆ ಮೊದಲ ಹಂತದ ಗಜಪಯಣಕ್ಕೆ ಚಾಲನೆ

Public TV
4 Min Read

-ವನ್ಯಜೀವಿಗಳ ಸಂರಕ್ಷಣೆಗೆ ಈಶ್ವರ ಖಂಡ್ರೆ ಮನವಿ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) 2025ರ ಅಧಿಕೃತ ಕಾರ್ಯಕ್ರಮ ಸೋಮವಾರ ಶುರುವಾಗಿದೆ. ದಸರಾಗಾಗಿ ಕ್ಯಾಪ್ಟನ್ ಅಭಿಮನ್ಯು ಟೀಂ ಕಾಡಿನಿಂದ ನಾಡಿಗೆ ಆಗಮಿಸಿದ್ದು, ಆನೆಗಳ ಮೊದಲ ತಂಡಕ್ಕೆ ಹೆಚ್.ಡಿ ಕೋಟೆಯ ವೀರನಹೊಸಹಳ್ಳಿಯಲ್ಲಿ ಶುಭ ಕೋರಲಾಯಿತು. ಈ ವೇಳೆ ವನ್ಯಜೀವಿಗಳನ್ನು ಸಂರಕ್ಷಣೆ ಮಾಡುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ.ಬಿ ಖಂಡ್ರೆ (Eshwar Khandre) ಮನವಿ ಮಾಡಿದ್ದಾರೆ.

ಹುಣಸೂರು ತಾಲೂಕು ವೀರನಹೊಸಹಳ್ಳಿಯಲ್ಲಿಂದು (ಆ.4) ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ 14 ಆನೆಗಳ ಪೈಕಿ 9 ಆನೆಗಳ ಮೊದಲ ತಂಡಕ್ಕೆ ಸಾಂಪ್ರದಾಯಿಕವಾಗಿ ಪೂಜೆ ನೆರವೇರಿಸಿ, ಕಬ್ಬು, ಅಕ್ಕಿ, ಬೆಲ್ಲ ತಿನ್ನಿಸಿ ಗಜಪಯಣಕ್ಕೆ ಚಾಲನೆ ನೀಡಲಾಯಿತು. ಈ ಬಾರಿಯೂ 750 ಕೆ.ಜಿ ತೂಕದ ಅಂಬಾರಿಯನ್ನು ಹೊರಲಿರುವ ಅಭಿಮನ್ಯು, ಇಡೀ ತಂಡವನ್ನು ಮುನ್ನಡೆಸಲಿದ್ದಾನೆ. ವಿವಿಧ ಆನೆ ಶಿಬಿರಗಳಿಂದ ಆನೆಗಳನ್ನು ಆಯ್ಕೆ ಮಾಡಿರುವ ಅಧಿಕಾರಿಗಳು ಈಗಾಗಲೇ ಆನೆಗಳ ಆರೋಗ್ಯ ತಪಾಸಣೆ ಪೂರ್ಣಗೊಳಿಸಿದ್ದಾರೆ. ಆನೆ ಶಿಬಿರದಲ್ಲಿರುವ ಹೆಣ್ಣು ಆನೆಗಳ ಗರ್ಭಧಾರಣೆ ಪರೀಕ್ಷೆಗಾಗಿ ರಕ್ತಗಳ ಮಾದರಿ ಸಂಗ್ರಹಿಸಿ ಲ್ಯಾಬ್‌ನಲ್ಲಿ ಪರೀಕ್ಷೆ ಮಾಡಿಸಿ ನಂತರ ಈ ಹೆಣ್ಣಾನೆಗಳನ್ನು ದಸರಾಗೆ ಆಯ್ಕೆ ಮಾಡಲಾಗಿದೆ. ನಾಳೆ ಒಂದು ದಿನ ಮೈಸೂರಿನಲ್ಲಿ ವಿಶ್ರಾಂತಿ ಪಡೆಯಲಿರುವ ಗಜಪಡೆ ಆ.7ರಂದು ಅರಮನೆ ಪ್ರವೇಶ ಮಾಡಲಿವೆ.ಇದನ್ನೂ ಓದಿ: ತುಮಕೂರಲ್ಲಿ 19 ನವಿಲುಗಳ ಸಾವು – ತನಿಖೆಗೆ ಈಶ್ವರ್ ಖಂಡ್ರೆ ಆದೇಶ

ಮೊದಲ ತಂಡದ ಆನೆಗಳ ಪಟ್ಟಿ.
1. ಅಭಿಮನ್ಯು, ಗಂಡು : 59 ವರ್ಷ
2. ಪ್ರಶಾಂತ, ಗಂಡು : 53 ವರ್ಷ
3. ಧನಂಜಯ, ಗಂಡು : 45 ವರ್ಷ
4. ಮಹೇಂದ್ರ, ಗಂಡು : 42 ವರ್ಷ
5. ಏಕಲವ್ಯ, ಗಂಡು : 40 ವರ್ಷ
6. ಕಂಜನ್, ಗಂಡು : 26 ವರ್ಷ
7. ಭೀಮ, ಗಂಡು : 25 ವರ್ಷ
8. ಲಕ್ಷ್ಮಿ, ಹೆಣ್ಣು : 54 ವರ್ಷ
9. ಕಾವೇರಿ, ಹೆಣ್ಣು : 45 ವರ್ಷ

ಗಜಪಯಣಕ್ಕೆ ಚಾಲನೆ ನೀಡಿ ಮಾತನಾಡಿದ ಈಶ್ವರ್ ಖಂಡ್ರೆ, ಪ್ರಕೃತಿ ಪರಿಸರದ ಸಮತೋಲನಕ್ಕೆ ವನ್ಯಜೀವಿಗಳು ಅತ್ಯವಶ್ಯಕವಾಗಿದ್ದು, ಅವುಗಳ ರಕ್ಷಣೆಗೆ ನಾವೆಲ್ಲರೂ ಕಟಿಬದ್ಧರಾಗಬೇಕು. ತಂತಿ ಬೇಲಿಗಳಿಗೆ ಅಕ್ರಮವಾಗಿ ಪ್ರವಹಿಸಿದ ವಿದ್ಯುತ್ ಸ್ಪರ್ಶದಿಂದ ಆನೆಗಳು ಮೃತಪಡುತ್ತಿದ್ದರೆ, ಉರುಳಿಗೆ ಚಿರತೆಗಳು ಸಿಲುಕಿ ನರಳಾಡಿ ಸಾಯುತ್ತಿವೆ. ಇತ್ತೀಚೆಗೆ ಮಲೆ ಮಹದೇಶ್ವರ ಬೆಟ್ಟದ ವನ್ಯಜೀವಿಧಾಮದಲ್ಲಿ ವಿಷ ಪ್ರಾಶನದಿಂದ ಮೃತಪಟ್ಟಿವೆ. ಈ ಭೂಮಿಯಲ್ಲಿ ಹುಟ್ಟಿದ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ. ವನ್ಯಜೀವಿಗಳ ಜಾಗವನ್ನು ಆಕ್ರಮಿಸಿರುವ ನಾವು ಅವುಗಳನ್ನು ನಿರ್ದಯವಾಗಿ ಕೊಲ್ಲದೆ, ಅವುಗಳ ಸಂರಕ್ಷಣೆಗೆ ಸಂಕಲ್ಪ ಮಾಡಬೇಕು ಎಂದು ಹೇಳಿದರು.

ಸಫಾರಿಯಲ್ಲಿ ವನ್ಯಜೀವಿಗಳನ್ನು, ದಸರಾ ಜಂಬೂಸವಾರಿಯಲ್ಲಿ ಅಲಂಕೃತ ಆನೆಗಳನ್ನು ನೋಡಿ ಆನಂದಿಸುವ ನಾವು ಅವುಗಳ ಸಂರಕ್ಷಣೆಗೂ ಮುಂದಾಗಬೇಕು. ಹೊರ ರಾಜ್ಯದಿಂದ ಸಾವಿರಾರು ಸಂಖ್ಯೆಯಲ್ಲಿ ದನಕರುಗಳನ್ನು ತಂದು ನಮ್ಮ ರಾಜ್ಯದ ಅರಣ್ಯ ಪ್ರದೇಶದಲ್ಲಿ ಮೇಯಿಸುತ್ತಿರುವುದರಿಂದ ವನ್ಯಜೀವಿಗಳಿಗೆ ಕಾಡಿನಲ್ಲಿ ಆಹಾರ ಲಭಿಸದಂತಾಗಿದೆ. ಹೀಗಾಗಿ ಹೊರರಾಜ್ಯದಿಂದ ತಂದು ದನಕರು ಮೇಯಿಸುವುದನ್ನು ಮಾತ್ರವೇ ನಿಷೇಧಿಸಲು ಕ್ರಮವಹಿಸಲಾಗಿದೆ ಎಂದು ತಿಳಿಸಿದರು.

ಆನೆ ಸೇರಿದಂತೆ ವನ್ಯಜೀವಿ-ಮಾನವ ಸಂಘರ್ಷ ನಿಯಂತ್ರಣಕ್ಕೆ ಸರ್ಕಾರ ಅನೇಕ ಕ್ರಮ ಕೈಗೊಂಡಿದೆ. ಸೌರ ತಂತಿಬೇಲಿ, ಟೆಂಟಕಲ್ ಫೆನ್ಸಿಂಗ್, ಆನೆ ಕಂದಕಗಳ ಸಮರ್ಪಕ ನಿರ್ವಹಣೆ ಮಾಡಲು ನಾನು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದೇನೆ. ನಾನು ಅರಣ್ಯ ಸಚಿವನಾಗುವ ಮೊದಲು ಅಂದರೆ 2023ರ ಜೂನ್ ವರೆಗೆ ರಾಜ್ಯದಲ್ಲಿ 312.918 ಕಿ.ಮೀ ಮಾತ್ರ ರೈಲ್ವೆ ಬ್ಯಾರಿಕೇಡ್ ಅಳವಡಿಸಲಾಗಿತ್ತು. ನಾನು ಸಚಿವನಾದ ಬಳಿಕ ಕಳೆದ 2 ವರ್ಷದಲ್ಲಿ 115.085 ಕಿ.ಮೀ ರೈಲ್ವೆ ಬ್ಯಾರಿಕೇಡ್ ಕಾಮಗಾರಿ ಪೂರ್ಣಗೊಳಿಸಲಾಗಿದ್ದು, ಇನ್ನೂ 193 ಕಿ.ಮೀ. ರೈಲ್ವೆ ಬ್ಯಾರಿಕೇಡ್ ಅಳವಡಿಕೆಗೆ ಅನುಮೋದನೆ ನೀಡಲಾಗಿದೆ. ಮುಂದಿನ ಒಂದೆರೆಡು ವರ್ಷದಲ್ಲಿ 500 ಕೋಟಿ ರೂ. ವೆಚ್ಚದಲ್ಲಿ ಉಳಿದ ಕಡೆಯೂ ರೈಲ್ವೆ ಬ್ಯಾರಿಕೇಡ್ ಅಳವಡಿಸಲಾಗುವುದು ಎಂದು ಅಭಿಪ್ರಾಯಪಟ್ಟರು.

ಪ್ರಕೃತಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದ ಅವರು ಅರಣ್ಯವನ್ನು ರಕ್ಷಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಆದಿವಾಸಿಗಳಿಗೆ, ಅರಣ್ಯವಾಸಿಗಳ ಸಮಸ್ಯೆಗೆ ಸ್ಪಂದಿಸಲಾಗುವುದು. ಜಂಟಿ ಸಮೀಕ್ಷೆ ನಡೆಸಿ 2015ಕ್ಕೆ ಮೊದಲು ಪಟ್ಟಾ ಜಮೀನೂ ಸೇರಿ 3 ಎಕರೆಗಿಂತ ಕಡಿಮೆ ಅರಣ್ಯ ಭೂಮಿಯಲ್ಲಿ ಉಳುಮೆ ಮಾಡುತ್ತಿರುವ ಹಾಗೂ ಮನೆ ನಿರ್ಮಿಸಿಕೊಂಡಿರುವವರಿಗೆ ತೊಂದರೆ ನೀಡದಂತೆ ಸೂಚಿಸಲಾಗಿದೆ. ನವರಾತ್ರಿ ಮತ್ತು ದಸರಾ ಮಹೋತ್ಸವ ಕೆಡುಕಿನ ಮೇಲೆ ಒಳಿತಿನ ದಿಗ್ವಿಜಯದ ವಿಜಯೋತ್ಸವವಾಗಿದ್ದು, ನಾವು ಎಲ್ಲ ದುಶ್ಚಟ, ದುರ್ಗಣಗಳ ವಿರುದ್ಧ ವಿಜಯೋತ್ಸವ ಆಚರಿಸೋಣ. ನಾಡದೇವಿ ಚಾಮುಂಡೇಶ್ವರಿ ಎಲ್ಲರಿಗೂ ಶುಭ ತರಲಿ ಎಂದರು.

ಅರ್ಜುನ ಪ್ರಶಸ್ತಿ ಪ್ರದಾನ:
ಆನೆ ಸೆರೆ ಕಾರ್ಯಾಚರಣೆ, ಆನೆಗಳನ್ನು ಪಳಗಿಸುವುದು ಮತ್ತು ಯಶಸ್ವಿಯಾಗಿ ವನ್ಯಜೀವಿ ಸೆರೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಉತ್ತಮ ಕಾರ್ಯ ಮಾಡಿದ ಮಾವುತರು, ಕಾವಾಡಿ ಹಾಗೂ ಅರಣ್ಯ ಸಿಬ್ಬಂದಿಗೆ ಇನ್ನು ಮುಂದೆ ಅರ್ಜುನ ಆನೆ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುವುದು ಎಂದ ಈಶ್ವರ ಖಂಡ್ರೆ, ಮೊದಲ ಸಾಲಿನ ಪ್ರಶಸ್ತಿಯನ್ನು ಭೀಮ ಆನೆಯ ಮಾವುತ ಹಾಗೂ ಕಾವಾಡಿಗಳಾದ ಗುಂಡ ಮತ್ತು ನಂಜುಂಡಸ್ವಾಮಿಯವರಿಗೆ ಪ್ರದಾನ ಮಾಡಿದರು. ಈ ಪ್ರಶಸ್ತಿ ತಲಾ 10,000 ರೂ. ಗೌರವಧನ ಹಾಗೂ ಪ್ರಶಂಸಾ ಪತ್ರ ಒಳಗೊಂಡಿರುತ್ತದೆ ಎಂದು ಅವರು ಪ್ರಕಟಿಸಿದರು. ಸಮಿತಿ ಒಂದನ್ನು ರಚಿಸಿ ಅರ್ಹ ಸಾಧಕರನ್ನ ಈ ಪ್ರಶಸ್ತಿಗೆ ಪ್ರತಿವರ್ಷ ಆಯ್ಕೆ ಮಾಡಲಾಗುವುದು, ಗಜ ಪಯಣದ ದಿನ ಪ್ರಶಸ್ತಿ ಪ್ರದಾನ ನೆರವೇರಲಿದೆ ಎಂದು ತಿಳಿಸಿದರು.

ಇದೆ ಸಂದರ್ಭದಲ್ಲಿ ಈ ಬಾರಿಯ ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳ ಕಿರುಪರಿಚಯದ. ಕೈಪಿಡಿ ಮತ್ತು ಪೋಸ್ಟರ್ ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ರೇಷ್ಮೆ ಮತ್ತು ಪಶುಸಂಗೋಪನಾ ಖಾತೆ ಸಚಿವ ಕೆ. ವೆಂಕಟೇಶ್, ಶಾಸಕರುಗಳಾದ ಹರೀಶ್ ಗೌಡ, ತನ್ವೀರ್ ಸೇಠ್, ರವಿಶಂಕರ್, ಕಾಡಾ ಅಧ್ಯಕ್ಷರಾದ ಮರಿಗೌಡ, ಅರಣ್ಯಪಡೆ ಮುಖ್ಯಸ್ಥರಾದ ಮೀನಾಕ್ಷಿ ನೇಗಿ ಮತ್ತಿತರರು ಪಾಲ್ಗೊಂಡಿದ್ದರು.ಇದನ್ನೂ ಓದಿ: ನೇಹಾ ಹತ್ಯೆ ಕೇಸ್ – ಆರೋಪಿ ಫಯಾಜ್ ಜಾಮೀನು ಅರ್ಜಿ ವಜಾ

Share This Article