Bagmati Express Train Accident | 19 ಮಂದಿಯಲ್ಲಿ ಇಬ್ಬರಿಗೆ ಗಂಭೀರ ಗಾಯ – ಸೋಮಣ್ಣ

Public TV
2 Min Read

ಬೆಂಗಳೂರು: ಮೈಸೂರಿನಿಂದ ಬಿಹಾರ ದರ್ಬಾಂಗ್‌ಗೆ (Mysuru-Darbhanga Bagmati Express) ತೆರಳುತ್ತಿದ್ದ ಬಾಗಮತಿ ಎಕ್ಸ್‌ಪ್ರೆಸ್‌ ರೈಲು ಅಪಘಾತದಲ್ಲಿ 19 ಮಂದಿ ಗಾಯಗೊಂಡಿದ್ದಾರೆ ಎಂದು ರೈಲ್ವೇ ಖಾತೆಯ ರಾಜ್ಯ ಸಚಿವ ವಿ ಸೋಮಣ್ಣ (V Somanna) ತಿಳಿಸಿದ್ದಾರೆ.

ಪಬ್ಲಿಕ್‌ ಟಿವಿಗೆ ಪ್ರತಿಕ್ರಿಯೆ ನೀಡಿದ ಅವರು, 19 ಮಂದಿಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಇಲ್ಲಿಯವರೆಗೆ ಯಾವ ಸಾವು ನೋವಿನ ಬಗ್ಗೆ ವರದಿ ಬಂದಿಲ್ಲ. ಈ ಅಪಘಾತದಲ್ಲಿ ದೊಡ್ಡ ಅನಾಹುತವಾಗಿಲ್ಲ ಎಂದು ಹೇಳಿದರು.

ಎಲ್ಲಾ ಪ್ರಯಾಣಿಕರನ್ನೂ ಮೆಮು ರೈಲಿನ ಮೂಲಕ ಶಿಫ್ಟ್ ಮಾಡಲಾಗಿದೆ. ಶನಿವಾರ ಪ್ರಯಾಣಿಕರು ಎಲ್ಲೆಲ್ಲಿಗೆ ತಲುಪಬೇಕು ಅಲ್ಲಿಗೆ ವ್ಯವಸ್ಥೆ ಮಾಡಲಾಗುತ್ತದೆ. ದೇವರ ದಯೆಯಿಂದ ದೊಡ್ಡ ಅನಾಹುತ ತಪ್ಪಿದೆ. ಯಾವ ಕಾರಣಕ್ಕೆ ಅಪಘಾತವಾಯ್ತು ಎನ್ನುವುದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಮೈಸೂರಿನಿಂದ ಹೊರಟಿದ್ದ ರೈಲು ಅಪಘಾತ; ದಕ್ಷಿಣ ರೈಲ್ವೆಯಿಂದ ಸಹಾಯವಾಣಿ ನಂಬರ್ ಬಿಡುಗಡೆ

ಶುಕ್ರವಾರ ಮೈಸೂರಿನಿಂದ ದರ್ಭಾಂಗ್‌ಗೆ ಬಾಗಮತಿ ಎಕ್ಸ್‌ಪ್ರೆಸ್ ರೈಲು ಪ್ರಯಾಣಿಸುತ್ತಿತ್ತು. ರಾತ್ರಿ 8:30ರ ವೇಳೆ ಚೆನ್ನೈ ಸಮೀಪದ ಕವರೈಪೆಟ್ಟೈ ರೈಲು ನಿಲ್ದಾಣದ ಬಳಿ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಎಕ್ಸ್‌ಪ್ರೆಸ್‌ ರೈಲಿನ 12 ಬೋಗಿಗಳು ಹಳಿತಪ್ಪಿದ್ದು, 2 ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ.

 

ಕರ್ನಾಟಕದಿಂದ (Karnataka) 1 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣ ಬೆಳೆಸಿದ್ದರು. ರಾಜ್ಯದ ಪ್ರಯಾಣಿಕರಿದ್ದ ಬೋಗಿಗೂ ಹಾನಿಯಾಗಿದೆ. ಬಿಹಾರ ಕಡೆ ಹೊರಟಿದ್ದ ಪ್ರಯಾಣಿಕರಿಗೆ ಬದಲಿ ರೈಲಿನ ವ್ಯವಸ್ಥೆ ಕಲ್ಪಿಸಲು ಕ್ರಮವಹಿಸಲಾಗಿದೆ.

Share This Article