– ತುಕ್ಕು ಹಿಡಿಯುತ್ತಿವೆ 3,242 ಸೈಕಲ್‍ಗಳು
ಮೈಸೂರು: ರಾಜ್ಯದಲ್ಲಿ ಜಲ ಪ್ರವಾಹ ಜನರ ಇಡೀ ಬದುಕು ತಂದು ಬೀದಿಗೆ ನಿಲ್ಲಿಸಿತ್ತು. ಜಲ ಪ್ರವಾಹ ತಂದಿಟ್ಟ ಸಂಕಟಗಳು ಈಗ ಒಂದೊಂದಾಗಿ ಬಯಲಾಗುತ್ತಿವೆ. ಕಪಿಲಾ ನದಿಯ ಪ್ರವಾಹದಿಂದ ರೈತರ ಬೆಳೆ ನಾಶವಾಗಿ, ಬಹಳಷ್ಟು ಜನರ ಮನೆಗಳ ನೆಲ ಕಚ್ಚಿವೆ. ಇದರ ಜೊತೆಗೆ ನಂಜನಗೂಡು ಭಾಗದ ವಿದ್ಯಾರ್ಥಿಗಳಿಗೂ ಕಷ್ಟ ಎದುರಾಗಿದೆ.
ಕಪಿಲಾ ನದಿಯ ಭೋರ್ಗರೆತದ ಪರಿಣಾಮ ನಂಜನಗೂಡು ಪಟ್ಟಣವೇ ಜಲಾವೃತವಾಗಿತ್ತು. ಮನೆಗಳು, ದೇವಸ್ಥಾನಗಳು, ಶಾಲೆಗಳು, ಸರ್ಕಾರಿ ಕಚೇರಿಗಳು ನೀರಿನಲ್ಲಿ ಮುಳುಗಿವೆ. ನಂಜನಗೂಡಿನ ಹಲವು ಬಡಾವಣೆಗಳು ಜಲಾವೃತವಾಗಿದ್ದವು. ಜನರು ಸರ್ಕಾರದ ತಾತ್ಕಾಲಿಕ ಆಶ್ರಯ ಕೇಂದ್ರದಲ್ಲಿ ದಿನದೂಡಿದ್ದರು. ಈಗ ಕಪಿಲಾ ಪ್ರವಾಹ ತಗ್ಗಿದೆ. ಆದರೆ ಮನೆಗಳಲ್ಲಿ ಮಾತ್ರ ನೀರು ಇನ್ನು ಹಾಗೆಯೇ ಇದೆ.
ಪ್ರವಾಹ ಕಡಿಮೆಯಾದ ಕಾರಣ ಜನರು ಮನೆಗಳಿಗೆ ವಾಪಸ್ಸಾಗಿದ್ದಾರೆ. ಆದರೆ ಮನೆಯ ಒಳಗೆ ಈಗಲೂ ಎರಡು ಅಡಿಯಷ್ಟು ನೀರು ನಿಂತಿದೆ. ಅದನ್ನು ಹೊರಗೆ ಹಾಕಲು ಪರದಾಡುತ್ತಿದ್ದಾರೆ. ಮತ್ತೊಂದು ಕಡೆ ಪ್ರವಾಹದಿಂದಾಗಿ ಸರ್ಕಾರದ ಸೈಕಲ್ ಯೋಜನೆ ವಿದ್ಯಾರ್ಥಿಗಳಿಗೆ ತಲುಪಿಲ್ಲ. ಒಂದಲ್ಲ ಎರಡಲ್ಲ ಬರೋಬ್ಬರಿ 3,242 ಸೈಕಲ್‍ಗಳು ನಂಜನಗೂಡಿನ ನಾಗಮ್ಮ ಶಾಲೆಯ ಆವರಣದಲ್ಲಿ ತುಕ್ಕು ಹಿಡಿಯುತ್ತಿವೆ. ತಾಲೂಕಿನ 72 ಶಾಲೆಗಳಿಗೆ ವಿತರಿಸಲು ಈ ಸೈಕಲ್ ತರಿಸಲಾಗಿತ್ತು. ಮಳೆ ಹಿನ್ನೆಲೆಯಲ್ಲಿ ಸೈಕಲ್ ವಿತರಣೆ ನಡೆದಿಲ್ಲ ಎಂದು ಶಿಕ್ಷಣ ಸಂಯೋಜಕ ಸಿದ್ದರಾಜು ಹೇಳಿದ್ದಾರೆ.
ಒಟ್ಟಿನಲ್ಲಿ ಪ್ರವಾಹ ನಿಂತಿದೆ. ಶೈಕ್ಷಣಿಕ ವರ್ಷ ಆರಂಭವಾಗಿ ಆರು ತಿಂಗಳು ಕಳೆದಿದೆ. ಈಗಲಾದರೂ ಅಧಿಕಾರಿಗಳು ತುರ್ತಾಗಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಬೇಕಿದೆ ಎಂದು ವಿದ್ಯಾರ್ಥಿಗಳ ಪೋಷಕರು ಒತ್ತಾಯಿಸುತ್ತಿದ್ದಾರೆ.