ನನಗೆ ನಾನೇ ಗಾಡ್ ಫಾದರ್ – ಸಿಎಂ ಆಗುವ ಆಸೆ ಬಿಚ್ಚಿಟ್ಟ ಸಿ.ಟಿ.ರವಿ

Public TV
1 Min Read

ಮೈಸೂರು: ನನಗೆ ನಾನೇ ಗಾಡ್ ಫಾದರ್ ಎಂದು ಪ್ರವಾಸೋದ್ಯಮ ಖಾತೆ ಸಚಿವ ಸಿ.ಟಿ ರವಿ ಇಂದು ಮೈಸೂರಿನಲ್ಲಿ ಹೇಳಿದ್ದಾರೆ.

ನಾನು ಶಾಶ್ವತ ಮಾಜಿ ಮುಖ್ಯಮಂತ್ರಿಯಾಗಿರಬೇಕು ಎಂಬ ಸಿ.ಟಿ.ರವಿ ಹೇಳಿಕೆ ವಿಚಾರವಾಗಿ ಸ್ವತಃ ಅವರೇ ಸ್ಪಷ್ಟನೆ ನೀಡಿದ್ದು, ಮುಖ್ಯಮಂತ್ರಿ ಚಂದ್ರು ಇದ್ದ ಕಾರಣ ಆ ಮಾತನ್ನು ಹೇಳಿದೆ. ಅವರಿಗೆ ಅವಿಶ್ವಾಸದ ಕಾಟ ಇಲ್ಲ. ಅವರು ಶಾಶ್ವತ ಮುಖ್ಯಮಂತ್ರಿ ಈ ಕಾರಣಕ್ಕೆ ನಾನು ಆ ಮಾತನ್ನು ಹೇಳಿದೆ ಎಂದು ತಿಳಿಸಿದರು.

ಭಗವಂತನ ಇಚ್ಛೆ ಏನಿದೆ ಎಂದು ಗೊತ್ತಿಲ್ಲ, ನಾನು ಪಕ್ಷ ನಿಷ್ಠೆ ಇಟ್ಟುಕೊಂಡವನು. ಇದನ್ನು ಯಾರು ಪ್ರಶ್ನೆ ಮಾಡುವ ವಿಚಾರ ಇಲ್ಲ. ಕೆಲವರಿಗೆ ಗಾಡ್ ಫಾದರ್ ಇದ್ದಾರೆ ಆದರೆ ನನಗೆ ನಾನೇ ಗಾಡ್ ಫಾದರ್. ಮುಂದಿನ ಮೂರು ವರ್ಷಗಳ ಕಾಲ ಯಡಿಯೂರಪ್ಪನವರೇ ಮುಖ್ಯಮಂತ್ರಿ. ಅದಾದ ಮೇಲೆ ಏನಾಗುತ್ತೆ ಗೊತ್ತಿಲ್ಲ. ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ ಉಪಮುಖ್ಯಮಂತ್ರಿಯಾಗುತ್ತಾರೆ ಎಂದು ಯಾರಿಗೆ ಗೊತ್ತಿತ್ತು. ಯಾವ ಜ್ಯೋತಿಷಿಯು ಹೇಳಿರಲಿಲ್ಲ. ಹಾಗೇ ನಾನು ಮಾರ್ಮಿಕವಾಗಿ ಹೇಳಿದೆ ಅಷ್ಟೆ ಎಂದು ತನ್ನ ಸಿಎಂ ಆಸೆಯನ್ನು ವ್ಯಕ್ತಪಡಿಸಿದರು.

ಆನಂದ್ ಸಿಂಗ್‍ಗೆ ಅರಣ್ಯ ಖಾತೆ ನೀಡಿದಕ್ಕೆ ಕಾಂಗ್ರೆಸ್ ಆಕ್ಷೇಪ ವಿಚಾರವಾಗಿ ಮಾತನಾಡಿ, ಅವರು ಈಗಷ್ಟೇ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅಧಿಕಾರ ದುರ್ಬಳಕೆಯ ಪ್ರಶ್ನೆಯೇ ಬರಲ್ಲ ಎಂದು ಸಮರ್ಥಿಸಿಕೊಂಡರು. ನಂತರ ಕಾಂಗ್ರೆಸ್ಸಿನಲ್ಲಿ ಇದ್ದಷ್ಟು ಕಾಲ ಅವರು ಪತಿವ್ರತರಾಗಿದ್ದರು. ಬಿಟ್ಟು ಬಂದ ಮೇಲೆ ಅವರು ಕೆಟ್ಟು ಹೋದರಾ ಎಂದು ಪ್ರಶ್ನಿಸಿ ವ್ಯಂಗ್ಯವಾಡಿದರು.

ಪುಲ್ವಾಮಾ ದಾಳಿ ವಿಚಾರವಾಗಿ ರಾಹುಲ್ ಗಾಂಧಿ ಟೀಕೆ ಬಗ್ಗೆ ಮಾತನಾಡಿ, ಇದೇ ಮೊದಲ ಬಾರಿಗೆ ಅವರು ಟೀಕೆ ಮಾಡುತ್ತಿಲ್ಲ. ನಮ್ಮ ಸಾಂಸ್ಕೃತಿಕ ವ್ಯವಸ್ಥೆಯನ್ನು ನಿರಂತವಾಗಿ ಅನುಮಾನವಾಗಿ ಕಾಂಗ್ರೆಸ್ ನೋಡುತ್ತಿದೆ. ಇಂತವರಿಂದ ಏನನ್ನು ನಿರೀಕ್ಷೆ ಮಾಡಲು ಸಾಧ್ಯ, ಜನರೆ ಇದಕ್ಕೆ ತೀರ್ಮಾನಿಸುತ್ತಾರೆ ಎಂದರು.

ಎಂಎಲ್‍ಸಿ ಚುನಾವಣೆಯಲ್ಲಿ ನಮಗೆ ಹೆಚ್ಚುವರಿಯಾಗಿ 25 ಮತ ಬರುತ್ತೆ. ನಮ್ಮಲ್ಲಿ ಯಾವುದೇ ಬಂಡಾಯ ಇಲ್ಲ ನೋಡುತ್ತೀರಿ ಗೆಲುವಿಗೆ ಬೇಕಾದ ಮತಕ್ಕಿಂತ ಹೆಚ್ಚುವರಿ ಮತ ಬರುತ್ತೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಜೆಡಿಎಸ್-ಕಾಂಗ್ರೆಸ್ ಆಪರೇಷನ್ ಗುಟ್ಟುಬಿಟ್ಟು ಕೊಟ್ಟರು.

Share This Article
Leave a Comment

Leave a Reply

Your email address will not be published. Required fields are marked *