ಬೆಳಗಾವಿ ಇಂದೂ ನಮ್ಮದೇ, ನಾಳೆಯೂ ನಮ್ಮದೇ: ಸಚಿವ ಸಿ.ಸಿ. ಪಾಟೀಲ್

Public TV
2 Min Read

– 100 ಕೋಟಿ ವೆಚ್ಚದಲ್ಲಿ ಆನೆ ತಡೆಗೋಡೆ ನಿರ್ಮಾಣ

ಮೈಸೂರು: ಮಹಾರಾಷ್ಟ್ರ ಸರ್ಕಾರ ಬೆಳಗಾವಿ ವಿಚಾರದಲ್ಲಿ ಗಡಿ ಕ್ಯಾತೆ ಆರಂಭಿಸಿರುವ ಬಗ್ಗೆ ಅರಣ್ಯ ಸಚಿವ ಸಿ.ಸಿ.ಪಾಟೀಲ್ ಪ್ರತಿಕ್ರಿಯೆ ನೀಡಿದ್ದು, ಬೆಳಗಾವಿ ಇಂದು ಮತ್ತು ನಾಳೆಯೂ ನಮ್ಮದೇ ಎಂದು ಹೇಳಿದ್ದಾರೆ.

ನಗರದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉದ್ಧವ್ ಠಾಕ್ರೆ ನೂತನವಾಗಿ ಮುಖ್ಯಮಂತ್ರಿಗಳಾಗಿದ್ದಾರೆ. ಅವರು ಅಲ್ಲಿಯ ಜನರನ್ನು ಓಲೈಕೆ ಮಾಡಲು ಯತ್ನಿಸುತ್ತಿದ್ದಾರೆ. ಆದರೆ ಈ ವಿಚಾರದಲ್ಲಿ ಕರ್ನಾಟಕ ಯಾವುದೇ ರಾಜಿಗೂ ಸಿದ್ಧವಿಲ್ಲ ಎಂದು ಸ್ಪಷ್ಟಪಡಿಸಿದರು.

ಕಳೆದ ವರ್ಷ ಬಂಡೀಪುರದಲ್ಲಿ ಉಂಟಾದ ಭಾರೀ ಪ್ರಮಾಣದ ಬೆಂಕಿ ಅವಘಡ ಹಿನ್ನೆಲೆಯಲ್ಲಿ ಈ ಬಾರಿ ರಾಜ್ಯ ಸರಕಾರ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಮುಂಜಾಗ್ರತವಾಗಿ ವಿಶೇಷ ಸೇನಾ ಹೆಲಿಕಾಪ್ಟರ್ ಬಳಸಲು ಚಿಂತಿಸಲಾಗಿದೆ. ಇದಕ್ಕೆ ಹೆಚ್ಚು ಹಣ ಖರ್ಚಾಗಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಕೇಂದ್ರ ಸಚಿವ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ. ಕಳೆದ ಬಾರಿ ಬೆಂಕಿ ರೇಖೆ ನಿರ್ಮಾಣವಾಗದೆ ಅವಘಡ ಸಂಭವಿಸಿತ್ತು. ಆದರೆ ಈ ಬಾರಿ ಸಂಪೂರ್ಣ ಬೆಂಕಿ ರೇಖೆ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.

ಅರಣ್ಯ ಸಿಬ್ಬಂದಿಗಳಿಗೆ ಮುಖ್ಯಮಂತ್ರಿಗಳ ಮೆಡಲ್ ನೀಡದ ವಿಚಾರದ ಬಗ್ಗೆಯೂ ಸಚಿವರು ಪ್ರತಿಕ್ರಿಯಿಸಿ, ಈ ವಿಚಾರ ನನ್ನ ಗಮನಕ್ಕೆ ಬಂದಿದೆ. ಉಪ ಚುನಾವಣೆ ಹಿನ್ನೆಲೆಯಲ್ಲಿ ಈ ಬಗ್ಗೆ ಗಮನಿಸಲು ಸಾಧ್ಯವಾಗಿರಲಿಲ್ಲ. ಆದಷ್ಟು ಬೇಗ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ದಿನಾಂಕ ನಿಗದಿ ಪಡಿಸುತ್ತೇನೆ ಎಂದರು.

ಮಾನವ ಮತ್ತು ವನ್ಯಜೀವಿ ಸಂಘರ್ಷವನ್ನು ತಪ್ಪಿಸಲು 100 ಕೋಟಿ ರೂ. ವೆಚ್ಚದಲ್ಲಿ ಆನೆ ತಡೆಗೋಡೆ ನಿರ್ಮಾಣ ಮಾಡಲಾಗುತ್ತೆ. ಕಾಡಂಚಿನ ಪ್ರದೇಶಲ್ಲಿ ಆನೆ ತಡೆಗೋಡೆ ನಿರ್ಮಾಣ ಮಾಡಲಾಗುವುದು. ರೈಲ್ವೇ ಕಂಬಿಗಳು, ಸೋಲಾರ್ ಫೆನ್ಸ್ ಹಾಗೂ ಕಂದಕಗಳ ಮೂಲಕ ತಡೆಗೋಡೆ ನಿರ್ಮಾಣ ಮಾಡಲು ರೂಪು ರೇಷೆ ಸಿದ್ಧಪಡಿಸುತ್ತಿದ್ದೇವೆ. ಮೊದಲ ಹಂತದಲ್ಲಿ ಸಂಘರ್ಷ ಇರುವ ಕಡೆ ಮಾಡಲಾಗುತ್ತೆ. ನಂತರ ಉಳಿದಂತ ಸ್ಥಳಗಳಲ್ಲಿ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.

ಇದೇ ವೇಳೆ ಅವರು, ಸಚಿವ ಸಂಪುಟ ವಿಸ್ತರಣೆ ಕುರಿತ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು. ಇದು ಸಿಎಂಗೆ ಬಿಟ್ಟ ವಿಚಾರ. ನಾನು ಇದರ ಬಗ್ಗೆ ಪ್ರತಿಕ್ರಿಯೆ ನೀಡಲ್ಲ ಎಂದ್ರು. ಡಿಸಿಎಂ ಹುದ್ದೆ ಬೇಕು, ಬೇಡ ಎನ್ನುವ ವಿಚಾರಕ್ಕೂ ಪ್ರತಿಕ್ರಿಯೆ ನೀಡಲಿಲ್ಲ. ಕೆಲವು ವಿಚಾರಗಳ ಬಗ್ಗೆ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂದರು.

Share This Article
Leave a Comment

Leave a Reply

Your email address will not be published. Required fields are marked *