ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ – ಗ್ಯಾರಂಟಿಯನ್ನು ಟೀಕಿಸಿದ ಬೆನ್ನಲ್ಲೇ ದೇಶಪಾಂಡೆ ಸ್ಪಷ್ಟನೆ

Public TV
1 Min Read

ಬೆಂಗಳೂರು: ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಿ, ವಾಸ್ತವದ ವಿರುದ್ಧವಾಗಿ ಸುದ್ದಿ ಪ್ರಕಟವಾಗಿದೆ ಎಂದು ಮಾಜಿ ಸಚಿವ ಆರ್‌ವಿ ದೇಶಪಾಂಡೆ (RV Deshpande) ಹೇಳಿದ್ದಾರೆ.

ನಾನು ಸಿಎಂ ಆಗಿದ್ದರೆ ಪಂಚ ಗ್ಯಾರಂಟಿ ಯೋಜನೆಗಳನ್ನು (Gurantee Sddcheme) ಅನುಷ್ಠಾನ ಮಾಡುತ್ತಿರಲಿಲ್ಲ ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಅವರು ಸ್ಪಷ್ಟನೆ ನೀಡಿದ್ದಾರೆ.

 

ಸ್ಪಷ್ಟನೆಯಲ್ಲಿ ಏನಿದೆ?
ದಾಂಡೇಲಿಯಲ್ಲಿ ನಡೆದ ಸಭೆಯಲ್ಲಿ ನಾನು ಮಾತನಾಡುವ ಸಂದರ್ಭದಲ್ಲಿ ಐದು ಗ್ಯಾರಂಟಿ ಯೋಜನೆಗಳ ಕುರಿತು ಹೇಳುವಾಗ ನಾನು ಮುಖ್ಯಮಂತ್ರಿಯವರ ಸಮೀಪದಲ್ಲಿರುವವನು, ಆದರೆ ಸಿದ್ದರಾಮಯ್ಯನವರು ಯಾವ ಯೋಜನೆಗಳನ್ನು ಘೋಷಿಸುತ್ತಾರೆ ಎಂಬುದು ನನಗೂ ಗೊತ್ತಿರುವುದಿಲ್ಲ. ಸಿದ್ದರಾಮಯ್ಯನವರು ಪಳಗಿದ ನಾಯಕರು, ಜನನಾಯಕರಾಗಿದ್ದಾರೆ. ಬಡವರ ಪರವಾಗಿ ಹೋರಾಡುವ ನಿಜವಾದ ನಾಯಕರು. ಅವರು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿ, ಒಳ್ಳೆಯ ಆಡಳಿತ ನೀಡುತ್ತಿರುವುದು ಅವರ ಶಕ್ತಿ. ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿರುವುದು ಅವರ ಜನಪರಮನೋಭಾವದಿಂದಾಗಿದೆ ಎಂಬುದು ನನ್ನ ಮಾತಿನ ತಾತ್ಪರ್ಯವಾಗಿತ್ತು.  ಇದನ್ನೂ ಓದಿ:  ನಾನು ಸಿಎಂ ಆಗಿದ್ದಿದ್ರೆ ʻಪಂಚ ಗ್ಯಾರಂಟಿʼ ಅನುಷ್ಠಾನ ಮಾಡ್ತಿರಲಿಲ್ಲ, ಗ್ಯಾರಂಟಿ ಹೊರೆಯಾಗಿದೆ: ಆರ್.ವಿ.ದೇಶಪಾಂಡೆ

ಈ ಮಾತಿನ ಉದ್ದೇಶ ಗ್ಯಾರಂಟಿ ಯೋಜನೆಗಳ ವಿರುದ್ಧ ಮಾತನಾಡುವುದಲ್ಲ, ಬದಲಿಗೆ ಸಿದ್ದರಾಮಯ್ಯನವರು ಬಡವರ ಪರವಾಗಿ, ಜನಪರ ನಿಲುವು ಹೊಂದಿರುವ ನಾಯಕರು ಎಂಬುದನ್ನು ಶ್ಲಾಘಿಸುವುದು ಆಗಿತ್ತು. ಅವರು ಯಾವಾಗಲೂ ಜನರ ಹಿತದೃಷ್ಟಿಯಿಂದ ನಿರ್ಧಾರಗಳನ್ನು ಕೈಗೊಳ್ಳುವ ಹಿರಿಯ ಹಾಗೂ ಅನುಭವಸಂಪನ್ನ ನಾಯಕರು. ನನ್ನ ಮಾತುಗಳ ಮೂಲಕ ನಾನು ಅವರ ಜನಪರ ನೀತಿಗಳನ್ನು ಮೆಚ್ಚಿಕೊಂಡಿದ್ದು ಹೊರತು ಟೀಕಿಸಿದ್ದಲ್ಲ. ಅಲ್ಲದೇ ನಾನು ಈ ಸಭೆಯಲ್ಲಿ ಗ್ಯಾರಂಟಿಗಳಿಂದ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎನ್ನುವ ಮಾತನ್ನು ಎಲ್ಲಿಯೂ ನಾನು ಉಲ್ಲೇಖಿಸಿರುವುದಿಲ್ಲ ಎಂದಿದ್ದಾರೆ.

Share This Article