ಪತ್ನಿಯಿಂದಾಗಿ ರಾಜಕಾರಣಕ್ಕೆ ಬಂದಿಲ್ಲ: ರಘುರಾಂ ರಾಜನ್

Public TV
2 Min Read

ಚೆನ್ನೈ: ನಾನು ಪತ್ನಿಯಿಂದಾಗಿ ರಾಜಕಾರಣಕ್ಕೆ ಬಂದಿಲ್ಲ ಎಂದು ಆರ್ ಬಿಐ ಮಾಜಿ ಗವರ್ನರ್ ರಘುರಾಂ ರಾಜನ್ ಸಂದರ್ಶನದಲ್ಲಿ ಹೇಳಿದ್ದಾರೆ.

ಚೆನ್ನೈಗೆ ಆಗಮಿಸಿದ್ದ ರಘುರಾಂ ರಾಜನ್ ಅವರನ್ನು ಮಾಧ್ಯಮವೊಂದು ಸಂದರ್ಶನ ಮಾಡಿತ್ತು. ಸಂದರ್ಶನದಲ್ಲಿ ಮುಗುಳ್ನಗುತ್ತಲೇ ಪತ್ನಿಯಿಂದಾಗಿ ನಾನು ರಾಜಕೀಯಕ್ಕೆ ಬಂದಿಲ್ಲ. ಒಂದು ವೇಳೆ ರಾಜಕೀಯಕ್ಕೆ ಹೋದ್ರೆ ನನ್ನನ್ನು ಬಿಟ್ಟು ಹೋಗ್ತೀನಿ ಅಂತಾ  ಪತ್ನಿ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿಸಿದರು.

ಈ ವೇಳೆ ರಾಜಕೀಯ ನಿಮ್ಮ ಶೈಲಿ ಅಲ್ಲವೇ ಎಂದು ಕೇಳಿದಾಗ, ರಾಜಕೀಯ ಎಲ್ಲ ಕಡೆಯೂ ಒಂದೇ ಆಗಿದೆ. ಕೇವಲ ಭಾಷಣ ಮಾಡಿ ಮತ ಕೇಳುವುದು ನನ್ನ ಶೈಲಿ ಅಲ್ಲ. ಒಂದು ವೇಳೆ ದೇಶಕ್ಕೆ ನನ್ನ ಅಗತ್ಯವಿದ್ರೆ ಖಂಡಿತಾ ಕೆಲಸ ಮಾಡುತ್ತೇನೆ. ದೇಶಕ್ಕಾಗಿ ಕೆಲಸ ಮಾಡುವುದರಿಂದ ಒಂದು ರೀತಿಯ ಖುಷಿ ಸಿಗುತ್ತದೆ. ಕೆಲವರು ನನ್ನ ಬಳಿ ಸಲಹೆ ಕೇಳಿದಾಗ ಖುಷಿ ಆಗುತ್ತದೆ ಎಂದರು.

ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಮಂತ್ರಿ ಆಗುತ್ತೀರಿ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಇದು ನಿಜವೇ ಎಂದು ಪ್ರಶ್ನೆ ಮಾಡಲಾಗಿತ್ತು. ಕಲಿಸುವುದು (ಟೀಚಿಂಗ್) ನನ್ನ ಪ್ರಾಥಮಿಕ ಕೆಲಸ. ಇದೇ ಕೆಲಸ ನನಗೆ ಅಚ್ಚು ಮೆಚ್ಚು. ಕೆಲವು ದಿನಗಳ ಹಿಂದೆ ನಾನು ಬರೆದ ಪುಸ್ತಕ ‘ದ ಥರ್ಡ್ ಪಿಲ್ಲರ್’ ಪ್ರಕಟಗೊಂಡಿದೆ. ಈಗ ಎಲ್ಲಿದ್ದೇನೋ ಅಲ್ಲಿ ಖುಷಿಯಾಗಿದ್ದೇನೆ ಅಂತಾ ಹೇಳುವ ಮೂಲಕ ಮಂತ್ರಿ ಆಗಲ್ಲ ಎಂಬುದನ್ನು ಸ್ಪಷ್ಟಪಡಿಸಿದರು.

ದೇಶದಲ್ಲಿ ಹೊಸ ಸರ್ಕಾರ ರಚನೆಗೊಂಡಾಗ ಅಥವಾ ಹಳೆಯ ಸರ್ಕಾರವೇ ಪುನರ್ ರಚನೆಯಾದಾಗ ಮೊದಲಿಗೆ ನಮ್ಮಲ್ಲಿ ಲಭ್ಯವಿರುವ ಸಂಪನ್ಮೂಲಗಳ ಬಗ್ಗೆ ವಿಚಾರ ಮಾಡಬೇಕು. ನಿರುದ್ಯೋಗ ಸಮಸ್ಯೆ ಕೇವಲ ಭಾರತದಲ್ಲಿ ಮಾತ್ರ ಇಲ್ಲ. ವಿಶ್ವದ ಬಹುತೇಕ ರಾಷ್ಟ್ರಗಳು ನಿರುದ್ಯೋಗ ಸಮಸ್ಯೆಯನ್ನು ಎದುರಿಸುತ್ತಿವೆ. ದೇಶ ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಹಲವು ವಿಧಾನಗಳು ನಮ್ಮೆಲ್ಲರ ಮುಂದಿವೆ. ಈ ಕುರಿತಾಗಿ ವಿಶ್ವವಿದ್ಯಾನಿಲಯಗಳಲ್ಲಿ ಸಂಶೋಧನೆಗಳು ನಡೆಯಬೇಕಿದೆ. ಆದ್ರೆ ಈ ರೀತಿಯ ಸಂಶೋಧನೆಗಳು ನಡೆಯುತ್ತಿರೋದು ಮಾತ್ರ ನನಗೆ ಕಾಣಿಸುತ್ತಿಲ್ಲ ಎಂದು ರಘುರಾಂ ರಾಜನ್ ಬೇಸರ ವ್ಯಕ್ತಪಡಿಸಿದರು.

ಕೊನೆಯದಾಗಿ ಪತ್ನಿ ಬಗ್ಗೆ ಹೇಳಿ ಎಂದಾಗ, ನನ್ನ ಪತ್ನಿಯ ಹೆಸರು ರಾಧಿಕಾ ರಾಜನ್, ರಾಧಿಕಾ ಓರ್ವ ಹೆಚ್ಚು ಓದಿದ ಮಹಿಳೆಯಾಗಿದ್ದಾರೆ. ದೆಹಲಿಯ ಐಐಟಿಯಲ್ಲಿ ಬಿಟೆಕ್, ಅಹಮದಾಬಾದ್‍ ಐಐಎಂ ನಿಂದ ಪಿಜಿಡಿಬಿಎಂ ಮತ್ತು ಎಂಐಟಿ ಸೊಲನ್ ಸ್ಕೂಲ್ ಆಫ್ ಮ್ಯಾನೇಜ್‍ಮೆಂಟ್ ನಿಂದ ಪಿಎಚ್‍ಡಿ ಪಡೆದಿದ್ದಾರೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *