ಬೆಂಗಳೂರು: ನನ್ನ ಮಗ ಯಾವುದೇ ತಪ್ಪು ಮಾಡಿಲ್ಲ. ನನ್ನನ್ನ ರಾಜಕೀಯವಾಗಿ ಮುಗಿಸಲು ನಮ್ಮವರೇ ನಮ್ಮ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ, ಬಿಜೆಪಿ ಶಾಸಕ ಪ್ರಭು ಚೌಹಾಣ್ (Prabhu Chauhan) ತಿಳಿಸಿದ್ದಾರೆ.
ತಮ್ಮ ಮತ್ತು ತಮ್ಮ ಪುತ್ರನ ಮೇಲೆ ಮಹಿಳಾ ಆಯೋಗಕ್ಕೆ ದೂರು ದಾಖಲಾಗಿರುವ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನನ್ನ ಮಗ ಏನು ತಪ್ಪು ಮಾಡಿಲ್ಲ. ನನ್ನನ್ನ ರಾಜಕೀಯವಾಗಿ (Politics) ಮುಗಿಸಬೇಕು ಅಂತ ನಮ್ಮವರೇ ಪಿತೂರಿ ಮಾಡ್ತಿದ್ದಾರೆ. ಯಾರು ಇದರ ಹಿಂದೆ ಯಾರಿದ್ದಾರ ಎನ್ನುವುದು ಗೊತ್ತಿದೆ. ಸೂಕ್ತ ಸಮಯದಲ್ಲಿ ನಾನು ದಾಖಲಾತಿ ಬಿಡುಗಡೆ ಮಾಡುತ್ತೇನೆ ಎಂದು ತಿಳಿಸಿದರು.
ಆ ಹುಡುಗಿ ಜೊತೆ ನಿಶ್ಚಿತಾರ್ಥ ನಡೆದಿದ್ದು ಸತ್ಯ. ಆದರೆ ನನ್ನ ಮಗ ಆಕೆಯನ್ನ ದುರ್ಬಳಕೆ ಮಾಡಿದ್ದಾನೆ ಎನ್ನುವುದು ಸುಳ್ಳು. ಆಕೆ ನನಗೂ ಮಗಳು ಇದ್ದ ಹಾಗೇ. ಅದ್ದೂರಿಯಾಗಿ ನಾವು ಎಂಗೇಜ್ ಮೆಂಟ್ ಮಾಡಿದ್ವಿ. ಎರಡು ಕುಟುಂಬ ಸೇರಿಯೇ ಮದುವೆ ರದ್ದು ಮಾಡಿದ್ದೇವೆ ಎಂದರು. ಇದನ್ನೂ ಓದಿ: ಮದ್ವೆಯಾಗ್ತೀನಿ ಅಂತ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡ ಆರೋಪ – ಮಾಜಿ ಸಚಿವ ಪ್ರಭು ಚೌಹಾಣ್ ಪುತ್ರನ ವಿರುದ್ಧ ದೂರು
ಹುಡುಗಿ ಅವರ ಕುಟುಂಬದ ಜೊತೆ ಒಂದು ವರ್ಷದ ಹಿಂದೆಯೇ ಮಾತುಕತೆ ಆಗಿ ಒಪ್ಪಿಗೆಯಿಂದಲೇ ಮದುವೆ ರದ್ದು ಮಾಡಿದ್ದೇವೆ. ಈಗ ನಮ್ಮವರೇ ನನ್ನ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ. ಹುಡುಗಿ ಮನೆಗೆ ಯಾರು ಹೋಗಿ ಕುಮ್ಮಕ್ಕು ಕೊಟ್ಟಿದ್ದಾರೆ ನನಗೆ ಗೊತ್ತಿದೆ. ಅವರ ಮನೆಗೆ ಅವರು ಹೋಗಿರೋ ಫೋಟೋ ನನ್ನ ಬಳಿ ಇದೆ. ನನ್ನ ಮಗ ಏನು ತಪ್ಪು ಮಾಡಿಲ್ಲ. ಮಹಿಳಾ ಆಯೋಗ ನೋಟಿಸ್ ಕೊಡಲಿ ಉತ್ತರ ಕೊಡ್ತೀವಿ. ನಾವು ಕೂಡಾ ಕಾನೂನು ಹೋರಾಟ ಮಾಡ್ತೀವಿ ಅಂತ ತಿಳಿಸಿದರು.
ನಾನು ಸಮಾಜದ ಮುಖಂಡ ಇದ್ದೇನೆ. ನನ್ನ ವಿರುದ್ದ ಇದು ಪಿತೂರಿ. ನನ್ನ ಮಗ ಏನು ತಪ್ಪು ಮಾಡಿಲ್ಲ.ಆಕೆ ಏನೇನು ಮೊಬೈಲ್ ಚಾಟ್ ಮಾಡಿದ್ಲು ಅಂತ ಅವರ ಅಪ್ಪ-ಅಮ್ಮನಿಗೆ ತೋರಿಸಿದ್ವಿ. ಆದಾದ ಬಳಿಕ ಮದುವೆ ರದ್ದು ಮಾಡುವ ಬಗ್ಗೆ ನಿರ್ಧಾರ ಮಾಡಿದ್ದೇವೆ. ಈಗ ನನ್ನ ಮಗನ ವಿರುದ್ದ ಸುಮ್ಮನೆ ದೂರು ನೀಡಿದ್ದಾರೆ. ನಾನು ಈಗ ಮುಂಬೈನಲ್ಲಿದ್ದು ಬಂದ ಕೂಡಲೇ ಸುದ್ದಿಗೋಷ್ಟಿ ಮಾಡಿ ಎಲ್ಲಾ ಮಾಹಿತಿ ಕೊಡುತ್ತೇನೆ ಎಂದು ಹೇಳಿದರು.