ಪ್ರೇಮ ನೌಕೆಯ ಕಿಟಕಿ ಅಂಚಲ್ಲಿ ಸಿಕ್ಕ ಕಾಡು ಮಲ್ಲಿಗೆ ಹೂ!

Public TV
3 Min Read

ಚೆನ್ನಾಗಿದಿಯಾ ಬಂಗಾರ… ನಾನಂತ್ರೂ ಸೂಪರ್‌ ಆಗಿದಿನಿ.. ಇವತ್ತು ನಮ್ಮ ಲವ್‌ (Love) ಜರ್ನಿ ಬಗ್ಗೆ ನಿನಗೆ ಗೊತ್ತಿಲ್ದೇ ಇರೋ ಒಂದು ವಿಚಾರ ಹೇಳ್ಬೇಕು ಅನ್ನಿಸ್ತು..! ಅದ್ಕೆ ಒಂದ್‌ ಲೆಟರ್‌ ಹಾಕೋಣ ಅಂತ. ನೀನು ಇದನ್ನ ಓದಿ ವಾಪಸ್‌ ಬರಿಬೇಕು ಮತ್ತೆ, ಸರಿ ವಿಷಯಕ್ಕೆ ಬರ್ತಿನಿ..

ವಿಭಾ ಅವತ್ತು ನೆನಪಿದಿಯಾ ನಿನಗೆ? ಮಂಗಳೂರಿಂದ (Mangaluru) ನಾನು ಸಾಗರಕ್ಕೆ ಹೊರಟಿದ್ದೆ. ಅದೇ ಬಸ್‌ಲ್ಲಿ ನೀನು ಇದ್ದೆ… ನಿನ್ನ ಪಕ್ಕದಲ್ಲಿ ಸೀಟ್‌ ಖಾಲಿ ಇದ್ರೂ ನಾನು ಕೂತ್ಕೊಳ್ಳದೇ.. ನಿನ್ನನ್ನ ಮಾತಾಡಿಸದೇ ಹಿಂದಿನ ಸೀಟಲ್ಲಿ ಕೂತಿದ್ದೆ. ಆಗಲೂ ತುಂಬಾ ಪ್ರಯತ್ನಪಟ್ಟೆ ನೀನು ತಿರುಗಿ ತೇಜಸ್ವಿ ಅಂತ ನನ್ನ ಮಾತಾಡಿಸ್ತಿಯೇನೋ ಅಂತ.. ! ಇದೆಲ್ಲ ಆಗಿ ಸುಮಾರು ಐದಾರು ವರ್ಷ ಆಯ್ತು.. ಈ ವಿಷಯ ಯಾವತ್ತೂ ಚರ್ಚೆಗೆ ಬರಲೇ ಇಲ್ಲ. ಈಗ ಯಾಕೆ ಆ ಕತೆ ಬರೆದು ನಿನಗೆ ಕಳಿಸ್ತಿದಿನಿ ಅಂತಾನ.. ಮ್ಯಾಟ್ರಿದೆ.. ವಿಭಾ!

ಇವತ್ತು ಮತ್ತೆ ಅದೇ ದಾರಿಯಲ್ಲಿ ಸಾಗರಕ್ಕೆ ಬಂದೆ. ಆದ್ರೆ ಅವತ್ತು ಇದ್ದ ಹಾಗೆ ನೀನು ಮುಂದೆ ಇರಲಿಲ್ಲ. ನಾನೇ ನಿನ್ನನ್ನ ಮುಂದೆ ಕರ್ಕೊಂಡು ಬಂದು ಕೂರಿಸಿದ್ದೆ! ಆಗೆಲ್ಲ ಆ ನೆನಪು ನನ್ನ ಸುತ್ತ ಸುಳಿದಾಡ್ತಿದ್ವು.. ಅವತ್ತು ನೀನಾಗಿನೇ ಮಾತಾಡಿಸಲಿ ಅಂತ ಜೋರಾಗಿ ಕೆಮ್ಮಿದ್ದು… ನನ್ನ ದ್ವನಿ ಕೇಳಲಿ ಅಂತ ಸುಮ್ನೆ ಮೊಬೈಲ್‌ನಲ್ಲಿ ಯಾರ ಜೊತೆನೋ ಮಾತಾಡಿದ ಹಾಗೇ ನಟಿಸಿದ್ದು..! ತುಂಬಾ ಪ್ರಯತ್ನ ಪಟ್ಟಿದ್ದೆ ನೀನು ಮಾತಾಡ್ಲಿ ಅಂತ. ನೀನು ಮಾತ್ರ ಯಾರೇನೋ ಅಂತ ಸುಮ್ನೆ ಇದ್ದೆ.. ಅದ್ರಲ್ಲಿ ಈ ಹಾಳಾದ ಮಾಸ್ಕ್‌ ಬೇರೆ ಇತ್ತಲ್ಲ ಮುಖ ಕಾಣ್ಸಿದ್ರೂ ಮಾತಾಡ್ತಿದ್ಯೋ ಏನೋ? ಗೊತ್ತಿಲ್ಲ. ಆದ್ರೆ ಮಾಸ್ಕ್‌ ಕೊರೋನಾ ಅಂತ ಹಾಕಿದ್ದಲ್ಲ… ಗಡ್ಡ, ಮೀಸೆ ತೆಗದು ಬಿಟ್ಟಿದ್ದೆ.. ನನ್ನ , ಮುಖ ನನಗೇ ನೋಡೋಕಾಗ್ತಿರಲಿಲ್ಲ ಅದ್ಕೆ ಹಾಕಿದ್ದೆ! ಅದರಲ್ಲೂ ನೀನು ರಮ್ಯಾ ಹತ್ರ ಅವನು ಗಡ್ಡ ಬಿಟ್ರೆ ಚೆನ್ನಾಗಿ ಕಾಣ್ತಾನೆ ಅಂತ ಹೇಳಿದ್ಯಂತೆ.. ಅದನ್ನ ಅವಳು ನನಗೆ ಹೇಳಿದ್ಲು! ಇದನ್ನೂ ಓದಿ: ಅವಳ ಮೂಗಿನ ತುದಿ ಕೋಪ ನಂಗಿಷ್ಟ!

ಅವತ್ತು, ನನಗೆ ಮಾತ್ರ ನೀನು ಇರೋದು ಯಾಕ್‌ ಗೊತ್ತಾಯ್ತೋ ಏನೋ? ನಿನಗೆ ಗೊತ್ತಾಗಲಿಲ್ವಲ್ಲ ಅಂತ ಆಗ ತುಂಬಾ ಬೇಜಾರ್‌ ಆಗಿದ್ದೆ. ಆದ್ರೆ ಇವತ್ತು ನಾನು ಬರಬೇಕಾದ್ರೆ ʻನೀನು ಮತ್ತೆ ಸಿಕ್ಕಿದ್ದು ಮಾತ್ರ ನನಗೆ ತುಂಬಾ ಖುಷಿ ಆಯ್ತು!ʼ ಹಿಂದಿನ ಕಿಟಕಿ ಬದಿಯ ಆ ಸೀಟಿನಿಂದ ಆಗಾಗ ಕಾಣುವ ಆ ಬಿಳಿ ಮೋಡದ ನಿನ್ನ ಕೆನ್ನೆ.. ನಿನಗೆ ಸೋಕಿ ಬರುವ ಆ ತಂಗಾಳಿಯ ಘಮ…. ಆ ಘಾಟಿಯಲ್ಲಿದ್ದ ಕಾಡು ಮಲ್ಲಿಗೆಗೆ ಸೇರಿಕೊಳ್ಳುತ್ತಿತ್ತು..! ಅದೆಷ್ಟು ಅಮಲು ಅಂದ್ರೆ, ಇವತ್ತಿಗೂ ಆ ಘಮ ಅಲ್ಲೇ ಉಳಿದುಕೊಂಡಿದೆ. ಬಹುಶಃ ನಾನೇನಾದ್ರೂ ಮತ್ತೆ ಅದೇ ದಾರಿಯಲ್ಲಿ ಮತ್ತೊಮ್ಮೆ ಹೋದ್ರೂ, ಖಂಡಿತ ಅದೇ ಘಮ ನನ್ನ ಮೂಗಿಗೆ, ಮನಸ್ಸಿಗೆ ಬಡಿಯುತ್ತದೆ!  

ನನಗೆ ಯಾವಾಗ್ಲೂ ಬಸ್‌ ಹತ್ತಿ ಮೂವ್‌ ಆದ್ರೆ 10 ನಿಮಿಷದಲ್ಲಿ ನಿದ್ರೆ ಬಂದು ಬಿಡ್ತಿತ್ತು. ಅವತ್ತು ಬರಲೇ ಇಲ್ಲ.. ಅದೇ ದಾಖಲೆ ನಾನು ಮೊದಲನೇ ಬಾರಿಗೆ ಬಸ್‌ ಜರ್ನಿಯಲ್ಲಿ 200 ಕಿಮೀ ಬಂದ್ರೂ ನಿದ್ರೆ ಬರದೇ ಇದ್ದಿದ್ದು. ಆ ನಿದ್ರೆ ಬರದೇ ಇರೋ ಪ್ರತಿ ಕ್ಷಣದಲ್ಲೂ ನನ್ನನ್ನ ಕಾಡಿದ್ದು ನಿನ್ನ ಬೆಳ್ಳಿ ಮೋಡದ ಮಂಜಿನ ಕೆನ್ನೆ.. ಆ ರೇಷ್ಮೆಯ ಬಳ್ಳಿಯ ಕೂದಲು.. ಆಗಾಗ ಕಾಣಿಸುತ್ತಿದ್ದ ಓರೆಗಣ್ಣಿನ ರೆಪ್ಪೆ ಬಡಿಯುವ ಆಟ! ಅದೆಲ್ಲ ಎಷ್ಟು ಚೆಂದ..! ಆ ಪ್ರಯಾಣದುದ್ದಕ್ಕೂ ಅದೆಷ್ಟೋ ಆಸೆಗಳು ಹುಟ್ಟಿ ಕನಸನ್ನ ಕೊಟ್ಟು.. ನಿದ್ರೆ ಕದ್ದಿದ್ದು..! ಇದನ್ನೂ ಓದಿ: ನೀ ʻಅಮೃತʼಧಾರೆ – ಬಾಡಿದ ಹೃದಯಕುಂಡದಲ್ಲಿ ಒಲವರಳಿಸಿದ ಮಳೆ!

ಅದೆಂತ ಕನಸು, ಅದೆಂತ ಆಸೆ ಅಂತಿಯಾ ವಿಭಾ.. ನಿನ್ನ ಕಣ್ರೆಪ್ಪೆಗೆ ಹಾಗೇ ಕಾಡಿಗೆ ಹಚ್ಬಿಡ್ಬೇಕು..! ಕೆನ್ನೆಗೊಂದು ಗುಲಾಬಿ ಮುತ್ತು ಕೊಡ್ಬೇಕು..! ಆ ಘಾಟಿಯ ಮೋಡಗಳ ಬಳ್ಳಿಯಲ್ಲಿ ʻಕಾಡು ಮಲ್ಲಿಗೆʼ ಹೂಗಳನ್ನು ಕಟ್ಟಿ ನಿನ್ನ ಜಡೆಗೆ ಮುಡಿಸ್ಬೇಕು ಅಂತೆಲ್ಲ ಅನ್ಸೋದು..! ಒಂದು ಕ್ಷಣ ಕಣ್ಣು ಮುಚ್ಚಿದ್ರೂ ನಮ್ಮ ಮದುವೆ ದಿಬ್ಬಣವೇ ಸಾಗ್ತಿದೆ ಅನ್ಸೋದು..! ಪ್ರೀತಿ ಅಂದ್ರೆ ಎಷ್ಟೆಲ್ಲ ಆಸೆ ಅಲ್ವಾ..? ಇದೆಲ್ಲ ನಾವಿಬ್ರೂ ಅಪರಿಚಿತರಂತೆ ಕಾಲ ಕಳೆದಾಗ ಆಗಿದ್ದು..! ಈಗ ಪರಿಚಿತರು..! ಪ್ರೇಮದ ಗಂಧ ಇಬ್ಬರ ಹೃದಯದಿಂದ ಹೃದಯಕ್ಕೆ ಸಾಗುವ ಹಂತಕ್ಕೆ ಬಂದು ನಿಂತಿದೆ…! ನನಗೆ ಈಗಲೂ ಆ ಅಪರಿಚಿತ ಕಾಲದ ಪ್ರೇಮದ್ದೇ ಧ್ಯಾನ! ಹಾಗಂತ ಈಗ ಇದೆಲ್ಲ ಆಸೆ ಇಲ್ಲ ಅಂತಲ್ಲ..!!  

ಇದೆಲ್ಲ ಬರಿ ಮಾತಲ್ಲೋ, ನಾಲ್ಕು ಸಾಲಿನ ಬರಹದಲ್ಲೋ, ಕವಿತೆಯಲ್ಲೋ ಹೇಳೋದಲ್ಲ… ಒಮ್ಮೆ ʻಕಾಡು ಮಲ್ಲಿಗೆʼಯ ದಾರಿಯಲ್ಲಿ ಜೋಡಿಯಾಗಿ ಸಾಗುವ. ಆ ದಾರಿಯಲ್ಲಿ ಹೆಜ್ಜೆಗೊಂದೊಂದು ಆಸೆ, ಕತೆ ಹೇಳಿ ನಿನ್ನನ್ನು ರಮಿಸಬೇಕು..! ಈ ʻಕಾಡುʼವ ಕನಸುಗಳ ಜೊತೆ ಪ್ರಯಾಣಕ್ಕೆ ಅಣಿಯಾಗಿ, ನಿನ್ನ ಉತ್ತರಕ್ಕೆ ಕಾಯ್ತಾ ಇರ್ತಿನಿ. ಇದನ್ನೂ ಓದಿ: ಎದೆಯ ರೇಡಿಯೋದಲ್ಲಿ ಅವಳ ಹಾಡು ಇನ್ನೂ ಮುಗಿದಿಲ್ಲ!

Share This Article