ನಾನು ಕೇವಲ ಜಿಲ್ಲೆ, ಕೋಟಾಕ್ಕೆ ಸೀಮಿತನಲ್ಲ, ನನ್ನ ಜೀವನವೇ ರಾಜ್ಯಕ್ಕೆ ಅರ್ಪಣೆ: ಶ್ರೀರಾಮುಲು

Public TV
1 Min Read

ಬಳ್ಳಾರಿ: ನಾನು ಯಾವ ಜಿಲ್ಲೆಗೂ, ಯಾವ ಕೋಟಾಕ್ಕೂ ಸೀಮಿತನಲ್ಲ. ನನ್ನ ಜೀವನ ರಾಜ್ಯಕ್ಕೆ, ರಾಜಕಾರಣಕ್ಕೆ ಅರ್ಪಣೆ. ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧವೆಂದು ಬಿಜೆಪಿ ಶಾಸಕ ಶ್ರೀರಾಮುಲು ಹೇಳಿಕೆ ನೀಡಿದ್ದಾರೆ.

ಸಂಪುಟ ವಿಸ್ತರಣೆ ಸಂಬಂಧ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಕುರಿತು ಹೈಕಮಾಂಡ್ ಶೀಘ್ರದಲ್ಲೆ ನಿರ್ಧಾರ ತೆಗೆದುಕೊಳ್ಳುತ್ತದೆ. ಡಿಸಿಎಂ ಸ್ಥಾನದ ವಿಚಾರವಾಗಿ, ನಾನು ಏನೂ ಮಾತನಾಡಲ್ಲ. ಹೈಕಮಾಂಡ್ ಏನು ಹೇಳುತ್ತದೋ ಅದಕ್ಕೆ ನಾನು ಬದ್ಧನಾಗಿರುತ್ತೇನೆ. ನಾನು ಯಾವ ಜಿಲ್ಲೆಗೂ, ಯಾವ ಕೋಟಕ್ಕೂ ಸೀಮಿತನಲ್ಲ. ನನ್ನ ಜೀವನ ರಾಜ್ಯಕ್ಕೆ, ರಾಜಕಾರಣಕ್ಕೆ ಅರ್ಪಣೆ ಎಂದು ತಮ್ಮ ನಡೆಯ ಬಗ್ಗೆ ಸ್ಪಷ್ಟಪಡಿಸಿದರು.

ಸಚಿವ ಸ್ಥಾನ ನೀಡುವುದು ಯಾವ ಜಿಲ್ಲೆಯ ಆಧಾರದ ಮೇಲೂ ಅಲ್ಲ. ನನ್ನಂತಹ ದೊಡ್ಡ ನಾಯಕರು, ಶಕ್ತಿವಂತ ನಾಯಕರು ಪಕ್ಷದಲ್ಲಿ ಬಹಳ ಜನರಿದ್ದಾರೆ. ನಮಗೆ ಹಾಗೂ ಕಾರ್ಯಕರ್ತರಿಗೆ ಬಿಎಸ್ ಯಡಿಯೂರಪ್ಪನವರು ಸಿಎಂ ಆಗಬೇಕು, ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂಬ ಕಳಕಳಿಯಿತ್ತು. ದೇವರ ಆಶಿರ್ವಾದದಿಂದ ಅದು ನೆರವೇರಿದೆ. ಹೀಗಾಗಿ ಪಕ್ಷ ಏನು ನಿರ್ಧಾರ ಮಾಡುತ್ತದೋ ಅದನ್ನು ನಾವು ಪಾಲಿಸುತ್ತೇವೆ. ಡಿಸಿಎಂ ಸ್ಥಾನ ನೀಡುವ ಬಗ್ಗೆ ಪಕ್ಷ ನಿರ್ಧಾರ ಮಾಡಬೇಕು ಎಂದು ತಿಳಿಸಿದರು.

ಅತೃಪ್ತ ಕಾಂಗ್ರೆಸ್ ಶಾಸಕರಿಗೆ ಟಿಕೆಟ್ ನೀಡುವ ವಿಚಾರವಾಗಿ ಮಾತನಾಡಿ, ಅತೃಪ್ತ ಶಾಸಕರಿಗೂ ಮಂತ್ರಿ ಸ್ಥಾನ ಕೊಡಬೇಕಾಗುತ್ತದೆ. ಅವರೂ ಕೂಡ ನಮಗೆ ಸಹಾಯ ಮಾಡಿದ್ದಾರೆ. ಅವರನ್ನು ಸಮಾಧಾನ ಪಡಿಸಬೇಕು. ಜೊತೆಗೆ ನಮ್ಮ ಪಕ್ಷದ ಹಿರಿಯ ನಾಯಕರನ್ನೂ ಕೂಡ ಗುರುತಿಸಬೇಕು. ಉಪ ಚುನಾವಣೆ ನಡೆಯಲಿರುವ 17 ಸ್ಥಾನಗಳನ್ನು ನಾವು ಗೆಲ್ಲುತ್ತೇವೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಈ ವಿಚಾರಗಳು ಹೈಕಮಾಂಡ್‍ಗೆ ಬಿಟ್ಟಿದ್ದು ಎಂದು ಪರೋಕ್ಷವಾಗಿ ರೆಬಲ್ ಶಾಸಕರ ಸಹಾಯವನ್ನು ಶ್ರೀರಾಮುಲು ಒಪ್ಪಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *