ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ – ಸಂಕಷ್ಟದಲ್ಲಿ ಮುಜರಾಯಿ ಇಲಾಖೆಯ ಶಾಲೆ

Public TV
2 Min Read

ರಾಯಚೂರು: ಜಿಲ್ಲೆಯಲ್ಲಿ ಮುಜರಾಯಿ ಇಲಾಖೆಯ ನಿರ್ಲಕ್ಷ್ಯದಿಂದ ನೂರಾರು ವಿದ್ಯಾರ್ಥಿಗಳ ಓದು ಅತಂತ್ರ ಸ್ಥಿತಿಗೆ ತಲುಪಿದೆ. ತಾಲೂಕಿನ ದೇವಸುಗೂರಿನ ಐತಿಹಾಸಿಕ ಶ್ರೀ ಸುಗೂರೇಶ್ವರ ದೇವಾಲಯ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಶಾಲೆಯನ್ನೇ ಮುಚ್ಚುವ ಸ್ಥಿತಿ ಬಂದಿದೆ.

ಶ್ರೀ ಸುಗೂರೇಶ್ವರ ದೇವಾಲಯ ಹಿಂದು ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿರುವ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಸ್ಥಳ. ದೇವಾಲಯದ ಶಿಕ್ಷಣ ಸಂಸ್ಥೆ ನರ್ಸರಿಯಿಂದ ಪದವಿವರೆಗೆ ತರಗತಿಗಳನ್ನು ನಡೆಸುತ್ತ ಗ್ರಾಮೀಣ ಭಾಗಕ್ಕೆ ತನ್ನದೇ ಆದ ಕೊಡುಗೆಗಳನ್ನು ನೀಡುತ್ತಿತ್ತು. ಆದರೆ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಹಾಗೂ ದೇವಸ್ಥಾನ ಆಡಳಿತ ಮಂಡಳಿ ದಿವ್ಯ ನಿರ್ಲಕ್ಷ್ಯದಿಂದ ವಿದ್ಯಾರ್ಥಿಗಳ ಪಾಲಿಗೆ ಶಾಲೆ ಮಕ್ಕಳಿಗೆ ವರದಾನವಾಗುವ ಬದಲು ಶಾಪವಾಗಿದೆ. 2019ರಲ್ಲಿ ಶಾಲೆ ಮತ್ತು ಕಾಲೇಜ್‍ನ್ನು ಖಾಸಗಿಯವರಿಗೆ ಗುತ್ತಿಗೆ ನೀಡಲಾಗಿದ್ದು ಸಂಸ್ಥೆ ಇದೀಗ ಅಧೋಗತಿಗೆ ಹೋಗಿದೆ ಎಂದು ಪೋಷಕರು, ಶಿಕ್ಷಕರು ಆರೋಪಿಸಿದ್ದಾರೆ. ಇದನ್ನೂ ಓದಿ: 21 ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ- ರಾಜ್ಯದಲ್ಲಿಂದು 92 ಮಂದಿಗೆ ಕೊರೊನಾ, ಇಬ್ಬರು ಸಾವು

ನರ್ಸರಿಯಿಂದ ಡಿಗ್ರಿವರೆಗೆ ಸುಮಾರು 170 ವಿದ್ಯಾರ್ಥಿಗಳು ಓದುತ್ತಿದ್ದು 12 ಜನ ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ಕೆಲ ಶಿಕ್ಷಕರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಕೆಲಸ ಕಳೆದುಕೊಂಡ ಶಿಕ್ಷಕರು ಕೆಲಸ ಹಾಗೂ ಬಾಕಿ ಸಂಬಳಕ್ಕಾಗಿ ಹೋರಾಟ ನಡೆಸಿದ್ದಾರೆ. ವಿದ್ಯಾರ್ಥಿಗಳು ಅಗತ್ಯ ಶಿಕ್ಷಕರಿಲ್ಲದೆ ಪಾಠಗಳು ಸರಿಯಾಗಿ ನಡೆಯದೇ ಪರದಾಡುತ್ತಿದ್ದಾರೆ. ಬಡ ಪೋಷಕರು ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸುತ್ತಿದ್ದಾರೆ.

ಶಿಕ್ಷಣ ಸಂಸ್ಥೆ ಸರಿಯಾಗಿ ನಡೆಯದೇ, ಗುತ್ತಿಗೆ ಪಡೆದವರು ಬಾಡಿಯನ್ನೂ ನೀಡದೆ ಲಕ್ಷಾಂತರ ರೂಪಾಯಿ ಬಾಕಿ ಉಳಿಸಿಕೊಂಡ ಹಿನ್ನೆಲೆ ಸರ್ಕಾರ 2021 ಜೂನ್ ತಿಂಗಳಲ್ಲಿ ಸಂಸ್ಥೆ ನಿರ್ವಹಣೆಗೆ ಟೆಂಡರ್ ಕರೆದಿತ್ತು. ಅದಕ್ಕೆ ಏಳು ಅರ್ಜಿಗಳು ಬಂದಿದ್ದು ಅತೀ ಹೆಚ್ಚು ದರ ತೋರಿಸಿರುವ ಅರ್ಜಿದಾರರಿಗೆ ಟೆಂಡರ್ ನೀಡಬೇಕು. ಆದ್ರೆ ಜಿಲ್ಲಾಡಳಿತ ವಿಳಂಬ ಧೋರಣೆ ತೋರುತ್ತಿತುವುದರಿಂದ ಶಾಲೆಯ ಪರಸ್ಥಿತಿ ಇನ್ನೂ ಅಧೋಗತಿಗೆ ಹೋಗಿದೆ. ಟೆಂಡರ್ ಪ್ರಕ್ರಿಯೆ ಆರಂಭವಾಗಿ 9 ತಿಂಗಳು ಕಳೆದರು ಪೂರ್ಣಗೊಳಿಸುತ್ತಿಲ್ಲ. ಇದರಿಂದ ಶಿಕ್ಷಕರೂ ಇಲ್ಲದೆ, ಸಮರ್ಪಕ ಆಡಳಿತ ಮಂಡಳಿಯೂ ಇಲ್ಲದೆ ವಿದ್ಯಾರ್ಥಿಗಳ ಓದು ಅತಂತ್ರಕ್ಕೆ ಸಿಲುಕಿದೆ. ಅಧಿಕಾರಿಗಳು ಮಾತ್ರ ಒಬ್ಬರ ಮೇಲೆ ಒಬ್ಬರು ಆರೋಪ ಹೊರಿಸುತ್ತಾ ನಿರ್ಲಕ್ಷ್ಯ ಮೆರೆಯುತ್ತಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲೇ ಟೆಂಡರ್ ಫೈಲ್ ಕೊಳೆಯುತ್ತಿದೆ. ಇದನ್ನೂ ಓದಿ: ಇನ್ಮುಂದೆ 60 ಕಿ.ಮೀ. ವ್ಯಾಪ್ತಿಯೊಳಗೆ ಟೋಲ್ ತೆರಿಗೆ ಇರಲ್ಲ: ನಿತಿನ್‌ ಗಡ್ಕರಿ

ಮುಜರಾಯಿ ಇಲಾಖೆ ಅಡಿಯಲ್ಲಿರುವ ಶಿಕ್ಷಣ ಸಂಸ್ಥೆ ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವ ಬದಲು ಗೊಂದಲಕ್ಕೀಡು ಮಾಡಿದೆ. ಕನಿಷ್ಠ ಈಗಲಾದ್ರೂ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಅರ್ಹರ ಕೈಗೆ ಅವಕಾಶ ನೀಡಬೇಕಿದೆ. ಇಲ್ಲಿನ ಬಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬುದು ಇಲ್ಲಿನ ಜನರ ಆಶಯವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *