ಯತ್ನಾಳ ಹೇಳಿಕೆಗೆ ಮುಸ್ಲಿಂಮರು ಹೆದರುವ ಅವಶ್ಯಕತೆ ಇಲ್ಲ: ಎಂ.ಬಿ.ಪಾಟೀಲ್

Public TV
1 Min Read

ವಿಜಯಪುರ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿಕೆಗೆ ಮುಸ್ಲಿಮರು ಹೆದರುವ ಅವಶ್ಯಕತೆ ಇಲ್ಲ. ಈ ರೀತಿಯ ಹೇಳಿಕೆ ಶಾಸಕರಿಗೆ ಶೋಭೆ ತರುವುದಿಲ್ಲ. ನಿಮ್ಮ ಏರಿಯಾದಲ್ಲಿ ಅಭಿವೃದ್ಧಿಯಾಗದೇ ಇದ್ದಲ್ಲಿ ನಾವು ನಮ್ಮ ಕಚೇರಿಯಿಂದ ಸೌಲಭ್ಯಗಳನ್ನ ನೀಡುತ್ತೇವೆ. ನಗರದ ಮುಸ್ಲಿಂರಲ್ಲಿ ವಿಶ್ವಾಸ ಮೂಡಿಸುವ ಕೆಲಸವನ್ನ ನಾವು ಮಾಡ್ತೇವೆ. ಪ್ಯಾರಲಲ್ ಶಾಸಕರನ್ನ ಹುಟ್ಟುಹಾಕಲು ಬದ್ಧವಾಗಿದ್ದೇವೆ ಎಂದು ಮಾಜಿ ಸಚಿವ, ಶಾಸಕ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ಇಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಂ.ಬಿ.ಪಾಟೀಲ್, ಜಿಲ್ಲೆಯಲ್ಲಿ ಮುಂಗಾರು ಮಳೆ ಸಂಪೂರ್ಣ ಕೈ ಕೊಟ್ಟಿದೆ. ಈ ಸಂಬಂಧ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಜೊತೆ ಮಾತನಾಡಿದ್ದೇನೆ. ಆಲಮಟ್ಟಿ ಡ್ಯಾಂ ನಿಂದ ಎಲ್ಲ ಕೆರೆ, ಕೆನಾಲ್‍ಗಳಿಗೆ ನೀರು ಬಿಡುಗಡೆ ಮಾಡುವಂತೆ ಕೇಳಿ ಪತ್ರ ಕೂಡ ಬರೆದಿದ್ದೇನೆ. ಈ ಕುರಿತು ಅಧಿಕಾರಿಗಳ ಸಭೆಗಳನ್ನು ಕರೆಯಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ನನ್ನ ಆಫೀಸ್‍ಗೆ ಬುರ್ಖಾ ಧಾರಿಗಳು ಬರೋದೇ ಬೇಡ: ಶಾಸಕ ಯತ್ನಾಳ್

ಹಿಂದಿನ ಬಜೆಟ್‍ನ ಎಲ್ಲ ಯೋಜನೆಗಳನ್ನು ಸಿಎಂ ಕುಮಾರಸ್ವಾಮಿ ಮುಂದುವರಿಸಿಕೊಂಡು ಬಂದಿದ್ದಾರೆ. ಹಾಗಾಗಿ ಬಜೆಟ್ ವಿಚಾರದಲ್ಲಿ ಯಾವುದೇ ಗೊಂದಲಗಳಿಲ್ಲ. ಬಹಳ ಕಷ್ಟಪಟ್ಟು ಅಖಂಡ ಕರ್ನಾಟಕ ನಿರ್ಮಾಣ ಮಾಡಲಾಗಿದೆ. ಇಂದು ಬಜೆಟ್ ಸರಿ ಇಲ್ಲ ಅಂತ ಪ್ರತ್ಯೇಕವಾಗುವುದು ಸರಿಯಲ್ಲ. ನಾವು ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗೋದಕ್ಕೆ ಬಿಡೋದಿಲ್ಲ ಎಂದು ಸ್ಪಷ್ಟಪಡಿಸಿದರು.

ಲಿಂಗಾಯತ ಹೋರಾಟದಿಂದ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಅಹಿಂದ ವರ್ಗದ ನಾಯಕರಿಗಿಂತ ಲಿಂಗಾಯತ ಮುಖಂಡರು ಗೆದ್ದು ಬಂದಿದ್ದಾರೆ. ಯಾವ ಕಾರಣದಿಂದ ಯಾರು, ಯಾರು ಸೋತಿದ್ದಾರೆ ಅನ್ನೋದರ ಬಗ್ಗೆ ಪಕ್ಷದ ಒಳಗೆ ಚರ್ಚೆಯಾಗಲಿದೆ. ಅಲ್ಲಿ ನಾವು ಕೂಡ ನಮ್ಮ ವಿಚಾರ ಮಂಡನೆ ಮಾಡಲಿದ್ದೇವೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *