ಭಾರತದಲ್ಲಿ ಮಾತ್ರ ಮುಸ್ಲಿಮರು ಸಂತೋಷದಿಂದ ಇರೋದನ್ನು ಕಾಣಲು ಸಾಧ್ಯ: ಮೋಹನ್ ಭಾಗವತ್

Public TV
2 Min Read

ನವದೆಹಲಿ: ಮುಸ್ಲಿಮರು ಸಮೃದ್ಧ ಹಾಗೂ ಸಂತೋಷದಿಂದ ಇರುವುದನ್ನು ಕಾಣಲು ಭಾರತದಲ್ಲಿ ಮಾತ್ರ ಸಾಧ್ಯ ಎಂದು ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅಭಿಪ್ರಾಯಪಟ್ಟಿದ್ದಾರೆ.

ಆರ್‌ಎಸ್ಎಸ್ ನ  ಅಖಿಲ ಭಾರತೀಯ ಕಾರ್ಯಕಾರಿ ಮಂಡಲ್ ಸಭೆಯಲ್ಲಿ ಮಾತನಾಡಿದ ಅವರು, ಯಹೂದಿಗಳು ಅಲೆಮಾರಿಗಳಾಗಿದ್ದರು ಆಗ ಅವರಿಗೆ ಭಾರತ ಮಾತ್ರ ಆಶ್ರಯ ನೀಡಿತು. ಪಾರ್ಸಿಗಳ ಉದಾಹರಣೆಯನ್ನೂ ನೀಡಿದ ಅವರು, ಅವರ ಆಚರಣೆಗಳು ಮತ್ತು ಧರ್ಮ ಭಾರತದಲ್ಲಿ ಮಾತ್ರ ಸುರಕ್ಷಿತವಾಗಿದೆ. ಇದಕ್ಕೆ ಕಾರಣ ಏಕತಾ ಮನೋಭಾವ. ಏಕತೆಯ ಭಾವನೆಯಿಂದಾಗಿ ಮುಸ್ಲಿಮರು, ಪಾರ್ಸಿಗಳು ಮತ್ತು ಇತರ ವಿವಿಧ ಧರ್ಮಗಳಿಗೆ ಸೇರಿದ ಜನರು ದೇಶದಲ್ಲಿ ಸುರಕ್ಷಿತವಾಗಿದ್ದಾರೆ. ಪಾರ್ಸಿಗಳನ್ನು ಭಾರತದಲ್ಲಿ ರಕ್ಷಿಸಲಾಗಿದ್ದು, ಇದರ ಜೊತೆಗೆ ಮುಸ್ಲಿಮರು ಸಹ ಸಂತೋಷವಾಗಿದ್ದಾರೆ ಎಂದರು.

ಏಕತೆಯ ಕಾರಣದಿಂದಾಗಿ ಇದೆಲ್ಲ ಸಾಧ್ಯವಾಗಿದೆ. ಇದರಿಂದಾಗಿಯೇ ಮುಸ್ಲಿಂರು, ಪಾರ್ಸಿಗಳು ಮತ್ತು ಇತರ ಧರ್ಮಗಳಿಗೆ ಸೇರಿದ ಜನರು ಸುರಕ್ಷಿತವಾಗಿದ್ದಾರೆ. ಆರ್‌ಎಸ್ಎಸ್ ಗೆ ಯಾರ ಬಗ್ಗೆಯೂ ದ್ವೇಷವಿಲ್ಲ, ದೇಶವನ್ನು ಉತ್ತಮ ದಿಕ್ಕಿನಡೆಗೆ ಕೊಂಡೊಯ್ಯಲು ಸಂಘವು ಹಿಂದೂಗಳು ಮಾತ್ರವಲ್ಲ ಇಡೀ ಸಮಾಜವನ್ನೇ ಬದಲಿಸಲು ಪ್ರಯತ್ನಿಸುತ್ತದೆ ಎಂದು ತಿಳಿಸಿದರು.

ದೇಶದ ವೈವಿಧ್ಯತೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಇಡೀ ರಾಷ್ಟ್ರವನ್ನು ಒಂದೇ ದಾರದಲ್ಲಿ ಕಟ್ಟಲಾಗಿದೆ. ಭಾರತದ ಜನತೆ ವೈವಿಧ್ಯಮಯ ಸಂಸ್ಕೃತಿ,  ಭಾಷೆ, ಭೌಗೋಳಿಕ ಸ್ಥಳಗಳ ಹೊರತಾಗಿಯೂ ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ಹೊಂದಿದ್ದಾರೆ ಎಂದರು.

ಒಡಿಶಾ ಭೇಟಿಯ ಸಮಯದಲ್ಲಿ ಭಾಗವತ್ ಅವರು ಅಖಿಲ ಭಾರತೀಯ ಕಾರ್ಯಕಾರಿ ಮಂಡಲದ ಮೊದಲ ಸಭೆಯಲ್ಲಿ ಭಾಗವಹಿಸಿದ್ದು, ಭಯ್ಯಾಜಿ ಜೋಶಿ ಸಹ ಈ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಇದರ ನಂತರ ಅಕ್ಟೋಬರ್ 16ರಿಂದ 18ರ ವರೆಗೆ ಖಾಸಗಿ ವಿಶ್ವವಿದ್ಯಾಲಯದಲ್ಲಿ ಆರ್‌ಎಸ್ಎಸ್ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ.

ಸಭೆಯಲ್ಲಿ ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್, ಪ್ರತಾಪ್ ಸಾರಂಗಿ, ಭುವನೇಶ್ವರ ಬಿಜೆಪಿ ಸಂಸದ ಅಪರಾಜಿತಾ ಸಾರಂಗಿ, ರಾಜ್ಯಸಭಾ ಸಂಸದ ಅಶ್ವಿನಿ ವೈಷ್ಣವ್ ಹಾಗೂ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬೈಜಯಂತ್ ಪಾಂಡೆ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಬಿಜೆಪಿ ಕಾರ್ಯಕಾರಿ ಅಧ್ಯಕ್ಷ ಜೆ.ಪಿ.ನಡ್ಡಾ ಸಹ ಪಾಲ್ಗೊಳ್ಳುವ ಸಾಧ್ಯತೆ ಇದೆ.

ಹಿಂದೂ ರಾಷ್ಟ್ರ ಎಂದರೆ ಅಲ್ಪಸಂಖ್ಯಾತ ವಿರೋಧಿ ಎಂದರ್ಥವಲ್ಲ ಎಂದು ಮೋಹನ್ ಭಾಗವತ್ ಈ ಹಿಂದೆ ಹೇಳಿದ್ದರು. ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಹಿಂದೂ ರಾಷ್ಟ್ರದ ಕಲ್ಪನೆಯು ಹಿಂದೂಗಳ ಪ್ರಾಬಲ್ಯವನ್ನು ಆಧರಿಸಿದೆ, ತಾಂತ್ರಿಕವಾಗಿ ಇದರರ್ಥ ಹಿಂದೂಯೇತರರನ್ನು ಅಧೀನಗೊಳಿಸುವುದಾಗಿದೆ ಎಂದು ತಿರುಗೇಟು ನೀಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *