ಮುಸ್ಲಿಮರು ನಮ್ಮ ಹಿಂದುತ್ವ ಬೆಂಬಲಿಸುತ್ತಾರೆ.. ಬಿಜೆಪಿ ಹಿಂದುತ್ವ ತಿರಸ್ಕರಿಸುತ್ತಾರೆ: ಉದ್ಧವ್‌ ಠಾಕ್ರೆ

Public TV
1 Min Read

ಮುಂಬೈ: ಮುಸ್ಲಿಂ ಸಮುದಾಯವು ತಮ್ಮ ಮನೆಗಳಲ್ಲಿ ಒಲೆಗಳನ್ನು ಉರಿಸುವ ಹಿಂದುತ್ವದ ಬ್ರ್ಯಾಂಡ್ ಅನ್ನು ಬೆಂಬಲಿಸುತ್ತದೆ. ಆದರೆ ಅವರ ಮನೆಗಳನ್ನು ಸುಡುವ ಬಿಜೆಪಿ ತಿರಸ್ಕರಿಸುತ್ತದೆ ಎಂದು ಶಿವಸೇನೆಯ ಉದ್ಧವ್ ಠಾಕ್ರೆ ಅಭಿಪ್ರಾಯಪಟ್ಟಿದ್ದಾರೆ.

ಮುಂಬೈನಲ್ಲಿ ಶಿವಸೇನಾ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಠಾಕ್ರೆ, ಮುಸ್ಲಿಂ ಸಮುದಾಯವು ನಮ್ಮೊಂದಿಗೆ ಬರುತ್ತಿದೆ. ನಾನು ಶಿವಸೇನೆಯ ಪಕ್ಷದ ಮುಖ್ಯಸ್ಥ ಮತ್ತು ‘ಹಿಂದೂ ಹೃದಯ ಸಾಮ್ರಾಟ್’ನ ಮಗ ಎಂದು ನಿಮಗೆ ತಿಳಿದಿಲ್ಲವೇ? ನಾನೇ ಕಟ್ಟಾ ಹಿಂದೂ ಆಗಿದ್ದು, ಯಾಕೆ ನನ್ನ ಜೊತೆ ಬರುತ್ತಿಯಾ ಅಂತ ನಾನು ಅವರನ್ನು (ಮುಸ್ಲಿಮರು) ಕೇಳುತ್ತೇನೆ. ನಿಮ್ಮ ಹಿಂದುತ್ವಕ್ಕೂ ಬಿಜೆಪಿಯ ಹಿಂದುತ್ವಕ್ಕೂ ವ್ಯತ್ಯಾಸವಿದೆ ಎಂದು ನಮಗೆ ತಿಳಿದಿದೆ. ನಿಮ್ಮ ಹಿಂದುತ್ವ ನಮ್ಮ ಮನೆಯಲ್ಲಿ ಒಲೆ ಉರಿಸುತ್ತದೆ. ಬಿಜೆಪಿ ಮನೆ ಸುಟ್ಟು ಹಾಕುತ್ತದೆ ಎಂಬುದು ಮುಸ್ಲಿಮರ ಅಭಿಪ್ರಾಯ ಎಂದು ಠಾಕ್ರೆ ತಿಳಿಸಿದ್ದಾರೆ. ಇದನ್ನೂ ಓದಿ: ಉದ್ಯೋಗ ಕೊಡಿಸುವ ನೆಪದಲ್ಲಿ 20 ಮಹಿಳೆಯರ ಮೇಲೆ ಗ್ಯಾಂಗ್‌ರೇಪ್ – ಇಬ್ಬರ ವಿರುದ್ಧ ದೂರು ದಾಖಲು

ರಾಮ ನಮ್ಮ ಹೃದಯದಲ್ಲಿದ್ದಾನೆ. ಇದು ನಮ್ಮ ಹಿಂದುತ್ವ ಮತ್ತು ನಾವು ದೇಶಭಕ್ತ ಹಿಂದೂಗಳು ಎಂದರಲ್ಲದೇ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪೂರ್ವ ರಾಜ್ಯದ ಮತದಾರರನ್ನು ಸೆಳೆಯಲು ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ನೀಡಿತು ಎಂದು ಠಾಕ್ರೆ ಟೀಕಿಸಿದ್ದಾರೆ.

ಈ ಹಿಂದೆ ಎಷ್ಟು ಭಾರತ ರತ್ನ ನೀಡಬಹುದು? ಯಾರಿಗೆ ಮತ್ತು ಯಾವಾಗ ನೀಡಬಹುದು ಎಂಬ ನಿಯಮಗಳಿದ್ದವು. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನಸ್ಸಿಗೆ ಬಂದವರಿಗೆ ಅದನ್ನು ನೀಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಏಕಾಂಗಿಯಾಗಿ 370 ಸ್ಥಾನಗಳ ಗಡಿ ಮುಟ್ಟಲಿದೆ: ಪ್ರಧಾನಿ ಮೋದಿ

ಇಷ್ಟು ವರ್ಷಗಳ ನಂತರ ಕರ್ಪೂರಿ ಠಾಕೂರ್ ಅವರನ್ನು ಗುರುತಿಸುತ್ತಿರುವುದು ಸಂತಸ ತಂದಿದೆ. ಭಾರತ ರತ್ನ ನೀಡಿದವರು ತಪ್ಪು ಎಂದು ನಾನು ಹೇಳುತ್ತಿಲ್ಲ. ಬಿಹಾರದಲ್ಲಿ ಅವರಿಗೆ (ಬಿಜೆಪಿ) ಮತಗಳು ಬೇಕು. ಅದಕ್ಕಾಗಿಯೇ ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಲಾಗಿದೆ ಎಂದು ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.

Share This Article