ಮುಸ್ಲಿಂ ಸಮಾಜ ಹಠ ಮಾಡದೇ ಅನುಭವ ಮಂಟಪ ಬಿಟ್ಟು ಕೊಡಬೇಕು: ಮುತಾಲಿಕ್

Public TV
1 Min Read

ಧಾರವಾಡ: ಬಸವ ಕಲ್ಯಾಣ ಎಂದ ತಕ್ಷಣ ನಮಗೆ ನೆನಪಿಗೆ ಬರುವುದು ಅನುಭವ ಮಂಟಪ. ಆದರೆ ಅದನ್ನು ನಿಜಾಮನ ಕಾಲದಲ್ಲಿ ಅತಿಕ್ರಮಣ ಮಾಡಿ, ಪೀರ್ ಪಾಷಾ ದರ್ಗಾ ಮಾಡಲಾಗಿದೆ. ಇದೀಗ ಮುಸ್ಲಿಂ ಸಮಾಜ ಹಠ ಮಾಡದೇ ಅನುಭವ ಮಂಟಪವನ್ನು ಬಿಟ್ಟು ಕೊಡಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ.

ಧಾರವಾಡದಲ್ಲಿ ಮಾತನಾಡಿದ ಅವರು, ಇಂದು ಸರ್ಕಾರ ಬಸವಕಲ್ಯಾಣದಲ್ಲಿ ಬೇರೆ ಕಡೆ ಅನುಭವ ಮಂಟಪ ಮಾಡುವ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ. ಈಗಿರುವ ಮೂಲ ಸ್ಥಾನ ಅದು, ಭಕ್ತಿಯ ಸ್ಥಳ, 12ನೇ ಶತಮಾನದಲ್ಲಿ ಕ್ರಾಂತಿ ಮಾಡಿದ ಸ್ಥಳ. ಆ ಜಾಗವನ್ನು ಬಿಟ್ಟು ಕೊಡಬೇಕು ಎಂದರು. ಇದನ್ನೂ ಓದಿ: ಕಳೆದ ಎಂಟು ವರ್ಷಗಳಿಂದ ಬಡವರಿಗಾಗಿ ಮೋದಿ ಸರ್ಕಾರ ಕೆಲಸ ಮಾಡ್ತಿದೆ: ಪ್ರಹ್ಲಾದ್ ಜೋಶಿ

ನಿಜಾಮನ ಕಾಲದಲ್ಲಿ ಅನುಭವ ಮಂಟಪವನ್ನು ಅತಿಕ್ರಮಣ ಮಾಡಲಾಗಿತ್ತು. ಅದಕ್ಕೆ ದಾಖಲೆಗಳಿವೆ. ಹಿಂದೂ ಧರ್ಮದ ನಿರ್ಲಕ್ಷ್ಯದಿಂದ ಅನುಭವ ಮಂಟಪ ಇನ್ನೊಬ್ಬರ ಪಾಲಾಗಿದೆ. ಸರ್ಕಾರ ಅದನ್ನು ವಾಪಸ್ ಪಡೆದುಕೊಳ್ಳಬೇಕು. ಮುಸ್ಲಿಂ ಸಮಾಜ ಅದನ್ನು ಶಾಂತ ರೀತಿಯಿಂದ ಬಿಟ್ಟುಕೊಡಬೇಕು. ಇಲ್ಲ ಎಂದರೆ ಗಲಭೆಗಳು ಪ್ರಾರಂಭವಾಗಬಹುದು ಎಂದು ಹೇಳಿದರು. ಇದನ್ನೂ ಓದಿ: ವಿಧಾನ ಪರಿಷತ್ 7 ಸ್ಥಾನಗಳಿಗೆ ಅವಿರೋಧ ಆಯ್ಕೆ – ಅಧಿಕೃತ ಘೋಷಣೆ

ವೀರಶೈವ ಲಿಂಗಾಯತ ಪ್ರತಿನಿಧಿಗಳು ಇದರ ಬಗ್ಗೆ ಬಾಯಿ ಬಿಡಬೇಕು. ಜೂನ್ 12 ರಂದು ನಮ್ಮ ನಡೆ ಬಸವಕಲ್ಯಾಣದ ಕಡೆ ಎಂಬ ಕರೆ ನೀಡಲಾಗಿದ್ದು, ಬಹಳಷ್ಟು ಜನ ಸಾಧು, ಸಂತರು ಅಲ್ಲಿಗೆ ಬರುತ್ತಾರೆ. ಅದಕ್ಕೆ ನಾವೂ ಬೆಂಬಲ ಕೊಡಲಿದ್ದೇವೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *