ಇನ್ಮುಂದೆ ಬೆಳಗಿನ ಜಾವ ಮೈಕ್‌ ಮೂಲಕ ಆಜಾನ್‌ ಕೂಗದಿರಲು ಮುಸ್ಲಿಂ ಧರ್ಮ ಗುರುಗಳು ನಿರ್ಧಾರ

Public TV
1 Min Read

ಬೆಂಗಳೂರು: ಧಾರ್ಮಿಕ ಕೇಂದ್ರಗಳಲ್ಲಿ ಲೌಡ್‌ಸ್ಪೀಕರ್‌ ಬಳಕೆಗೆ ಸಂಬಂಧಿಸಿದಂತೆ ಎದ್ದಿರುವ ವಿವಾದವು ನಂತರದ ದಿನಗಳಲ್ಲಿ ಧರ್ಮ ಸಂಘರ್ಷಕ್ಕೆ ಕಾರಣವಾಯಿತು. ಸಂಘರ್ಷ ಬಿಟ್ಟು ಸೌಹಾರ್ದತೆ ಕಾಪಾಡಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಮುಸ್ಲಿಂ ಧರ್ಮ ಗುರುಗಳು ಉತ್ತಮ ನಿರ್ಧಾರವೊಂದಕ್ಕೆ ಬಂದಿದ್ದಾರೆ.

ಹೌದು, ಇನ್ಮುಂದೆ ಬೆಳಗಿನ ಜಾವ ಮೈಕ್‌ ಮೂಲಕ ಆಜಾನ್‌ ಕೂಗದಿರಲು ಮುಸ್ಲಿಂ ಧರ್ಮ ಗುರುಗಳು ನಿರ್ಧಾರ ಕೈಗೊಂಡಿದ್ದಾರೆ. ಶರಿಯತ್ ಎ ಹಿಂದ್ ಸಂಘಟನೆಯ ಅಡಿಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಸಭೆಯಲ್ಲಿ ಶಾಸಕ ಜಮೀರ್‌ ಅಹ್ಮದ್‌, ಹ್ಯಾರಿಸ್‌ ವಕ್ಫ್‌ ಬೋರ್ಡ್‌ ಅಧ್ಯಕ್ಷ ಶಫಿ ಸಅದಿ ಉಪಸ್ಥಿತರಿದ್ದರು. ಇದನ್ನೂ ಓದಿ: ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಹಿಂದೂಗಳಿಗೆ ಬಿಟ್ಟು ಕೊಡುವಂತೆ ಆಗ್ರಹ

loudspeakers

ಮೈಕ್‌ ಮೂಲಕ ಆಜಾನ್‌ ಕೂಗುವುದಕ್ಕೆ ಹಿಂದೂಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದರು. ಇದು ದೇಶಾದ್ಯಂತ ಭಾರಿ ಚರ್ಚೆ ಹಾಗೂ ವಿವಾದಕ್ಕೆ ಕಾರಣವಾಯಿತು. ಮಸೀದಿಗಳಲ್ಲಿ ಆಜಾನ್‌ ಕೂಗಿದರೆ, ಹಿಂದೂ ದೇವಾಲಯಗಳಲ್ಲಿ ಮಂತ್ರಘೋಷ ಮೊಳಗಿಸಲಾಗುವುದು, ಹನುಮಾನ್‌ ಚಾಲೀಸಾ ಪಠಿಸಲಾಗುವುದು ಎಂದು ಹಿಂದೂಪರ ಸಂಘಟನೆಗಳು ಘೋಷಿಸಿದ್ದವು. ಅಲ್ಲದೇ ಲೌಡ್‌ಸ್ಪೀಕರ್‌ ಬಳಕೆಗೆ ಸಂಬಂಧಿಸಿದಂತೆ ಹೈಕೋರ್ಟ್‌ ಆದೇಶ ಪಾಲನೆಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದ್ದವು.

ಈ ಸಂಬಂಧ ಆರಂಭದಲ್ಲಿ ಸರ್ಕಾರ ಯಾವುದೇ ಕ್ರಮಕೈಗೊಳ್ಳದೇ ಇದ್ದಾಗ, ಹಿಂದೂಪರ ಸಂಘಟನೆಗಳು ಹೋರಾಟಕ್ಕೆ ಮುಂದಾಗಿದ್ದವು. ಕೂಡಲೇ ಎಚ್ಚೆತ್ತ ಸರ್ಕಾರ, ಧಾರ್ಮಿಕ ಕೇಂದ್ರಗಳಲ್ಲಿ ನಿಯಮ ಉಲ್ಲಂಘಿಸಿ ಅನಧಿಕೃತವಾಗಿ ಲೌಡ್‌ಸ್ಪೀಕರ್‌ ಬಳಸುವವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿತು. ಇದರ ಬೆನ್ನಲ್ಲೇ ಅನೇಕ ಹಿಂದೂ ದೇವಾಲಯಗಳು, ಮಸೀದಿಗಳು ಹಾಗೂ ಚರ್ಚ್‌ಗಳಿಗೆ ನೋಟಿಸ್‌ ನೀಡಲಾಯಿತು. ಸುಪ್ರೀಂ ಕೋರ್ಟ್‌ ದೇಶದಂತೆ ಸರ್ಕಾರ ಸುತ್ತೋಲೆ ಹೊರಡಿಸಿತ್ತು. ಇದನ್ನೂ ಓದಿ: ಆರೋಪಿ ನಾಗೇಶ್ ಬಂಧಿಸಿದ ಪೊಲೀಸರಿಗೆ ಆರಗ ಜ್ಞಾನೇಂದ್ರ ಧನ್ಯವಾದ

ಇದರಿಂದ ಎಚ್ಚೆತ್ತ ಮುಸ್ಲಿಂ ಧರ್ಮ ಗುರುಗಳು ಬೆಳಗಿನ ಜಾವ ಆಜಾನ್‌ ಕೂಗದಿರಲು ನಿರ್ಧರಿಸಿದ್ದಾರೆ. ಈ ಸಂಬಂಧ ಎಲ್ಲ ಮಸೀದಿಗಳಿಗೂ ಸೂಚನೆ ನೀಡಲಾಗುವುದು ಎಂದು ಸಭೆಯಲ್ಲಿ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *