ಹಾಸನ: ಹಾಡಹಗಲೇ ಮಚ್ಚಿನಿಂದ ಕೊಚ್ಚಿ ಯುವಕನನ್ನು ಬರ್ಬರ ಹತ್ಯೆ ಮಾಡಿರುವ ಘಟನೆ ಹಾಸನದ (Hassan) ಬೇಲೂರು ಪಟ್ಟಣದ ಸಾರಿಗೆ ಬಸ್ ನಿಲ್ದಾಣದಲ್ಲಿ ನಡೆದಿದೆ.
ಚನ್ನಕೇಶವಗೌಡ್ರು ಬೀದಿಯ ನಿವಾಸಿ ಗಿರೀಶ್ (28) ಕೊಲೆಯಾದ ಯುವಕ. ಸುರಪುರ ಗ್ರಾಮದ ಶ್ರೀನಿವಾಸ್ ಅಲಿಯಾಸ್ ಸೀನ ಕೊಲೆಗೈದ ಆರೋಪಿ. ಸೀನ ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಇದನ್ನೂ ಓದಿ: ಶಿವಮೊಗ್ಗ | ಕಾರ್ಮಿಕ ಇಲಾಖೆಯ ಕಟ್ಟಡ ಕುಸಿದು ಓರ್ವ ಸಾವು – ಮತ್ತೋರ್ವನಿಗೆ ಗಂಭೀರ ಗಾಯ
ಭಾನುವಾರ ರಾತ್ರಿ ಯುವತಿ ವಿಚಾರಕ್ಕೆ ಗಿರೀಶ್ ಹಾಗೂ ಸೀನನ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಇದರಿಂದ ಗಿರೀಶ್ ಮೇಲೆ ಸೀನ ಕೋಪಗೊಂಡಿದ್ದ. ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಗಿರೀಶ್ ಇಂದು ಬೆಳಿಗ್ಗೆ 11 ಗಂಟೆ ಸುಮಾರಿನಲ್ಲಿ ಸಾರಿಗೆ ಬಸ್ ನಿಲ್ದಾಣದಲ್ಲಿರುವ ಶೌಚಾಲಯಕ್ಕೆ ಹೋಗಿ ಹೊರಗೆ ಬಂದಿದ್ದ.
ಈ ವೇಳೆ ಕಾದು ನಿಂತಿದ್ದ ಸೀನ ಮಚ್ಚು ಹಿಡಿದು ಗಿರೀಶ್ ಮೇಲೆ ಅಟ್ಯಾಕ್ ಮಾಡಿ ಮನಬಂದಂತೆ ಕೊಚ್ಚಿ ಎಸ್ಕೇಪ್ ಆಗಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಗಿರೀಶ್‌ನನ್ನು ಅಂಬ್ಯುಲೆನ್ಸ್‌ನಲ್ಲಿ ಜಿಲ್ಲಾಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
