ಲವ್ವರ್‌ ಜೊತೆ ಸೇರಿ ಪತಿ ಹತ್ಯೆ – ಟೈಲ್ಸ್‌ನ ಕೆಳಗೆ ಮೃತದೇಹ ಹೂತಿಟ್ಟ ಪತ್ನಿ!

Public TV
1 Min Read

ಮುಂಬೈ: ಬಾಲಿವುಡ್ ಬ್ಲಾಕ್‌ಬಸ್ಟರ್ ‘ದೃಶ್ಯಂ’ ಸಿನಿಮಾ ಮಾದರಿಯಲ್ಲೇ ಕೊಲೆ ಪ್ರಕರಣವೊಂದು ಮಹಾರಾಷ್ಟ್ರದಲ್ಲಿ ದಾಖಲಾಗಿದೆ.

ಪಾಲ್ಘರ್ ಜಿಲ್ಲೆಯ ಮಹಿಳೆಯೊಬ್ಬಳು ತನ್ನ ಪ್ರಿಯಕರನ ಜೊತೆ ಸೇರಿ ಗಂಡನನ್ನು ಕೊಂದು, ಶವವನ್ನು ತಮ್ಮ ಮನೆಯೊಳಗೆ ಹೂತುಹಾಕಿದ್ದಾಳೆ ಎಂದು ವರದಿಯಾಗಿದೆ. ವಿಜಯ್ ಚವಾಣ್ (35) ಕೊಲೆಯಾದ ದುರ್ದೈವಿ. ಕೋಮಲ್ ಚವಾಣ್ (28) ಹತ್ಯೆ ಮಾಡಿದ ಪತ್ನಿ.

ಮುಂಬೈನಿಂದ ಸುಮಾರು 70 ಕಿಲೋಮೀಟರ್ ದೂರದಲ್ಲಿರುವ ನಲಸೋಪರ ಪೂರ್ವದ ಗದ್ಗಪದ ಪ್ರದೇಶದಲ್ಲಿ ಪತ್ನಿ ಜೊತೆ ವಿಜಯ್ ವಾಸವಾಗಿದ್ದ. ಕಳೆದ 15 ದಿನಗಳಿಂದ ಕಾಣೆಯಾಗಿದ್ದ.

ಕೊಲೆಯಾದ ವ್ಯಕ್ತಿ ಸಹೋದರರು ಮನೆಗೆ ಭೇಟಿ ನೀಡಿದ ವೇಳೆ ನೆಲದ ಕೆಲವು ಟೈಲ್ಸ್‌ಗಳು ಇತರೆ ಟೈಲ್ಸ್‌ಗಳ ಬಣದೊಂದಿಗೆ ತಾಳೆಯಾಗದೇ ಇರುವುದನ್ನು ಗಮನಿಸಿದ್ದಾರೆ. ನಂತರ ಟೈಲ್ಸ್‌ಗಳನ್ನು ತೆಗೆದು ನೋಡಿದಾಗ, ಶವ ಪತ್ತೆಯಾಗಿದೆ. ತಕ್ಷಣ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ವಿಜಯ್‌ ಪತ್ನಿಯನ್ನು ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬೆಳಕಿಗೆ ಬಂದಿದೆ. ಪತಿಯನ್ನು ಕೊಲೆ ಮಾಡಿ ದೇಹವನ್ನು ತಮ್ಮ ಮನೆಯ ಟೈಲ್ಸ್‌ ಅಡಿಯಲ್ಲಿ ಹೂತುಹಾಕಿರುವುದು ತನಿಖೆಯಿಂದ ಗೊತ್ತಾಗಿದೆ.

ಆರೋಪಿ ಮಹಿಳೆ ನೆರೆಹೊರೆಯ ಮೋನು ಜೊತೆ ಸೇರಿ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಇವರಿಬ್ಬರೂ ಪ್ರೇಮ ಸಂಬಂಧದಲ್ಲಿದ್ದಾರೆ. ಈಗ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿದ್ದಾರೆ.

Share This Article