ಸಿನಿಮಾ ಟಿಕೆಟ್ ನೀಡದ್ದಕ್ಕೆ ಕೊಲೆ: ಆರೋಪಿಗಳು 5 ತಿಂಗಳ ಬಳಿಕ ಸುಲಭವಾಗಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದು ಹೇಗೆ?

Public TV
2 Min Read

ಬಳ್ಳಾರಿ: ಬಾಹುಬಲಿ ಚಿತ್ರದ ಟಿಕೆಟ್ಟಿಗೆ ಇದೀಗ ಎಲ್ಲೆಡೆ ಭಾರೀ ಬೇಡಿಕೆಯಿದೆ. ಸಾವಿರಾರು ರೂಪಾಯಿ ಕೊಟ್ಟಾದ್ರೂ ಸರಿ ಚಿತ್ರ ನೋಡಬೇಕು ಅಂತಾ ಪೇಕ್ಷಕರು ಮುಗಿಬಿದ್ದು ಟಿಕೆಟ್ ಖರೀದಿ ಮಾಡುತ್ತಿದ್ದಾರೆ. ಆದ್ರೆ ಈ ಹಿಂದೆ ಬಿಡುಗಡೆಯಾಗಿ ಭಾರೀ ಯಶಸ್ವಿ ಕಂಡ ಅಲ್ಲು ಅರ್ಜುನ್ ನಟನೆಯ `ಸರೈನೋಡು’ ತೆಲುಗು ಟಿಕೆಟ್ ನೀಡದ್ದಕ್ಕೆ ಚಿತ್ರಮಂದಿರ ಸೆಕ್ಯೂರಿಟಿ ಗಾರ್ಡ್ ನನ್ನು ಕೊಲೆ ಮಾಡಿದ ಆರೋಪಿಗಳು 5 ತಿಂಗಳ ಬಳಿಕ ಅರೆಸ್ಟ್ ಆಗಿದ್ದಾರೆ.

ಬಳ್ಳಾರಿಯಲ್ಲಿ ತೆಲುಗು ಚಿತ್ರಗಳು ಬಿಡುಗಡೆಯಾದ್ರೆ ಮಧ್ಯರಾತ್ರಿಯೇ ತೆರೆ ಕಾಣುತ್ತವೆ. ಮಧ್ಯರಾತ್ರಿಯೇ ಸಾವಿರಾರು ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಚಿತ್ರ ನೋಡಲು ಮುಗಿಬಿಳೋದು ಮಾಮೂಲಾಗಿದೆ. ಆದ್ರೆ ಕೇಳಿದಷ್ಟು ಟಿಕೆಟ್ ನೀಡಲಿಲ್ಲ ಅನ್ನೋ ಕಾರಣಕ್ಕೆ ಚಿತ್ರಮಂದಿರದ ಸಿಬ್ಬಂದಿಯನ್ನು ಕೊಲೆ ಮಾಡಿರುವುದು ಇದೀಗ ಬಯಲಾಗಿದೆ.

ಏನಿದು ಪ್ರಕರಣ?
ಕಳೆದ ನವಂಬರ್ 1 ರಂದು ಬಳ್ಳಾರಿಯ ರಾಘವೇಂದ್ರ ಚಿತ್ರಮಂದಿರದ ಸೆಕ್ಯೂರಿಟಿ ಗಾರ್ಡ್ ವಂಕಟೇಶನನ್ನು ಕೆಲ ದುಷ್ಕಮಿಗಳು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದರು. ಅಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದ ಬಳ್ಳಾರಿಯ ಬ್ರೂಸಪೇಟೆ ಪೊಲೀಸರು, ಇದೊಂದು ಹಣಕಾಸಿನ ವ್ಯವಹಾರಕ್ಕೆ ಕೊಲೆ ನಡೆದಿರಬಹುದೆಂದು ತನಿಖೆ ಮುಂದುವರೆಸಿದ್ದರು. ಇದೀಗ ಬಳ್ಳಾರಿ ಗ್ರಾಮೀಣ ಠಾಣೆಯ ಪೊಲೀಸರು ಕೊಲೆ ಆರೋಪಿಗಳನ್ನು ಬಂಧಿಸಿದ್ದು, ಅವರ ಹೇಳಿಕೆ ಕಂಡು ಇದೀಗ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. `ಸೈರನೋಡು’ ಚಿತ್ರದ ಟಿಕೆಟ್ ನೀಡದ್ದಕ್ಕೆ ಸೆಕ್ಯೂರಿಟಿ ಗಾರ್ಡ್ ಕೊಲೆ ಮಾಡಿರುವುದು ಇದೀಗ ಬಯಲಾಗಿದೆ.

ಅಲ್ಲು ಅರ್ಜುನ್ ನಟನೆಯ `ಸರೈನೋಡು’ ಎಂಬ ತೆಲುಗು ಚಿತ್ರ ಕಳೆದ ವರ್ಷ ಏಪ್ರಿಲ್ 22 ತಿಂಗಳಲ್ಲಿ ನಗರದ ರಾಘವೇಂದ್ರ ಟಾಕೀಸ್‍ನಲ್ಲಿ ಬಿಡುಗಡೆಯಾಗಿತ್ತು. ಈ ಸಿನಿಮಾ ನೋಡಲು ಬಳ್ಳಾರಿ ತಾಲೂಕಿನ ಕೊಳಗಲ್ಲು ಗ್ರಾಮದ ಆಟೋಚಾಲಕರಾದ ಮೌನೇಶ್ ಅಲಿಯಾಸ್ ಮಡಿಕೆ ಮೇಳಿ (21), ನಾಗೇಶ್ (23) ಮತ್ತೊಬ್ಬ ಸ್ನೇಹಿತನ ಜೊತೆ ಆಗಮಿಸಿದ್ದರು.

ಜನಸಂದಣಿ ಹೆಚ್ಚಾಗಿದ್ದರಿಂದ 3 ಟಿಕೆಟ್ ನೀಡುವಂತೆ ಟಾಕೀಸ್ ಸೆಕ್ಯೂರಿಟಿ ಗಾರ್ಡ್ ವೆಂಕಟೇಶ್‍ಗೆ ಹೆಚ್ಚಿನ ಹಣ ನೀಡಿದ್ದರು. ಆದರೆ ಸೆಕ್ಯೂರಿಟಿ ಗಾರ್ಡ್ ಎರಡೇ ಟಿಕೆಟ್ ನೀಡಿ ಸರಿಮಾಡಿಕೊಳ್ಳಿ ಎಂದಿದ್ದ. ಇದರಿಂದ ರೊಚ್ಚಿಗೆದ್ದ ಈ ಮೂವರು 6 ತಿಂಗಳ ಬಳಿಕ ಅಂದ್ರೆ ನವೆಂಬರ್ 20ಕ್ಕೆ ಸೆಕ್ಯೂರಿಟಿ ಗಾರ್ಡ್ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದರು.

ಆರೋಪಿಗಳು ಸಿಕ್ಕಿಬಿದ್ದಿದ್ದು ಹೇಗೆ?
ಸೋಮವಾರ ಬಳ್ಳಾರಿ ನಗರದ ಹೊರ ವಲಯದ ಗುಗ್ಗರಟ್ಟಿ ಪ್ರದೇಶದ ಹೊನ್ನಳ್ಳಿ ರಸ್ತೆಯಲ್ಲಿ ಎರಡು ಬೈಕ್‍ನಲ್ಲಿ ಬರುತ್ತಿದ್ದ ಈ ಮೂವರು ಗ್ರಾಮೀಣ ಪೊಲೀಸರನ್ನು ಕಂಡು ಬೈಕ್ ಬಿಟ್ಟು ಪರಾರಿಯಾಗಲು ಮುಂದಾಗಿದ್ದರು. ಕೂಡಲೇ ಪೊಲೀಸರು ಇವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಸಂದರ್ಭದಲ್ಲಿ ವಾಚ್‍ಮ್ಯಾನ್ ವೆಂಕಟೇಶ್ ಕೊಲೆ ಪ್ರಕರಣದ ಬಗ್ಗೆ ಬಾಯ್ಬಿಟ್ಟಿದ್ದಾರೆ.

ಕಳೆದ ಮಾರ್ಚ್‍ನಲ್ಲಿ ಬಳ್ಳಾರಿ ತಾಲೂಕಿನ ಹಲಕುಂದಿ ಗ್ರಾಮದಲ್ಲಿ ಮನೆ ಬೀಗ ಮುರಿದು ಕಳವು ಮಾಡಿದ್ದ ಇವರು 98 ಸಾವಿರ ರೂಪಾಯಿ ಮೌಲ್ಯದ ಚಿನ್ನಾಭರಣ ಕದ್ದಿದ್ದರು. ಅಷ್ಟೇ ಅಲ್ಲದೇ ದಮ್ಮೂರು ಹಾಗು ಕಂಪ್ಲಿಯಲ್ಲಿ ಎರಡು ಬೈಕ್ ಕಳ್ಳತನ ಮಾಡಿದ ಪ್ರಕರಣಗಳನ್ನು ಒಪ್ಪಿಕೊಂಡಿದ್ದಾರೆಂದು ಎಎಸ್‍ಪಿ ಆರ್ ಚೇತನ್ ತಿಳಿಸಿದ್ದಾರೆ.

ಆಟೋ ಚಾಲಕರಾಗಿರುವ ಈ ಆರೋಪಿಗಳು ಅನೇಕ ಸಣ್ಣಪುಟ್ಟ ಕಳ್ಳತನ ಪ್ರಕರಣಗಳನ್ನು ಮಾಡಿದ್ದಾರೆಂದು ತಿಳಿದುಬಂದಿದೆ. ಬಂಧಿತರನ್ನು ಇನ್ನಷ್ಟು ವಿಚಾರಣೆ ಮಾಡಲಾಗುವುದು ಎಂದು ಎಸ್‍ಪಿ ಹೇಳೀದ್ದಾರೆ. ಗ್ರಾಮೀಣ ಡಿವೈಎಸ್‍ಪಿ ಸುರೇಶ್, ಸಿಪಿಐ ಪ್ರಸಾದ್ ಗೋಕುಲೆ, ಪಿಎಸ್‍ಐ ವಸಂತ್ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *