ಬೆಂಗಳೂರು: ರಾತ್ರಿ ಮನೆಗೆ ನುಗ್ಗಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‍ನಲ್ಲಿ ನಡೆದಿದೆ.
ವಿಗ್ನೇಶ್ ಅಲಿಯಾಸ್ ವಿನಾಯಕ ಕೊಲೆಯಾದ ಯುವಕ. ಭಾನುವಾರ ತಡರಾತ್ರಿ 1 ಗಂಟೆ ಸುಮಾರಿಗೆ ವಿಗ್ನೇಶ್ ಮನೆಗೆ ನುಗ್ಗಿದ ಐವರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದಾರೆ.
ಮೃತ ವಿಗ್ನೇಶ್ ಅಪರಾಧ ಹಿನ್ನೆಲೆಯುಳ್ಳ ಯುವಕನಾಗಿದ್ದು, ಮಹಾಲಕ್ಷ್ಮಿ ಲೇಔಟ್‍ನ ಮನೆಯಲ್ಲಿ ವಾಸಿಸುತ್ತಿದ್ದನು. ಮೊಬೈಲ್ ಕಳ್ಳತನ, ಸುಲಿಗೆ ಹಾಗೂ ಕೊಲೆಯತ್ನ ಸೇರಿದಂತೆ ಹಲವು ಪ್ರಕರಣಗಳಲ್ಲಿ ವಿಗ್ನೇಶ್ ಆರೋಪಿಯಾಗಿದ್ದನು.
ಇದೀಗ ಐದಾರು ದುಷ್ಕರ್ಮಿಗಳು ಏಕಾಏಕಿ ಮನೆಗೆ ನುಗ್ಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಹಳೇ ವೈಷಮ್ಯದಿಂದಲೇ ಈ ಕೃತ್ಯ ಎಸಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಈ ಕುರಿತು ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.