ಪತ್ನಿ ಹತ್ಯೆಗೈದ ಆರೋಪಿಯನ್ನ ಬಂಧಿಸಲು ತೆರಳ್ತಿದ್ದಾಗ ಮಹಿಳೆ ಸಾವು

Public TV
2 Min Read

– ಆರೋಪಿಯನ್ನು ಬಂಧಿಸಬೇಕಾದ ಪೊಲೀಸರೇ ಆರೋಪಿಗಳಾದ್ರು
– ಮಹಿಳೆ ಸ್ಕೂಟಿಗೆ ಪೊಲೀಸ್ ಜೀಪ್ ಡಿಕ್ಕಿ

ಹಾವೇರಿ: ಪತ್ನಿಯನ್ನು ಹತ್ಯೆ ಮಾಡಿದ್ದ ಆರೋಪಿಯನ್ನು ಬಂಧಿಸಲು ಹೋಗುತ್ತಿದ್ದ ಪೊಲೀಸ್ ಜೀಪ್ ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಮಹಿಳೆಯೊಬ್ಬಳು ಮೃತಪಟ್ಟಿರುವ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನಲ್ಲಿ ನಡೆದಿದೆ.

ಶೇಖವ್ವ ಕಂಬಳಿ (34) ಕೊಲೆಯಾದ ಮಹಿಳೆ. ಸವಿತಾ ಶಶಿಮಠ (26) ಅಪಘಾದಲ್ಲಿ ಮೃತಪಟ್ಟ ಮಹಿಳೆ. ಬುಧವಾರ ತಡರಾತ್ರಿ ರಾಣೇಬೆನ್ನೂರು ತಾಲೂಕಿನ ಕೂನಬೇವು ತಾಂಡಾದಲ್ಲಿ ಪತಿ ಚಂದ್ರಪ್ಪ ಕಂಬಳಿ ಪತ್ನಿ ಶೇಖವ್ವಳನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದನು. ಈ ದಂಪತಿಗೆ ಒಬ್ಬ ಮಗನಿದ್ದು, ಕುಟುಂಬಕ್ಕೆ ಎಂದು ಎರಡು ಎಕರೆ ಜಮೀನಿದೆ.

ಏನಿದು ಪ್ರಕರಣ:
ಆರೋಪಿ ಪತಿ ಚಂದ್ರಪ್ಪ ಟಾಟಾ ಏಎಸ್ ವಾಹನ ಓಡಿಸುತ್ತಿದ್ದು, ಕುಡಿತದ ಚಟಕ್ಕೆ ದಾಸನಾಗಿದ್ದನು. ಕುಡಿತದ ಮತ್ತಿನಲ್ಲಿ ಆಗಾಗ ಪತ್ನಿಯ ಜೊತೆ ಜಗಳ ಮಾಡುತ್ತಿದ್ದನು. ಮೂರ್ನಾಲ್ಕು ಬಾರಿ ಗ್ರಾಮದ ಮುಖಂಡರು ರಾಜಿ ಪಂಚಾಯ್ತಿ ಸಹ ಮಾಡಿದ್ದರು. ಆದರೂ ಚಂದ್ರಪ್ಪ ಸುಧಾರಣೆ ಆಗಿರಲಿಲ್ಲ. ಅಷ್ಟೇ ಅಲ್ಲದೇ 3-4 ಬಾರಿ ಪತ್ನಿ ಶೇಖವ್ವಳ ಮೇಲೆ ಹಲ್ಲೆಗೆ ಯತ್ನಿಸಿ ವಿಫಲನಾಗಿದ್ದನು. ಆದರೆ ನಿನ್ನೆ ರಾತ್ರಿ ಮನೆಗೆ ಬಂದ ಪತಿ ಚಂದ್ರಪ್ಪ ಶೇಖವ್ವಳನ್ನ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ನಂತರ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ ಎಂದು ಮೃತ ಸಂಬಂಧಿ ಮಹಾದೇವಪ್ಪ ಹೇಳಿದ್ದಾರೆ.

ಶೇಖವ್ವಳ ಅಕ್ಕಪಕ್ಕದಲ್ಲಿ ಮಗ ಮತ್ತು ಸಂಬಂಧಿಕರು ಮಲಗಿಕೊಂಡಿದ್ದರು. ಆದರೆ ವಿದ್ಯುತ್ ಸಂಪರ್ಕ ಕಡಿತಗೊಂಡು ಮನೆಯಲ್ಲಿ ಕತ್ತಲೆ ಆವರಿಸಿತ್ತು. ಒಮ್ಮೆ ಮನೆಗೆ ಬಂದು ಶೇಖವ್ವ ಮಲಗಿದ್ದನ್ನ ಪತಿ ಚಂದ್ರಪ್ಪ ನೋಡಿಕೊಂಡು ಹೋಗಿದ್ದನು. 2ನೇ ಬಾರಿಗೆ ಬಂದು ಅಕ್ಕಪಕ್ಕದಲ್ಲಿ ಮಲಗಿದವರಿಗೆ ಗೊತ್ತಾಗದಂತೆ ಹತ್ಯೆ ಮಾಡಿದ್ದಾನೆ. ಪತಿಯ ಹೊಡೆತಕ್ಕೆ ಪತ್ನಿ ಶೇಖವ್ವ ನರಳಾಡುತ್ತಿದ್ದನ್ನು ಕಂಡು ಅಕ್ಕಪಕ್ಕ ಮಲಗಿದ್ದ ಸಂಬಂಧಿಕರು ಎಚ್ಚರಗೊಂಡಿದ್ದಾರೆ. ಆಗ ಪತಿ ಚಂದ್ರಪ್ಪ ಅಲ್ಲಿಂದ ಪರಾರಿ ಆಗಿದ್ದಾನೆ.

ಅಪಘಾತ:
ಈ ಬಗ್ಗೆ ವಿಷಯ ತಿಳಿದು ಸ್ಥಳಕ್ಕೆ ರಾಣೇಬೆನ್ನೂರು ಗ್ರಾಮೀಣ ಠಾಣಾ ಪೊಲೀಸರು ಬಂದು ಪರಿಶೀಲನೆ ನಡೆಸಿ ಆರೋಪಿ ಪತ್ತೆಗಾಗಿ ಜಾಲ ಬೀಸಿದ್ದರು. ಪಿಎಸ್‍ಐ ಸುನೀಲ್‍ಕುಮಾರ್ ಮತ್ತು ಸಿಬ್ಬಂದಿ ಆರೋಪಿ ಚಂದ್ರಪ್ಪನ ಸುಳಿವು ಹಿಡಿದುಕೊಂಡು ಬಂಧಿಸಲು ತೆರಳುತ್ತಿದ್ದರು. ಇದೇ ವೇಳೆ ವೇಗದಲ್ಲಿ ತೆರಳುವಾಗ ನಗರದ ಹೊರವಲಯದಲ್ಲಿರುವ ಮಾಗೋಡ ರಸ್ತೆಯಲ್ಲಿ ಎದುರಿಗೆ ಬರುತ್ತಿದ್ದ ಸ್ಕೂಟಿಗೆ ಪೊಲೀಸ್ ಜೀಪ್ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಕೂಟಿಯಲ್ಲಿದ್ದ ನಗರದ ಖಾಸಗಿ ಫೈನಾನ್ಸ್ ನಲ್ಲಿ ಕೆಲಸ ಮಾಡುತ್ತಿದ್ದ 26 ವರ್ಷದ ಸವಿತಾ ಶಶಿಮಠ ಮೃತಪಟ್ಟಿದ್ದಾಳೆ.

ಸವಿತಾ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಸಂಕನೂರು ಗ್ರಾಮದವಳು ಎನ್ನಲಾಗಿದೆ. ಕೆಲವು ವರ್ಷಗಳಿಂದ ರಾಣೇಬೆನ್ನೂರು ನಗರದಲ್ಲಿ ಕೆಲಸ ಮಾಡಿಕೊಂಡಿದ್ದಳು. ಪಿಎಸ್‍ಐ ಸುನೀಲ್ ಕುಮಾರ್ ಇದ್ದ ಜೀಪನ್ನ ಚಾಲಕ ಗಣೇಶ್ ಓಡಿಸುತ್ತಿದ್ದನು. ಅಪಘಾತದ ನಂತರ ಪೊಲೀಸರು ಒಂದು ಕ್ಷಣ ಗಾಬರಿ ಆಗಿದ್ದು, ಆರೋಪಿ ಪತ್ತೆಗೆ ಹೊರಟವರೇ ಈಗ ಆರೋಪಿ ಆಗುವ ಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ ಪತ್ನಿಯನ್ನ ಹತ್ಯೆ ಮಾಡಿದ ಆರೋಪಿ ಮಾತ್ರ ಇನ್ನೂ ಪೊಲೀಸರ ಕೈಗೆ ಸಿಕ್ಕಿ ಬಿದ್ದಿಲ್ಲ. ಸದ್ಯಕ್ಕೆ ಮೃತದೇಹವನ್ನ ಪೊಲೀಸರು ಮರಣೋತ್ತರ ಪರೀಕ್ಷೆಗೆಂದು ತಾಲೂಕು ಆಸ್ಪತ್ರೆಗೆ ರವಾನಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *