ಸೈಫ್‌ ಮೇಲೆ ಹಲ್ಲೆ ಎಸಗಿದ ದಾಳಿಕೋರ ಬಾಂಗ್ಲಾ ಪ್ರಜೆ: ಮುಂಬೈ ಪೊಲೀಸ್‌

Public TV
2 Min Read

ಮುಂಬೈ: ನಟ ಸೈಫ್ ಅಲಿ ಖಾನ್ (Saif Ali Khan) ಅವರ ಮುಂಬೈ ಮನೆಗೆ ನುಗ್ಗಿ ನಟನಿಗೆ ಆರು ಬಾರಿ ಇರಿದ ಹಲ್ಲೆಕೋರನನ್ನು ಬಂಧಿಸಲಾಗಿದ್ದು, ಆತ 5-6 ತಿಂಗಳ ಹಿಂದೆ ಬಾಂಗ್ಲಾದೇಶದಿಂದ (Bangladesh) ಅಕ್ರಮವಾಗಿ ಭಾರತಕ್ಕೆ ಬಂದಿದ್ದಾನೆ ಎಂದು ಮುಂಬೈ ಪೊಲೀಸರು (Mumbai Police) ಹೇಳಿದ್ದಾರೆ.

ಇಂದು ಬೆಳಿಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಪಿ ದೀಕ್ಷಿತ್ ಗೆಡಮ್, ಸೈಫ್‌ ಅಲಿಖಾನ್‌ ಮನೆಯಲ್ಲಿ ನಡೆದ ಕಳ್ಳತನ (Theft) ಯತ್ನಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಥಾಣೆಯಲ್ಲಿ ಬಂಧಿಸಲಾಗಿದೆ. ಆರೋಪಿಯನ್ನು ಮೊಹಮ್ಮದ್ ಸರಿಫುಲ್ ಇಸ್ಲಾಂ ಶೆಹಜಾದ್ (Mohammad Sariful Islam Shehzad) ಎಂದು ಗುರುತಿಸಲಾಗಿದೆ ಎಂದರು.

ಈ ಆರೋಪಿ ಬಾಂಗ್ಲಾದೇಶದವನಾಗಿರಬಹುದು ಎಂದು ತನಿಖೆಯಿಂದ ತಿಳಿದುಬಂದಿದೆ. ಅವನ ಬಳಿ ಯಾವುದೇ ಭಾರತೀಯ ದಾಖಲೆಗಳಿಲ್ಲ. ಅವನು ಬಾಂಗ್ಲಾದೇಶದವನೆಂದು ನಾವು ಶಂಕಿಸಿದ್ದೇವೆ, ನಾವು ತನಿಖೆ ನಡೆಸುತ್ತಿದ್ದೇವೆ ಮತ್ತು ಅವನ ವಿರುದ್ಧದ ಪ್ರಕರಣಕ್ಕೆ ಪಾಸ್‌ಪೋರ್ಟ್ ಕಾಯ್ದೆಯ ಆರೋಪಗಳನ್ನು ಸೇರಿಸಿದ್ದೇವೆ ಎಂದು ತಿಳಿಸಿದರು.

ಆರೋಪಿ ಬಾಂಗ್ಲಾದೇಶದವನೆಂದು ಸೂಚಿಸುವ ಕೆಲವು ವಸ್ತುಗಳನ್ನು ಆತನಿಂದ ವಶಪಡಿಸಿಕೊಂಡಿದ್ದೇವೆ. ಅವನು ಭಾರತಕ್ಕೆ ಅಕ್ರಮವಾಗಿ ಬಂದು ತನ್ನ ಹೆಸರನ್ನು ಬಿಜೋಯ್ ದಾಸ್ ಎಂದು ಬದಲಾಯಿಸಿಕೊಂಡಿದ್ದಾನೆ. ಸುಮಾರು ನಾಲ್ಕು ತಿಂಗಳಿನಿಂದ ಮುಂಬೈ ಸುತ್ತಮುತ್ತಲ ಪ್ರದೇಶದಲ್ಲಿ ವಾಸಿಸುತ್ತಿದ್ದ. ನಂತರ ಮನೆಗೆಲಸದ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ. ಮೊದಲ ಬಾರಿಗೆ ಸೈಫ್‌ ನಿವಾಸ ಪ್ರವೇಶಿಸಿದ್ದಾನೆ. ದರೋಡೆ ಮಾಡುವ ಉದ್ದೇಶದಿಂದಲೇ ಆತ ಮನೆಗೆ ಪ್ರವೇಶಿಸಿದ್ದ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಕಸ್ಟಡಿಗೆ ಪಡೆಯಲಾಗುವುದು. ನಂತರ ಹೆಚ್ಚಿನ ತನಿಖೆ ನಡೆಯಲಿದೆ ಎಂದು ಹೇಳಿದರು.

ಮೊಹಮ್ಮದ್ ಸರಿಫುಲ್ ಇಸ್ಲಾಂ ಶೆಹಜಾದ್ ವಿಜಯ್ ದಾಸ್, ಬಿಜೋಯ್ ದಾಸ್ ಮತ್ತು ಮೊಹಮ್ಮದ್ ಇಲಿಯಾಸ್ ಸೇರಿದಂತೆ ಹಲವು ಹೆಸರುಳನ್ನು ಇಟ್ಟುಕೊಂಡು ಓಡಾಡುತ್ತಿದ್ದ.

Share This Article