ಫಿಟ್ನೆಸ್‍ಗಾಗಿ ತಂದೆ ಜೊತೆ ಸೈಕ್ಲಿಂಗ್ – ಬಾಲಕನಿಗೆ ಡಿಕ್ಕಿ ಹೊಡೆದ ಟ್ರಕ್

Public TV
2 Min Read

ಮುಂಬೈ: ಜೋಗೇಶ್ವರಿ-ವಿಕ್ರೋಲಿ ಸಂಪರ್ಕ ರಸ್ತೆಯಲ್ಲಿ(ಜೆವಿಎಲ್‍ಆರ್) 12 ವರ್ಷದ ಬಾಲಕ ತನ್ನ ತಂದೆ ಜೊತೆ ಸೈಕ್ಲಿಂಗ್‍ಗೆ ಹೋಗುತ್ತಿದ್ದನು. ಆದರೆ ಹಿಂದಿನಿಂದ ವೇಗವಾಗಿ ಬಂದ ಟ್ರಕ್ ಬಾಲಕನಿಗೆ ಡಿಕ್ಕಿ ಹೊಡೆದಿದ್ದು, ಬಾಲಕ ಮೃತಪಟ್ಟಿದ್ದಾನೆ.

ಭಾನುವಾರ 7ನೇ ತರಗತಿಯ ವಿದ್ಯಾರ್ಥಿ ಅಕ್ಷ್ ಮಾಲು, ಕಾರು ಉತ್ಪಾದನಾ ಕಂಪನಿಯ ಜನರಲ್ ಮ್ಯಾನೇಜರ್ ಆಗಿದ್ದ ತಂದೆ ಮಧುರೇಂದ್ರ ಮಾಲು(42) ಮತ್ತು ಇತರ ಕೆಲವು ಸೈಕ್ಲಿಸ್ಟ್‍ಗಳೊಂದಿಗೆ ಸೈಕ್ಲಿಂಗ್‍ಗಾಗಿ ಹೋಗಿದ್ದನು. ಈ ವೇಳೆ ಜೆವಿಎಲ್‍ಆರ್ ರಸ್ತೆಯಲ್ಲಿ ಇವರು ಸೈಕ್ಲಿಂಗ್ ಮಾಡುತ್ತಿದ್ದಾಗ ಹಿಂದಿನಿಂದ ವೇಗವಾಗಿ ಬಂದ ಟ್ರಕ್ ಅಕ್ಷ್ ಸೈಕಲ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ನಂತರ ಚಾಲಕ ಟ್ರಕ್‍ನನ್ನು ವೇಗವಾಗಿ ಓಡಿಸಿಕೊಂಡು ಹೋಗಿದ್ದಾನೆ. ಆದರೆ ಸೋಮವಾರ ಎಂಐಡಿಸಿ ಪೊಲೀಸರು ಜೋಗೇಶ್ವರಿ(ಪೂರ್ವ)ಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: 99 ವರ್ಷದ ವೃದ್ಧೆಯನ್ನೂ ಬಿಡದ ಪಾಪಿ – ಹಿಡನ್ ಕ್ಯಾಮೆರಾದಲ್ಲಿ ಕ್ರೌರ್ಯ ಸೆರೆ!

ಡಿಸಿಪಿ ಮಹೇಶ್ವರ್ ರೆಡ್ಡಿ ಈ ಕುರಿತು ಪ್ರತಿಕ್ರಿಯಿಸಿದ್ದು, ಹುಡುಗನು ತನ್ನ ತಂದೆ ಮತ್ತು ಸ್ನೇಹಿತರಾದ ಅಲೋಕ್, ಮಿತೇಶ್ ಅವರನ್ನೊಳಗೊಂಡ ಸೈಕ್ಲಿಸ್ಟ್‍ಗಳ ಗುಂಪಿನೊಂದಿಗೆ ಸವಾರಿ ಮಾಡುತ್ತಿದ್ದನು. ಅವರು ಪೊವೈ ತಲುಪಿದಾಗ ವೇಗದಿಂದ ಬಂದ ಟ್ರಕ್ ಬಾಲಕನಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬಾಲಕನ ತಲೆಗೆ ತೀವ್ರ ಗಾಯವಾಗಿದೆ. ತಕ್ಷಣ ಬಾಲಕನ ತಂದೆ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೃತಪಟ್ಟಿದ್ದಾನೆ. ಘಟನೆ ನಡೆದ 36 ಗಂಟೆಗಳ ಒಳಗೆ ಟ್ರಕ್ ಚಾಲಕನನ್ನು ಬಂಧಿಸಲಾಯಿತು ಎಂದು ಹೇಳಿದರು.

ಫಿಟ್ನೆಸ್‍ಗಾಗಿ ಸೈಕ್ಲಿಂಗ್!
ಮಧುರೇಂದ್ರ ಅವರಿಗೆ ಇಬ್ಬರು ಗಂಡುಮಕ್ಕಳು ಇದ್ದಾರೆ. ಅವರಲ್ಲಿ ಅಕ್ಷ್ ದೊಡ್ಡವನಾಗಿದ್ದನು. ಮಧುರೇಂದ್ರ ಅವರು ಸಾಹಸ ಕ್ರೀಡೆ ಮತ್ತು ಫಿಟ್ನೆಸ್ ಚಟುವಟಿಕೆಗಳಲ್ಲಿ ಯಾವಾಗಲೂ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ಮಧುರೇಂದ್ರ ಅವರು ವಿಕೇಂಡ್ ಮತ್ತು ರಜಾದಿನಗಳಲ್ಲಿ ಮಗನೊಂದಿಗೆ ಸೈಕ್ಲಿಂಗ್‍ಗೆ ಹೋಗುತ್ತಿರುತ್ತಾರೆ. ಅದೇ ಭಾನುವಾರವೂ ಹೋಗಿದ್ದು, ಈ ದುರದೃಷ್ಟಕರ ಘಟನೆ ನಡೆದಿದೆ. ಘಟನೆ ನಡೆದಾಗ ಮಧುರೇಂದ್ರ ಸಹ ಮಗನಿಂದ ಸ್ವಲ್ಪ ದೂರದಲ್ಲೇ ಇದ್ದು, ತಂದೆಯ ಎದುರೆ ಮಗ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

For How Long Should You Do Cycling For Weight Loss? Expert Reveals Important Do's And Don'ts Of Cycling

ನನ್ನ ಮಗನ ಬೈಸಿಕಲ್ ಡಿಕ್ಕಿ ಹೊಡೆದ ನಂತರ ಟ್ರಕ್ ವೇಗವಾಗಿ ಓಡಿಸಲಾಯಿತು. ನಾನು ನನ್ನ ಮಗನನ್ನು ಆಸ್ಪತ್ರೆಗೆ ಸೇರಿಸಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವನು ಸಾವನ್ನಪ್ಪಿದ್ದಾನೆ ಎಂದು ಮಧುರೇಂದ್ರ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದರು. ಇದನ್ನೂ ಓದಿ: ತಮಿಳುನಾಡಿನ 16 ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ!

ಎಂಐಡಿಸಿ ಪೊಲೀಸ್ ಹಿರಿಯ ಇನ್ಸ್‍ಪೆಕ್ಟರ್ ಸತೀಶ್ ಗಾಯಕ್ವಾಡ್ ಈ ಕುರಿತು ಮಾತನಾಡಿದ್ದು, ಟ್ರಕ್ ಚಾಲಕ ಘಟನೆ ನೋಡಿ ತನಗೆ ಹೊಡೆಯಬಹುದೆಂಬ ಭಯದಿಂದ ಟ್ರಕ್‍ನನ್ನು ವೇಗವಾಗಿ ಓಡಿಸಿದ್ದಾನೆ. ಆದರೆ ಟ್ರಕ್‍ನನ್ನು ಸಿಸಿಟಿವಿ ಫೂಟೇಜ್ ಸಹಾಯದಿಂದ ಗುರುತಿಸಿದ್ದೆವು ಎಂದು ವಿವರಿಸಿದರು.

ಟ್ರಕ್ ಬಗ್ಗೆ ಮಾಹಿತಿ ತಿಳಿದುಕೊಂಡು ಆರೋಪಿ ಚಾಲಕ ಪ್ರೇಮಲಾಲ್ ವರ್ಮಾ(40)ನನ್ನು ಬಂಧಿಸಲಾಗಿದೆ. ಆತ ಅಪರಾಧವನ್ನು ಒಪ್ಪಿಕೊಂಡಿದ್ದು, ಐಪಿಸಿ ಸೆಕ್ಷನ್ 304(ಎ) (ನಿರ್ಲಕ್ಷ್ಯದಿಂದ ಸಾವಿಗೆ ಕಾರಣ) ಮೋಟಾರು ವಾಹನ ಕಾಯಿದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇಂದು ಆರೋಪಿಯನ್ನು ಅಂಧೇರಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *