ಮುಂಬೈ: ಮನೆಕೆಲಸಕ್ಕೆ ಸಹಾಯ ಮಾಡಲಿಲ್ಲವೆಂದು ತಾಯಿ ಬೈದರು ಅಂತ ಮನನೊಂದು 18 ವರ್ಷದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಮುಂಬೈನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಸೋಮವಾರ ರಾತ್ರಿ ನಗರದ ಅಂಬೋಲಿ ಮನೆಯಲ್ಲಿ ನೀಲೇಶ್ ಗುಪ್ತಾ ಎಂಬ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆಕಸ್ಮಿಕ ಸಾವು ಅಂತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈಗಾಗಲೇ ನಿಲೇಶ್ ಗೆ ಪರೀಕ್ಷೆ ಮುಗಿದಿದ್ದು, ಹೀಗಾಗಿ ರಜೆಯಲ್ಲಿ ಮಜಾ ಮಾಡುತ್ತಿದ್ದನು. ಅಲ್ಲದೇ ಈತ ನಿಧಾನವಾಗಿ ತನ್ನ ಕೆಲಸಗಳನ್ನು ಮಾಡುತ್ತಿದ್ದನು. ಇದರಿಂದ ತಾಯಿ ಆತನ ವಿರುದ್ಧ ಸಿಟ್ಟುಗೊಂಡಿದ್ದರು. ಆತ ತಾಯಿಯೊಂದಿಗೆ ಮನೆ ಕೆಲಸವನ್ನು ಸರಿಯಾಗಿ ಮಾಡುತ್ತಿರಲಿಲ್ಲ. ಈ ವಿಚಾರಕ್ಕೆ ಸಂಬಂಧಿಸಿದಂತೆ ತಾಯಿ ಗುಪ್ತಾನಿಗೆ ಬೈಯುತ್ತಿದ್ದರು.
ಸೋಮವಾರ ಮನೆಕೆಲಸ ಮಾಡು ಎಂದು ತಾಯಿ ಹೇಳಿದ್ದರೂ ಆತ ಟಿವಿ ನೋಡುತ್ತಾ ಕಾಲ ಕಳೆಯುತ್ತಿದ್ದ. ಇದೇ ವಿಚಾರವಾಗಿ ಅಂದು ಸಂಜೆಯೂ ತಾಯಿ ಆತನಿಗೆ ಬೈದಿದ್ದರು. ಇದರಿಂದ ಮನನೊಂದ ಆತ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಕೈಗೊಂಡಿದ್ದಾನೆ.
ತಾಯಿ ಮತ್ತು ಸಹೋದರಿ ಹೊರಹೋಗುವುದನ್ನೇ ಕಾಯುತ್ತಿದ್ದ ಆತ ಕೆಲಸ ನಿಮಿತ್ತ ಮನೆಯಿಂದ ಹೊರಗಡೆ ಇವರಿಬ್ಬರು ತೆರಳುತ್ತಿದ್ದಂತೆಯೇ ಅಂದ್ರೆ ರಾತ್ರಿ 9.30ರ ಸುಮಾರಿಗೆ ತನ್ನ ಅಮ್ಮನ ಸೀರೆಯಲ್ಲೇ ನೇಣಿಗೆ ಶರಣಾಗಿದ್ದಾನೆ.
ತಾಯಿ ಹಾಗೂ ಸಹೋದರಿ ಮನೆಗೆ ಮತ್ತೆ ಹಿಂದಿರುಗಿದಾಗ ಮನೆಯ ಬಾಗಿಲು ಮುಚ್ಚಿತ್ತು. ಹಲವು ಬಾರಿ ಬಾಗಿಲು ಬಡಿದರೂ ಒಳಗಿದ್ದ ಗುಪ್ತಾ ಮಾತ್ರ ಬಾಗಿಲು ತೆರೆಯಲಿಲ್ಲ. ಇದರಿಂದ ಗಾಬರಿಗೊಳಗಾದ ಅವರು ನೆರೆಹೊರೆಯವರಿಗೆ ಸುದ್ದಿ ಮುಟ್ಟಿಸಿದ್ರು. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯರು ಬಾಗಿಲು ಒಡೆದು ಒಳಗೆ ಹೋದ್ರೆ ಗುಪ್ತಾ ನೇಣಿಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ಕೂಡಲೇ ಆತನ್ನು ಕುಣಿಕೆಯಿಂದ ತೆಗೆದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಆತ ಅದಾಗಲೇ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.
ಸದ್ಯ ಗುಪ್ತಾ ಆತ್ಮಹತ್ಯೆ ಮಾಡಿಕೊಳ್ಳಲು ನಿಖರ ಕಾರಣವೇನೆಂದು ತಿಳಿಯಲು ಆತನ ಗೆಳೆಯರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೇ ಏನಾದ್ರೂ ಬೇರೆ ವಿಚಾರಕ್ಕೆ ಸಂಬಂಧಿಸಿದಂತೆ ಖಿನ್ನತೆಗೊಳಗಾಗಿದ್ದಾನೋ ಎಂಬುದರ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ. ಆದ್ರೆ ಆತನೇ ಆತ್ಮಹತ್ಯೆಗೆ ಶರಣಾಗಿರುವುದು ನಿಜವೆಂದು ಅಂಬೋಲಿ ಪೊಲೀಸ್ ಠಾಣೆಯ ಹಿರಿಯ ಎಸ್‍ಪಿ ಭರತ್ ಗಾಯಕ್‍ವಾಡ್ ಸ್ಪಷ್ಟನೆ ನೀಡಿದ್ದಾರೆ.