ಟ್ರೈ ಮಾಡಿ ಮುಂಬೈ ಮಸಾಲ ಸ್ಯಾಂಡ್‌ವಿಚ್….

Public TV
3 Min Read

ಬೀದಿ ಬದಿಯ ತಿನಿಸುಗಳು ಸಾಮಾನ್ಯವಾಗಿ ಎಲ್ಲರನ್ನೂ ಆಕರ್ಷಿಸುತ್ತವೆ. ಆದರೆ ಇದರಿಂದ ಆರೋಗ್ಯ ಕೆಡುವ ಸಾಧ್ಯತೆಗಳಿವೆ. ಹೀಗಾಗಿ ಅದನ್ನು ಮನೆಯಲ್ಲಿಯೇ ಮಾಡಿ ಎಲ್ಲರೊಂದಿಗೆ ಕೂತು ತಿನ್ನುವ ಮಜವೇ ಬೇರೆ. ಇವತ್ತು ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುವಂತಹ ಮುಂಬೈ ಸ್ಪೆಷಲ್‌ ಮಸಾಲ ಸ್ಯಾಂಡ್‌ವಿಚ್ ಮಾಡುವುದು ಹೇಗೆ ಎಂದು ತಿಳಿಸಿಕೊಡುತ್ತಿದ್ದೇವೆ. ನಿಮ್ಮ ಮನೆಯಲ್ಲೂ ಈ ರೆಸಿಪಿ ಟ್ರೈ ಮಾಡಿ ಆನಂದಿಸಿ. ಇದನ್ನೂ ಓದಿ: ಸಖತ್ ರುಚಿಯಾದ ಸ್ಟಾರ್ಟರ್ ರೆಸಿಪಿ – ಬೇಬಿ ಕಾರ್ನ್ ಪೆಪ್ಪರ್ ಫ್ರೈ ಮಾಡಿ 

ಬೇಕಾಗುವ ಸಾಮಾಗ್ರಿಗಳು:
ಕೊತ್ತಂಬರಿ ಸೊಪ್ಪು – 1 ಕಪ್
ಚಾಟ್ ಮಸಾಲ – ಅರ್ಧ ಚಮಚ
ಹಸಿ ಮೆಣಸಿನಕಾಯಿ – 4
ಆಲೂಗಡ್ಡೆ- 4
ಎಣ್ಣೆ – ಸ್ವಲ್ಪ
ಸಾಸಿವೆ – ಅರ್ಧ ಚಮಚ
ಜೀರಿಗೆ – ಅರ್ಧ ಚಮಚ
ಇಂಗು – ಒಂದು ಚಿಟಿಕೆ
ಅರಶಿಣ – ಕಾಲು ಚಮಚ
ಕರಿಬೇವಿನ ಎಲೆ – 8ರಿಂದ 10
ಈರುಳ್ಳಿ- 1
ಟೊಮೆಟೊ – 1
ಬ್ರೆಡ್ – ಅಗತ್ಯಕ್ಕೆ ಬೇಕಾದಷ್ಟು
ಬೆಣ್ಣೆ- ಸ್ವಲ್ಪ

ಮಾಡುವ ವಿಧಾನ:

  • ಮೊದಲಿಗೆ ಒಂದು ಮಿಕ್ಸಿ ಜಾರಿಗೆ 1 ಕಪ್ ಕೊತ್ತಂಬರಿ ಸೊಪ್ಪು, ಅರ್ಧ ಚಮಚ ಚಾಟ್ ಮಸಾಲ ಹಾಗೂ 2 ಹಸಿ ಮೆಣಸಿನಕಾಯಿ ಹಾಕಿಕೊಂಡು ಚೆನ್ನಾಗಿ ರುಬ್ಬಿಕೊಳ್ಳಿ. ರುಬ್ಬಿಕೊಳ್ಳಲು ಕಷ್ಟವಾದರೆ 2 ಚಮಚ ನೀರನ್ನು ಸೇರಿಸಿಕೊಳ್ಳಿ. ನಂತರ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿಕೊಳ್ಳಿ. ಬಳಿಕ ರುಬ್ಬಿದ ಮಿಶ್ರಣವನ್ನು ಒಂದು ಬೌಲ್‌ಗೆ ಹಾಕಿ ಪಕ್ಕಕ್ಕಿಡಿ.
  • ನಂತರ 3ರಿಂದ 4 ಆಲೂಗಡ್ಡೆಯನ್ನು ಚೆನ್ನಾಗಿ ತೊಳೆದು ಕುಕ್ಕರ್ ಅಥವಾ ಸ್ಟೀಮರ್‌ನಲ್ಲಿ ಚೆನ್ನಾಗಿ ಬೇಯಿಸಿಕೊಳ್ಳಿ. ಆಲೂಗಡ್ಡೆ ಬಿಸಿ ಇರುವಾಗಲೇ ಅದರ ಸಿಪ್ಪೆಯನ್ನು ತೆಗೆದು ಗಂಟಿರದಂತೆ ಚೆನ್ನಾಗಿ ಕಲಸಿ ಒಂದು ಬೌಲ್‌ನಲ್ಲಿ ಇಟ್ಟುಕೊಳ್ಳಿ.
  • ಒಂದು ಪ್ಯಾನ್ ಬಿಸಿಗಿಟ್ಟು ಅದಕ್ಕೆ ಅರ್ಧ ಚಮಚ ಎಣ್ಣೆ ಹಾಕಿ. ಎಣ್ಣೆ ಕಾದ ನಂತರ ಅದಕ್ಕೆ ಅರ್ಧ ಚಮಚ ಸಾಸಿವೆ ಹಾಕಿಕೊಳ್ಳಿ. ಸಾಸಿವೆ ಸಿಡಿಯಲು ಪ್ರಾರಂಭವಾದ ಮೇಲೆ ಅದಕ್ಕೆ ಅರ್ಧ ಚಮಚ ಜೀರಿಗೆ ಮತ್ತು ಒಂದು ಚಿಟಿಕೆ ಇಂಗು ಹಾಕಿಕೊಳ್ಳಿ. ಜೀರಿಗೆ ಬಣ್ಣ ಸ್ವಲ್ಪ ಬದಲಾದ ಬಳಿಕ ಅದಕ್ಕೆ ಸಣ್ಣಗೆ ಹೆಚ್ಚಿದ 2 ಹಸಿ ಮೆಣಸಿನಕಾಯಿಯನ್ನು ಸೇರಿಸಿಕೊಳ್ಳಿ.
  • ಬಳಿಕ ಇದಕ್ಕೆ ಕಾಲು ಚಮಚ ಅರಶಿಣ ಹಾಗೂ 8ರಿಂದ 10 ಕರಿಬೇವಿನ ಎಲೆ ಹಾಕಿಕೊಂಡು ಚೆನ್ನಾಗಿ ತಿರುವಿ. ನಂತರ ಇದಕ್ಕೆ ಕಲಸಿದ ಆಲೂಗಡ್ಡೆಯನ್ನು ಸೇರಿಸಿಕೊಳ್ಳಿ. ಈ ಮಿಶ್ರಣಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿಕೊಳ್ಳಬೇಕು. ನಂತರ ಇದನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಬಳಿಕ 2 ನಿಮಿಷಗಳವರೆಗೆ ಕಡಿಮೆ ಉರಿಯಲ್ಲಿ ಇಟ್ಟುಕೊಂಡು ಮಿಕ್ಸ್ ಮಾಡಿಕೊಳ್ಳಿ.
  • ಇದಕ್ಕೆ ಕಾಲು ಕಪ್ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿಕೊಂಡು ಒಂದು ಬಾರಿ ತಿರುವಿ ಮಿಶ್ರಣ ಆರುವವರೆಗೂ ಪಕ್ಕಕ್ಕಿಡಿ. ನಂತರ ಒಂದು ಈರುಳ್ಳಿ ಹಾಗೂ ಒಂದು ಟೊಮೆಟೊ ವೃತ್ತಾಕಾರದಲ್ಲಿ ತೆಳ್ಳಗೆ ಹೆಚ್ಚಿಕೊಳ್ಳಿ.
  • ಬಳಿಕ 2 ಬ್ರೆಡ್ ತೆಗೆದುಕೊಂಡು ಎರಡೂ ಬ್ರೆಡ್‌ಗೂ ಸ್ವಲ್ಪ ಸ್ವಲ್ಪ ಬೆಣ್ಣೆ ಹಚ್ಚಿಕೊಳ್ಳಿ. ನಂತರ ರುಬ್ಬಿದ ಕೊತ್ತಂಬರಿ ಚಟ್ನಿಯನ್ನು ಇದರ ಮೇಲೆ ಸವರಿಕೊಳ್ಳಿ. ಅದರ ಮೇಲೆ ಆಲೂಗಡ್ಡೆ ಮಿಶ್ರಣವನ್ನು ಸ್ವಲ್ಪ ಹಾಕಿಕೊಳ್ಳಿ. ನಂತರ ಅದರ ಮೇಲೆ ತೆಳ್ಳಗೆ ಹೆಚ್ಚಿದ ಟೊಮೆಟೊ ಹಾಗೂ ಈರುಳ್ಳಿ ಸ್ಲೈಸ್‌ ಇಡಿ. ಬಳಿಕ ಇದರ ಮೇಲೆ ಸ್ವಲ್ಪ ಪೆಪ್ಪರ್ ಪೌಡರ್ ಅಥವಾ ಚಾಟ್ ಮಸಾಲ ಹಾಕಿಕೊಂಡು ಇನ್ನೊಂದು ಬ್ರೆಡ್‌ನಿಂದ ಅದನ್ನು ಮುಚ್ಚಿಕೊಳ್ಳಿ. ಚೀಸ್ ಇಷ್ಟಪಡುವವರು ಇದಕ್ಕೆ ಚೀಸ್ ಕೂಡಾ ಹಾಕಿಕೊಳ್ಳಬಹುದು. ಇದೇ ರೀತಿ ಉಳಿದ ಬ್ರೆಡ್‌ಗಳನ್ನು ಮಾಡಿಟ್ಟುಕೊಳ್ಳಿ.
  • ಈಗ ಇದನ್ನು ಒಂದು ಪ್ಯಾನ್‌ನಲ್ಲಿ ಇಟ್ಟು ಗೋಲ್ಡನ್ ಕಲರ್ ಬರುವವರೆಗೂ ರೋಸ್ಟ್ ಮಾಡಿಕೊಳ್ಳಿ. ಈಗ ಮಸಾಲ ಸ್ಯಾಂಡ್‌ವಿಚ್ ತಿನ್ನಲು ರೆಡಿ. ಇದನ್ನು ಒಂದು ಸರ್ವಿಂಗ್ ಪ್ಲೇಟ್‌ನಲ್ಲಿ ಹಾಕಿ ಟೊಮೆಟೊ ಕೆಚಪ್ ಹಾಗೂ ಉಳಿದ ಕೊತ್ತಂಬರಿ ಚಟ್ನಿಯೊಂದಿಗೆ ಸವಿಯಿರಿ. ಇದನ್ನೂ ಓದಿ: ಸಮ್ಮರ್ ಸ್ಪೆಷಲ್ – ಅನನಾಸು, ತೆಂಗಿನಕಾಯಿಯ ಸ್ಮೂದಿ ಮಾಡಿ
Share This Article