ಪಂಜಾಬ್‌ ವಿರುದ್ಧ ಮುಂಬೈ ಇಂಡಿಯನ್ಸ್‌ಗೆ 9 ರನ್‌ಗಳ ಜಯ

Public TV
2 Min Read

ಚಂಡೀಗಢ: ಇಲ್ಲಿನ ಮಹಾರಾಜ ಯದವೀಂದ್ರ ಸಿಂಗ್‌ ಕ್ರೀಡಾಂಗಣದಲ್ಲಿ ಪಂಜಾಬ್‌ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ನಡೆದ ಐಪಿಎಲ್‌ ಟೂರ್ನಿಯ 33ನೇ ಪಂದ್ಯದಲ್ಲಿ ಮುಂಬೈ 9 ರನ್‌ಗಳ ಜಯ ಗಳಿಸಿದೆ.

ಟಾಸ್‌ ಸೋತು ಮೊದಲು ಬ್ಯಾಟ್ ಬೀಸಿದ ಮುಂಬೈ ಇಂಡಿಯನ್ಸ್‌‌ ನಿಗದಿತ ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 192 ರನ್‌ ಕಲೆಹಾಕಿ, ಎದುರಾಳಿ ತಂಡಕ್ಕೆ 193 ರನ್‌ಗಳ ಗುರಿ ನೀಡಿತು. ಗುರಿಯನ್ನು ಬೆನ್ನಟ್ಟಿದ ಪಂಜಾಬ್‌ ಕಿಂಗ್ಸ್‌ 19.1 ಓವರ್‌ಗಳಲ್ಲಿ 183 ರನ್‌ಗಳನ್ನು ಕಲೆ ಹಾಕಿ ಆಲೌಟ್‌ ಆಯಿತು.

ಮುಂಬೈ ಇಂಡಿಯನ್ಸ್ ನೀಡಿದ 193 ರನ್‌ ಗುರಿ ಹಿಂಬಾಲಿಸಿದ ಪಂಜಾಬ್‌ ಕಿಂಗ್ಸ್‌ 7 ಓವರ್‌ಗಳಿಗೆ 5 ವಿಕೆಟ್‌ ನಷ್ಟಕ್ಕೆ 50 ರನ್‌ ಗಳಿಸಿ ಆರಂಭಿಕ ಆಘಾತ ಅನುಭವಿಸಿತು.

ತಂಡದ ಪರ ತೀವ್ರ ಹೋರಾಟ ನಡೆಸಿದ ಅಶುತೋಷ್ ಶರ್ಮಾ 28 ಎಸೆತಗಳಲ್ಲಿ 7 ಸಿಕ್ಸರ್‌ 2 ಬೌಂಡರಿ ನೆರವಿನಿಂದ 61 ರನ್‌ಗಳನ್ನು ಕಲೆ ಹಾಕಿದರು. ಇನ್ನೂ ಶಶಾಂಕ್‌ ಸಿಂಗ್‌ 25 ಎಸೆತಗಳಲ್ಲಿ 3 ಸಿಕ್ಸರ್‌ ಹಾಗೂ 2 ಬೌಂಡರಿಗಳ ನೆರವಿನಿಂದ 41 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಹರ್ಪ್ರೀತ್ ಬ್ರಾರ್ 20 ಎಸೆತಗಳಲ್ಲಿ 21 ರನ್‌ ಗಳಿಸಿ ಕ್ಯಾಚ್ ನೀಡಿ ಕ್ರೀಸ್‌ ತೊರೆದರು.

ರಿಲೆ ರೂಸೋ, ಲಿಯಾಮ್ ಲಿವಿಂಗ್ಸ್ಟೋನ್ ತಲಾ 1 ರನ್‌ ಗಳಿಸಿ ಔಟಾದರು. ನಾಯಕ ಸ್ಯಾಮ್ ಕರನ್ 7 ಎಸೆತಗಳಲ್ಲಿ 6 ರನ್‌ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಹರ್‌ಪ್ರೀತ್‌ ಸಿಂಗ್‌ 15 ಎಸೆತಗಳಲ್ಲಿ 13 ರನ್‌ ಗಳಿಸಿ ಔಟಾದರು. ಕಗಿಸೊ ರಬಾಡ 3 ಎಸೆತಗಳಲ್ಲಿ 8 ರನ್‌ ಗಳಿಸಿ ರನ್‌ ಔಟ್‌ ಆದರು.

ಮುಂಬೈ ಪರ ಆರಂಭಿಕ ಆಟಗಾರ ಇಶಾನ್ ಕಿಶನ್ 8 ಎಸೆತಗಳಲ್ಲಿ 8ರನ್‌ ಗಳಿಸಿ ಮೂರನೇ ಓವರ್ ಮೊದಲ ಎಸೆತದಲ್ಲಿ ಕ್ಯಾಚ್‌‌ ನೀಡಿ ಔಟಾದರು. ಪವರ್‌ಪ್ಲೇ ಮುಕ್ತಾಯಕ್ಕೆ ತಂಡ 1 ವಿಕೆಟ್ ನಷ್ಟಕ್ಕೆ 54 ರನ್ ಗಳಿಸಿತ್ತು.

ರೋಹಿತ್ ಶರ್ಮಾ 2 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 36 ರನ್ ಕಲೆಹಾಕಿ ವಿಕೆಟ್ ಒಪ್ಪಿಸಿದರು. ಕಡಿಮೆ ರನ್‌ ಗಳಿಸಿದರು ರೋಹಿತ್ ಮುಂಬೈ ಇಂಡಿಯನ್ಸ್‌ ಪರ ಐಪಿಎಲ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆ ನಿರ್ಮಿಸಿದರು. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ರೋಹಿತ್ ಶರ್ಮಾ ಇದುವರೆಗೆ 224 ಸಿಕ್ಸರ್ ಸಿಡಿಸಿದ್ದಾರೆ. ಈ ಮೊದಲು ಈ ದಾಖಲೆ ಕೀರಾನ್ ಪೊಲಾರ್ಡ್ ಹೆಸರಿನಲ್ಲಿತ್ತು. ಮುಂಬೈ ತಂಡದ ಪರ ಕೀರಾನ್ ಪೊಲಾರ್ಡ್ ಐಪಿಎಲ್‌ನಲ್ಲಿ 223 ಸಿಕ್ಸರ್‌ಗಳನ್ನು ಬಾರಿಸಿದ್ದರು. ಅಲ್ಲದೇ ಈ ಪಂದ್ಯ ರೋಹಿತ್ ಶರ್ಮಾಗೆ ಐಪಿಎಲ್‌ನಲ್ಲಿ 250ನೇ ಪಂದ್ಯವಾಗಿತ್ತು. ರೋಹಿತ್​ಗಿಂತ ಮೊದಲು ಎಂಎಸ್ ಧೋನಿ ಈ ದಾಖಲೆ ಮಾಡಿದ್ದರು.

ಕಳೆದ ಪಂದ್ಯದಲ್ಲಿ ಡಕೌಟ್‌ ಆಗಿದ್ದ ಸೂರ್ಯ ಕುಮಾರ್ ಈ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದು, 53 ಎಸೆತಗಳಲ್ಲಿ 7 ಬೌಂಡರಿ ಹಾಗೂ 3 ಸಿಕ್ಸರ್‌ಗಳ ನೆರವಿನಿಂದ 78 ರನ್‌ ಗಳಿಸಿದರು. ಟಿಮ್ ಡೇವಿಡ್ 7 ಎಸೆತಗಳಲ್ಲಿ 14 ರನ್‌ ಗಳಿಸಿ ಅಜೇಯರಾಗಿ ಉಳಿದರು.

ತಂಡದ ನಾಯಕ ಹಾರ್ದಿಕ್‌ ಪಾಂಡ್ಯ ಕೇವಲ 10 ರನ್‌ಗಳಿಗೆ ಸುಸ್ತಾಗಿ ಪೆವಿಲಿಯನ್‌ಗೆ ಮರಳಿದರು. ರೊಮಾರಿಯೊ ಶೆಫರ್ಡ್ 2 ಎಸೆತಕ್ಕೆ 1 ರನ್‌ ಗಳಿಸಿ ಔಟಾದರು.

Share This Article