ಮುಂಬೈಗೆ 55 ರನ್ ಭರ್ಜರಿ ಜಯ, ಪ್ಲೇ ಆಫ್‌ ಪ್ರವೇಶ

Public TV
2 Min Read

ಮುಂಬೈ: ನಾಯಕಿ ಹರ್ಮನ್ ಪ್ರೀತ್‍ಕೌರ್ (Harmanpreet Kaur) ಅರ್ಧಶತಕ ಹಾಗೂ ನಾಟ್ ಸ್ಕಿವರ್ ಬ್ರಂಟ್ ಆಲ್‍ರೌಂಡರ್ ಆಟದ ನೆರವಿನಿಂದ ಮುಂಬೈ ಇಂಡಿಯನ್ಸ್ (Mumbai Indian) ತಂಡವು ಗುಜರಾತ್ ಜೈಂಟ್ಸ್ (Gujarat Giants) ವಿರುದ್ಧ 55 ರನ್‍ಗಳ ಭರ್ಜರಿ ಜಯ ಸಾಧಿಸುವ ಮೂಲಕ ಅಗ್ರಸ್ಥಾನದೊಂದಿಗೆ ಪ್ಲೇ ಆಫ್‌ ಪ್ರವೇಶಿಸಿದೆ.

ಮಂಗಳವಾರ ಇಲ್ಲಿನ ಬ್ರಬೋರ್ನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ನಿಗದಿತ 20 ಓವರ್‍ಗಳಲ್ಲಿ 8 ವಿಕೆಟ್ ನಷ್ಟಕ್ಕೆ 162 ರನ್ ಕಲೆಹಾಕಿತ್ತು. 163 ರನ್ ಗುರಿ ಬೆನ್ನತ್ತಿದ ಗುಜರಾತ್ ಜೈಂಟ್ಸ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 107 ರನ್ ಗಳಿಸಿ ಸೋಲೊಪ್ಪಿಕೊಂಡಿತು.

ತನ್ನ ಸರದಿ ಆರಂಭಿಸಿದ ಗುಜರಾತ್ ಜೈಂಟ್ಸ್ ತಂಡ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಸೋಫಿಯಾ ಡಂಕ್ಲೆ ಮೊದಲ ಎಸೆತದಲ್ಲೇ ವಿಕೆಟ್ ಕಳೆದುಕೊಂಡು ತಂಡಕ್ಕೆ ಆಘಾತ ನೀಡಿದರು. ನಂತರ ಕಣಕ್ಕಿಳಿದವರಲ್ಲಿ ಸಬ್ಬಿನೇನಿ ಮೇಘನಾ 16 ರನ್, ಹರ್ಲೀನ್ ಡಿಯೋಲ್ 22 ರನ್, ಸ್ನೇಹ ರಾಣಾ 20 ರನ್ ಹಾಗೂ ಸುಷ್ಮಾ ವರ್ಮಾ 18 ರನ್ ಗಳಿಸಿದರು. ಅಗ್ರಕ್ರಮಾಂಕದ ಬ್ಯಾಟರ್‍ಗಳ ಕಳಪೆ ಪ್ರದರ್ಶನದಿಂದಾಗಿ ತಂಡ ಸೋಲೊಪ್ಪಿಕೊಂಡಿತು.

ಅಂತಿಮವಾಗಿ ಗುಜರಾತ್ ಜೈಂಟ್ಸ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 107 ರನ್‍ಗಳಷ್ಟೇ ಗಳಿಸಿತು.

ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡದ ಪರ ನಾಯಕಿ ಹರ್ಮನ್‍ಪ್ರೀತ್ ಕೌರ್ ಮತ್ತೊಮ್ಮೆ ಭರ್ಜರಿ ಅರ್ಧಶತಕ ಬಾರಿಸಿದರು. 30 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್‍ಗಳೊಂದಿಗೆ 51 ರನ್ ಬಾರಿಸಿದರು. ಆರಂಭಿಕ ಬ್ಯಾಟರ್ ಯಸ್ತಿಕಾ ಭಾಟಿಯಾ 37 ಎಸೆತಗಳಲ್ಲಿ 44 ರನ್ ಹಾಗೂ ಅಮೇಲಿಯಾ ಕೆರ್ 19 ರನ್ ಗಳಿಸಿ ತಂಡದ ಮೊತ್ತ 160 ರನ್‍ಗಳ ಗಡಿ ದಾಟಲು ನೆರವಾದರು.

ಬ್ರಂಟ್ ಆಲ್‍ರೌಂಡರ್ ಆಟ:
ಬ್ಯಾಟಿಂಗ್‍ನಲ್ಲಿ ಉತ್ತಮ ಪ್ರದರ್ಶನ ನೀಡಿದ ನಾಟ್ ಸ್ಕಿವರ್ ಬ್ರಂಟ್ (Nat Sciver Brunt) ಬೌಲಿಂಗ್‍ನಲ್ಲೂ ಕೈಚಳಕ ತೋರಿದರು. 31 ಎಸೆತಗಳಲ್ಲಿ 36 ರನ್ (5 ಬೌಂಡರಿ, 1 ಸಿಕ್ಸರ್) ಚಚ್ಚಿದ್ದ ಬ್ರಂಟ್, ಬೌಲಿಂಗ್‍ನಲ್ಲಿ 4 ಓವರ್‍ಗಳಿಗೆ 21 ರನ್ ನೀಡಿ 3 ವಿಕೆಟ್ ಕಿತ್ತರು. ಹೇಲಿ ಮ್ಯಾಥಿವ್ಸ್ ಸಹ 3 ವಿಕೆಟ್ ಪಡೆದು ಮಿಂಚಿದರೆ, ಅಮೆಲಿಯಾ ಕೆರ್ 2 ವಿಕೆಟ್ ಹಾಗೂ ಇಸ್ಸಿ ವಾಂಗ್ ಒಂದು ವಿಕೆಟ್‍ಗೆ ತೃಪ್ತಿಪಟ್ಟುಕೊಂಡರು.

ಬೌಲಿಂಗ್‍ನಲ್ಲಿ ಗುಜರಾತ್ ಜೈಂಟ್ಸ್ ತಂಡದ ಪರ ಆಶ್ಲೀಗ್ ಗಾಡ್ರ್ನರ್ (Ashleigh Gardner) 4 ಓವರ್‌ಗಳಲ್ಲಿ 32 ರನ್ ನೀಡಿ ಪ್ರಮುಖ 3 ವಿಕೆಟ್ ಉರುಳಿಸಿದರು. ಉಳಿದಂತೆ ಕಿಮ್ ಗಾರ್ಥ್, ಸ್ನೇಹ್ ರಾಣಾ ಮತ್ತು ತನುಜಾ ಕನ್ವರ್ ತಲಾ ಒಂದೊಂದು ವಿಕೆಟ್ ಪಡೆದರು.

Share This Article
Leave a Comment

Leave a Reply

Your email address will not be published. Required fields are marked *