ಮುಂಬೈಗೆ 11.5 ಓವರ್‌ಗಳಲ್ಲಿ 201 ರನ್‌ ಟಾರ್ಗೆಟ್‌ – ಪ್ಲೇ ಆಫ್‌ ತಲುಪುತ್ತಾ RCB?

Public TV
1 Min Read

ಮುಂಬೈ: 16ನೇ ಆವೃತ್ತಿಯ ಪ್ಲೇ ಆಫ್‌ ಫೈಟ್‌ ರಣರೋಚಕ ಘಟ್ಟಕ್ಕೆ ತಲುಪಿದೆ. ಈಗಾಗಲೇ ಗುಜರಾತ್ ಟೈಟಾನ್ಸ್, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಪ್ಲೇಆಫ್​ ಪ್ರವೇಶಿಸಿವೆ. ಇನ್ನುಳಿದ ಒಂದು ಸ್ಥಾನಕ್ಕಾಗಿ ಮುಂಬೈ ಹಾಗೂ ಆರ್‌ಸಿಬಿ ನಡುವೆ ಪೈಪೋಟಿ ನಡೆದಿದೆ.

ಅದರಂತೆ ಸೂಪರ್ ಸಂಡೆಯ 2 ಪಂದ್ಯಗಳು ಉಭಯ ತಂಡಗಳ ಪ್ಲೇಆಫ್ ಹಾದಿಯನ್ನು ನಿರ್ಧರಿಸಲಿದೆ. ಇಲ್ಲಿ ಮಧ್ಯಾಹ್ನ ನಡೆಯುತ್ತಿರುವ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಕಣಕ್ಕಿಳಿದಿದೆ. ಹೈದರಾಬಾದ್‌ 201 ರನ್‌ ಗಳ ಬೃಹತ್‌ ಮೊತ್ತದ ಗುರಿ ನೀಡಿರುವುದರಿಂದ ಮುಂಬೈ ಇಂಡಿಯನ್ಸ್‌ 11.5 ಓವರ್‌ಗಳಲ್ಲೇ ಈ ಗುರಿ ತಲುಪಬೇಕಾದ ಅನಿವಾರ್ಯತೆ ಎದುರಾಗಿದೆ.

ಈ ಪಂದ್ಯದಲ್ಲಿ ಗೆದ್ದರೇ ಮುಂಬೈ ತಂಡಕ್ಕೆ 16 ಅಂಕ ಸಿಗಲಿದೆ. ಆದರೂ ಪ್ಲೇ ಆಫ್ ಹಂತಕ್ಕೇರುವುದನ್ನು ಖಚಿತಪಡಿಸಿಕೊಳ್ಳಲಾಗುವುದಿಲ್ಲ. ಏಕೆಂದರೆ ಆರ್​ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಇಂದೇ ಸೆಣಸಲಿವೆ. ಈ ಪಂದ್ಯದಲ್ಲಿ ಆರ್​ಸಿಬಿ ಗೆದ್ದರೆ ಮುಂಬೈ ಪ್ಲೇ ಆಫ್‌ ಸ್ಥಾನ ಕಳೆದುಕೊಳ್ಳಲಿದೆ.

13 ರಲ್ಲಿ 7 ಪಂದ್ಯಗಳನ್ನು ಗೆದ್ದಿರುವ ಆರ್‌ಸಿಬಿ +0.180 ರನ್‌ರೇಟ್‌ನೊಂದಿಗೆ 14 ಅಂಕ ಪಡೆದು 4ನೇ ಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್‌ ಸಹ 7 ಪಂದ್ಯ ಗೆದ್ದು 14 ಅಂಕ ಪಡೆದು -0.128 ರನ್‌ರೇಟ್‌ನೊಂದಿಗೆ 6ನೇ ಸ್ಥಾನದಲ್ಲಿದೆ. ಹೈದರಾಬಾದ್‌ ನೀಡಿರುವ ಮೊತ್ತವನ್ನು ಮುಂಬೈ 11.5 ಓವರ್‌ಗಳಲ್ಲಿ ತಲುಪಿದರೇ 16 ಅಂಕ ಪಡೆದುಕೊಳ್ಳುವುದರ ಜೊತೆಗೆ ಅಧಿಕ ರನ್‌ರೇಟ್‌ನೊಂದಿಗೆ ಪ್ಲೇ ಆಫ್‌ಗೆ ಲಗ್ಗೆಯಿಡಲಿದೆ. ಅಲ್ಲದೇ ಗುಜರಾತ್‌ ಟೈಟಾನ್ಸ್‌ ವಿರುದ್ಧ ಆರ್‌ಸಿಬಿ ಸಹ ಹೆಚ್ಚು ರನ್‌ ಅಂತರದಿಂದ ಗೆಲ್ಲಬೇಕಿದೆ. ಒಂದು ವೇಳೆ ಮಳೆಯಿಂದ ಪಂದ್ಯ ರದ್ದಾದರೆ, ಇತ್ತಂಡಗಳಿಗೂ ತಲಾ ಒಂದೊಂದು ಅಂಕ ಸಿಗಲಿದೆ.

ಬೆಂಗಳೂರಿನಲ್ಲಿ ಮಳೆಯ ಆರ್ಭಟ ಜೋರಾದ ಹಿನ್ನೆಲೆ ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣ ಜಲಾವೃತಗೊಂಡಿತ್ತು. ಇದೀಗ ಕ್ರೀಡಾಂಗಣವನ್ನು ಶುದ್ಧೀಕರಿಸುವ ಪ್ರಕ್ರಿಯೆ ನಡೆದಿದೆ.

Share This Article