14 ಪಾಕಿಸ್ತಾನಿ ಉಗ್ರರು, 400 ಕೆಜಿ RDX, 34 ಮಾನವ ಬಾಂಬ್ ಸ್ಫೋಟ ನಡೆಯಲಿದೆ; ಮುಂಬೈಗೆ ಉಗ್ರ ಬೆದರಿಕೆ

By
2 Min Read

– ಮುಂಬೈ ಪೊಲೀಸರಿಗೆ ವಾಟ್ಸಪ್‌ ಬೆದರಿಕೆ ಸಂದೇಶ – ಎಲ್ಲೆಡೆ ಹೈ ಅಲರ್ಟ್‌

ಮುಂಬೈ: ಹಿಂದೆಂದಿಗಿಂತಲೂ ಕಂಡು ಕೇಳರಿಯದ ಉಗ್ರ ದಾಳಿ ನಡೆಸುವುದಾಗಿ ಮುಂಬೈ ಸಂಚಾರ ಪೊಲೀಸ್​ ಠಾಣೆಗೆ (Mumbai Traffic Police Station) ವಾಟ್ಸಪ್ ಬೆದರಿಕೆ ಸಂದೇಶ ಬಂದಿದೆ. ಅನಾಮಿಕ ವ್ಯಕ್ತಿಯೊಬ್ಬನಿಂದ ಬೆದರಿಕೆ ಸಂದೇಶ (Threat) ಬಂದಿದ್ದು, ನಗರದ್ಯಾಂತ ಭಾರೀ ಕಟ್ಟೆಚ್ಚರ ವಹಿಸಲಾಗಿದೆ.

ಪಾಕಿಸ್ತಾನ ಮೂಲದ ಜಿಹಾದಿ ಗುಂಪಿನ ಸದಸ್ಯನಿಂದ ಬೆದರಿಕೆ ಬಂದಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಪಾಕಿಸ್ತಾನ ಲಷ್ಕರ್-ಎ-ಜಿಹಾದಿ (Lashkar-e-Jihadi) ಸಂಘಟನೆಯ 14 ಉಗ್ರರು ಭಾರತ ಪ್ರವೇಶಿಸಿದ್ದಾರೆ. 400 ಕೆಜಿ ಆರ್‌ಡಿಎಕ್ಸ್‌ ಸ್ಫೋಟಿಸಿ ಜನರನ್ನ ಕೊಲ್ಲಲಿದ್ದಾರೆ. ಅಲ್ಲದೇ ನಗರಾದ್ಯಂತ 34 ವಾಹನಗಳಲ್ಲಿ ಮಾನವ ಬಾಂಬ್‌ (Human Bombs) ಸ್ಫೋಟಿಸಲಾಗುವುದು ಎಂದು ಎಚ್ಚರಿಕೆ ಸಂದೇಶ ಕಳಿಸಿರುವುದಾಗಿ ಮುಂಬೈ ಪೊಲೀಸರು ತಿಳಿಸಿದ್ದಾರೆ.

ಬೆದರಿಕೆ ಸಂದೇಶ ಬಂದ ಕೂಡಲೇ ಮುಂಬೈ ಟ್ರಾಫಿಕ್‌ ಪೊಲೀಸರು, ಅಪರಾಧ ವಿಭಾಗಕ್ಕೆ ಮಾಹಿತಿ ರವಾನಿಸಿದ್ದಾರೆ. ಮುಂಬೈ ಪೊಲೀಸರು ಫುಲ್‌ ಅಲರ್ಟ್‌ ಆಗಿದ್ದು, ಇಡೀ ರಾಜ್ಯದಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಅಲ್ಲದೇ ಬೆದರಿಕೆಯ ಪ್ರತಿಯೊಂದು ಸಾಧ್ಯತೆ ಮತ್ತು ಮೂಲವನ್ನು ತನಿಖೆ ಮಾಡಲಾಗುತ್ತಿದೆ.

ಇನ್ನೂ ನಾಳೆ (ಸೆ.5) ಮುಂಬೈನಲ್ಲಿ ಗಣೇಶ ವಿಸರ್ಜನೆ ಕಾರ್ಯಕ್ರಮಗಳು ನಡೆಯಲಿದೆ. ಹೀಗಾಗಿ ಅನಂತ ಚತುರ್ದಶಿ ದಿನವನ್ನೇ ಟಾರ್ಗೆಟ್‌ ಮಾಡಲಾಗಿದೆಯೇ ಎಂಬ ಅನುಮಾನಗಳೂ ಹುಟ್ಟಿಕೊಂಡಿದೆ.

ಅನಂತ ಚತುರ್ದಶಿಯು ಹತ್ತು ದಿನಗಳ ಕಾಲ ನಡೆಯುವ ಗಣೇಶೋತ್ಸವ ಅಥವಾ ಗಣೇಶ ಚತುರ್ಥಿ (Ganesh Chaturthi) ಹಬ್ಬದ ಕೊನೆಯ ದಿನವಾಗಿದೆ. ಈ ದಿನದಂದು ಭಕ್ತರು ಸಾಮೂಹಿಕವಾಗಿ ಗಣೇಶ ವಿಸರ್ಜನೆ ನೆರವೇರಿಸುತ್ತಾರೆ.

ಕಳೆದ ಆಗಸ್ಟ್‌ 29ರಂದು ಪಾಟ್ನಾ ಸಿವಿಲ್ ನ್ಯಾಯಾಲಯದ ಅಧಿಕಾರಿಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು. ಇದಕ್ಕೂ ಮುನ್ನ ಪಾಕಿಸ್ತಾನದ ಮೂವರು ಭಯೋತ್ಪಾದಕರು ನೇಪಾಳ ಮೂಲಕ ಮಹಾರಾಷ್ಟ್ರಕ್ಕೆ ಪ್ರವೇಶಿಸಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ಬಂದಿತ್ತು.

Share This Article