ಬಹುಮಹಡಿ ಕಟ್ಟಡದಲ್ಲಿ ಅಗ್ನಿ ಅವಘಡ: 10ರ ಬಾಲಕಿಯಿಂದಾಗಿ ಪ್ರಾಣ ಉಳಿಸಿಕೊಂಡ ನಿವಾಸಿಗಳು!

Public TV
2 Min Read

ಮುಂಬೈ: ನಗರದಲ್ಲಿ ಬುಧವಾರ ನಡೆದ ಬಹುಮಹಡಿ ಕಟ್ಟಡ ದುರಂತದಲ್ಲಿ 10 ವರ್ಷದ ಬಾಲಕಿಯ ನೆರವಿನಿಂದ 16ನೇ ಮಹಡಿಯಲ್ಲಿದ್ದ ನಿವಾಸಿಗಳು ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ.

10 ವರ್ಷದ ಜೆನ್ ಸದವರ್ತೆ ಅಪಾಯಕ್ಕೆ ಸಿಲುಕಿದ್ದವರ ಪ್ರಾಣ ಉಳಿಸಿದ ಬಾಲಕಿಯಾಗಿದ್ದಾಳೆ. ಕ್ರಿಸ್ಟಲ್ ಟವರ್ ನ 16ನೇ ಮಹಡಿಯಲ್ಲಿ ತನ್ನ ಪೋಷಕರೊಂದಿಗೆ ವಾಸವಾಗಿದ್ದ ಬಾಲಕಿಯು ಬುಧವಾರ ಬೆಳಗ್ಗೆ ನಿದ್ರಿಸುತ್ತಿರುವಾಗ, ಏಕಾಏಕಿ ಮನೆಯ ಅಡುಗೆ ಕೋಣೆಯಿಂದ ಹೊಗೆ ಬರಲು ಆರಂಭಿಸಿದೆ, ಈ ವೇಳೆ ಬಾಲಕಿಯ ಪೋಷಕರು ಆಕೆಯನ್ನು ಎಚ್ಚರಿಸಿದ್ದಾರೆ.

ಕೂಡಲೇ ಮನೆಯಿಂದ ಹೊರಕ್ಕೆ ಬಂದಾಗ ಅಕ್ಕ-ಪಕ್ಕದ ನಿವಾಸಿಗಳೆಲ್ಲರೂ ಗಾಬರಿಯಿಂದ ಹೊರಗೆ ನಿಂತಿದ್ದರು. ಅಲ್ಲದೇ ಸುತ್ತಲು ಹೊಗೆ ಆವರಿಸುತ್ತಿರುವುದನ್ನು ಗಮನಿಸಿದ ಬಾಲಕಿಯು ಕೂಡಲೇ ತನ್ನ ಪೋಷಕರಿಗೆ ತಾನು 3ನೇ ತರಗತಿಯಲ್ಲಿರುವಾಗ ಅಗ್ನಿ ಅವಘಡವಾದ ಸಂದರ್ಭದಲ್ಲಿ ಏನು ಮಾಡಬೇಕು ಎಂದು ಕಲಿತ್ತಿದ್ದ ವಿಷಯವನ್ನು ಜ್ಞಾಪಿಸಿ ಕೊಂಡಿದ್ದಾಳೆ.

ಬಚಾವ್ ಮಾಡಿದ್ದು ಹೇಗೆ?
ಬಾಲಕಿಯು ಪೋಷಕರು ಹಾಗೂ ಸುತ್ತಮುತ್ತ ನಿವಾಸಿಗಳಿಗೆ ಎಲ್ಲರೂ ಹತ್ತಿಯನ್ನು ನೀರಿನಲ್ಲಿ ನೆನೆಸಿ ಬಾಯಿಯಲ್ಲಿ ಇಟ್ಟುಕೊಳ್ಳಿ, ಇದರಿಂದ ಹೊಗೆಯಲ್ಲಿರುವ ಕಾರ್ಬನ್ ಡೈ ಆಕ್ಸೈಡ್ ನಮ್ಮ ದೇಹವನ್ನು ಸೇರುವುದಿಲ್ಲ. ಹೀಗೆ ಮಾಡಿದರೆ ನಮಗೆ ಯಾವುದೇ ತೊಂದರೆಯಾಗುವುದಿಲ್ಲವೆಂದು ತಿಳಿಸಿದ್ದಾಳೆ. ಬಾಲಕಿಯ ಮಾತಿನಿಂದ ಎಚ್ಚರಗೊಂಡ ಎಲ್ಲರೂ ಮನೆಯಲ್ಲಿರುವ ಹತ್ತಿಗಳನ್ನು ನೆನೆಸಿ, ತಮ್ಮ ತಮ್ಮ ಬಾಯಿಯಲ್ಲಿ ಇಟ್ಟುಕೊಂಡು ಪ್ರಾಣವನ್ನು ಉಳಿಸಿಕೊಳ್ಳಲು ಸಫಲರಾಗಿದ್ದಾರೆ.

ನಂತರ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ 16 ನೇ ಮಹಡಿಯಲ್ಲಿದ್ದ ನಿವಾಸಿಗಳನ್ನು ರಕ್ಷಿಸಿದ್ದಾರೆ. ತುರ್ತು ಸಂದರ್ಭಗಳಲ್ಲಿ ನಿವಾಸಿಗಳು ಬಳಸಿದ್ದ ಯೋಜನೆಯನ್ನು ತಿಳಿದ ಅಧಿಕಾರಿಗಳು ಬಾಲಕಿಯ ಸಾಹಸಕ್ಕೆ ಪ್ರಶಂಸೆ ವ್ಯಕ್ತಪಡಿಸಿ, ಬಾಲಕಿಯಿಂದಾಗಿ ನಿವಾಸಿಗಳು ಬದುಕಲು ಸಹಾಯವಾಗಿದೆ ಎಂದು ತಿಳಿಸಿದ್ದಾರೆ.

ಬಾಲಕಿಯು ನಗರದ ಸುಬುರಬಾನ್ ಮತುಂಗ ಪ್ರದೇಶದ ಡಾನ್ ಬಾಸ್ಕೋ ಶಾಲೆಯಲ್ಲಿ 6ನೇ ತರಗತಿಯನ್ನು ಓದುತ್ತಿದ್ದು, ತುರ್ತು ಹಾಗೂ ಬೆಂಕಿ ಅವಘಡಗಳಿಂದ ಹೇಗೆ ತಪ್ಪಿಸಿಕೊಳ್ಳಬೇಕೆಂದು 3ನೇ ತರಗತಿಯಲ್ಲಿರುವಾಗ ಕಲಿತಿದ್ದನ್ನು ನೆನಪಿಸಿಕೊಂಡು ಎಲ್ಲರನ್ನೂ ಪ್ರಾಣಾಪಾಯದಿಂದ ಪಾರು ಮಾಡಿದ್ದಾಳೆ. ಹತ್ತಿಯನ್ನು ನೀರಿನಲ್ಲಿ ನೆನೆಸಿ ಬಾಯಿಯಲ್ಲಿ ಹಾಕಿಕೊಳ್ಳುವುದರಿಂದ, ಹೊಗೆಯಲ್ಲಿರುವ ಕಾರ್ಬನ್ ಡೈ ಆಕ್ಸೈಡ್ ಹತ್ತಿಯೊಂದಿಗೆ ಸೇರಿ ಕೇವಲ ಶುಭ್ರವಾದ ಗಾಳಿಯು ದೇಹವನ್ನು ಪ್ರವೇಶಿಸುವಂತೆ ಮಾಡುತ್ತದೆ. ಇದರಿಂದ ಜೀವವನ್ನು ಉಳಿಸಿಕೊಳ್ಳಬಹುದು, ಜೊತೆಗೆ ದೀರ್ಘವಾಗಿ ಉಸಿರಾಟ ನಡೆಸುತ್ತಿರಬೇಕೆಂದು ಬಾಲಕಿಯು ಎಲ್ಲರಿಗೂ ತಿಳಿಸಿದ್ದಳು. ಹೀಗಾಗಿ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ.

ಬುಧವಾರ ನಡೆದ ಬೆಂಕಿ ದುರಂತದಲ್ಲಿ 4 ಮಂದಿ ಸಾವನ್ನಪ್ಪಿ, 21 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ಮಾಹಿತಿ ನೀಡಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *