ಸೆಕ್ಸ್ ನಿರಾಕರಿಸಿದ್ದಕ್ಕೆ 13ರ ಬಾಲಕನ ಪ್ಯಾಂಟಿಗೆ ಬೆಂಕಿ ಹಚ್ಚಿದ್ರಾ ಮಾದಕವ್ಯಸನಿಗಳು?

Public TV
3 Min Read

ಮುಂಬೈ: ಸೆಕ್ಸ್ ನಿರಾಕರಿಸಿದ್ದಕ್ಕೆ ಮಾದಕ ವ್ಯಸನಿಗಳು 13 ವರ್ಷದ ಅಪ್ರಾಪ್ತ ಬಾಲಕನ ಪ್ಯಾಂಟ್‍ಗೆ ಬೆಂಕಿ ಹಚ್ಚಿರೋ ಆರೋಪ ಕೇಳಿಬಂದಿದೆ. ಈ ಘಟನೆ ಮುಂಬೈನ ಗೊರೆಗಾಂವ್ ಫಿಲ್ಮ್ ಸಿಟಿ ಬಳಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಈ ಬಗ್ಗೆ ಪೊಲೀಸರು 9 ದಿನಗಳ ಬಳಿಕ ಎಫ್‍ಐಆರ್ ದಾಖಲಿಸಿಕೊಂಡರು ಎಂದು ಸಂತ್ರಸ್ತ ಬಾಲಕನ ಕುಟುಂಬಸ್ಥರು ಆರೋಪಿಸಿದ್ದಾರೆ. ಅಲ್ಲದೆ ಆರೋಪಿಗಳ ಜೊತೆ ರಾಜಿಯಾಗುವಂತೆ ಪೊಲೀಸರು ಹೇಳಿದ್ರು ಎಂದು ಆರೋಪ ಮಾಡಿದ್ದಾರೆ. ಆದ್ರೆ ಮೊದಲು ಹೇಳಿಕೆ ಪಡೆದಾಗ ಕುಟುಂಬಸ್ಥರು ಲೈಂಗಿಕ ಕಿರುಕುಳದ ಬಗ್ಗೆ ತಿಳಿಸಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ನಡೆದಿದ್ದೇನು?: ಪ್ರತ್ಯಕ್ಷದರ್ಶಿಗಳ ಪ್ರಕಾರ ಡಿಸೆಂಬರ್ 28ರಂದು ಈ ಘಟನೆ ನಡೆದಿದೆ. ಅಪ್ರಾಪ್ತ ಬಾಲಕ ತನ್ನ 15 ವರ್ಷದ ಕಿವುಡ ಹಾಗೂ ಮೂಕ ಸ್ನೇಹಿತನೊಂದಿಗೆ ಹೋಗುತ್ತಿದ್ದ ವೇಳೆ ಗುರೇಗಾಂವ್ ಫಿಲ್ಮ್ ಸಿಟಿ ಪ್ರದೇಶದ ಬಳಿ ಮಾದಕ ವ್ಯಸನಿಗಳ ಗುಂಪು ಬಾಲಕರನ್ನ ತಡೆದಿದೆ. ಇದರಿಂದ ಭಯಗೊಂಡ ಬಾಲಕರು ಓಡಲು ಶುರು ಮಾಡಿದ್ದಾರೆ. ಆದ್ರೆ ಆ ಗುಂಪು ಬಾಲಕನನ್ನು ಹಿಡಿದು ಹತ್ತಿರದಲ್ಲಿ ಪಾರ್ಕ್ ಮಾಡಲಾಗಿದ್ದ ಜೀಪ್ ಬಳಿ ಕರೆದುಕೊಂಡು ಹೋಗಿದ್ದಾರೆ.

ಮೊದಲು ಅವರು ಆತನ ಪ್ಯಾಂಟ್ ತೆಗೆಯಲು ಯತ್ನಿಸಿದ್ರು. ಆದ್ರೆ ನನ್ನ ಮಗ ಅದಕ್ಕೆ ನಿರಾಕರಿಸಿ ಕಿರುಚಲು ಆರಂಭಿಸಿದ್ದ. ಇದರಿಂದ ಕೋಪಗೊಂಡ ಆ ಗುಂಪು ಆತನ ಪ್ಯಾಂಟ್‍ನೊಳಗೆ ಥಿನ್ನರ್ ಸುರಿದರು. ಹೇಗೋ ನನ್ನ ಮಗ ಅವರಿಂದ ತಪ್ಪಿಸಿಕೊಂಡು ಮತ್ತೆ ಓಡಲು ಶುರು ಮಾಡಿದ್ದ. ಆದ್ರೆ ಅವರಲ್ಲೊಬ್ಬ ಬೆಂಕಿ ಕಡ್ಡಿ ಗೀರಿ ಥಿನ್ನರ್ ಮೇಲೆ ಎಸೆದ. ಇದರಿಂದ ಪ್ಯಾಂಟ್‍ಗೆ ಬೆಂಕಿ ಹೊತ್ತಿಕೊಂಡಿತ್ತು. ನಂತರ ನನ್ನ ಮಗ ರಸ್ತೆಯಲ್ಲಿ ಸಹಾಯಕ್ಕಾಗಿ ಓಡಿದ. ಆತನ ಗೆಳೆಯ ಬೆಂಕಿ ಆರಿಸಲು ಯತ್ನಿಸಿದ ಆದ್ರೆ ನಿಯಂತ್ರಿಸಲು ಆಗಿಲ್ಲ. ದೂರದಲ್ಲಿ ನೀರು ತುಂಬಿದ್ದ ಒಂದು ಟಬ್ ನೋಡಿ ಅದರಲ್ಲಿ ನನ್ನ ಮಗ ಬಿದ್ದ ಎಂದು ಬಾಲಕನ ತಾಯಿ ಹೇಳಿದ್ದಾರೆ.

ಈ ವೇಳೆ ಫಿಲ್ಮ್ ಎಡಿಟರ್ ಯೋಗಿರಾಜ್ ಶೆಟ್ಟಿ ಮನೆಗೆ ಹೋಗ್ತಿದ್ದರು. ಆಗ ಬಾಲಕರನ್ನ ನೋಡಿ ಸ್ಥಳೀಯರ ನರವಿನಿಂದ ಬ್ಲಾಂಕೆಟ್ ತೆಗೆದುಕೊಂಡು ಬಾಲಕನ ಮೇಲೆ ಹೊದಿಸಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ನಂತರ ಆಸ್ಪತ್ರೆಯವರು ಬಾಲಕನ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಕುಟುಂಬದವರಿಗೆ ತಿಳಿಸಿದ್ದು, ಬೇರೆ ಆಸ್ಪತ್ರೆಗೆ ರವಾನಿಸುವಂತೆ ಹೇಳಿದ್ದಾರೆ.

ಕುಟುಂಬಸ್ಥರು ಬರುವ ವೇಳೆಗೆ ನಾವು ಆಂಬುಲೆನ್ಸ್‍ಗೆ ಕರೆ ಮಾಡಿ, ಜೋಗೇಶ್ವರಿಯ ಆಸ್ಪತ್ರೆಗೆ ಆತನನ್ನು ಕರೆದುಕೊಂಡು ಹೋದೆವು ಎಂದು ಶೆಟ್ಟಿ ಹೇಳಿದ್ದಾರೆ. ಬಾಲಕನಿಗೆ ಶೇ.50ರಷ್ಟು ಸುಟ್ಟ ಗಾಯಗಳಾಗಿ ಅಲ್ಲಿಯೂ ಯಾವುದೇ ಚೇತರಿಕೆ ಕಾಣಲಿಲ್ಲ. ಹೀಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಕಸ್ತೂರ್ಬಾ ಆಸ್ಪತ್ರೆಗೆ ರವಾನಿಸಲಾಗಿದೆ.

ಪೊಲೀಸರು ಈ ಪ್ರಕರಣದಲ್ಲಿ ನಿರ್ಲಕ್ಷ್ಯ ವಹಿಸಿದ್ದು, ಯಾರನ್ನೋ ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಬಾಲಕನ ಕುಟುಂಬಸ್ಥರು ಆರೋಪಿಸಿದ್ದಾರೆ. ನಾವು ಹಾಗೂ ಬಾಲಕ ನೀಡಿದ ಹೇಳಿಕೆಗೂ ಎಫ್‍ಐಆರ್‍ನಲ್ಲಿ ಹಾಕಲಾಗಿರುವ ಸೆಕ್ಷನ್‍ಗಳಿಗೂ ಯಾವುದೇ ಹೋಲಿಕೆಯಿಲ್ಲ ಎಂದಿದ್ದಾರೆ. ಘಟನೆ ನಡೆದ ಕೂಡಲೇ ನಾವು ದಿನ್‍ದೋಶಿ ಪೊಲೀಸ್ ಠಾಣೆಗೆ ಹೋದೆವು. ಅಲ್ಲಿನ ಪಿಎಸ್‍ಐ ಸಂಬಂಧ್ ಪವಾರ್ ನಮಗೆ ಮಾತನಾಡಲು ಅವಕಾಶವನ್ನೇ ನೀಡಲಿಲ್ಲ. ಹಿರಿಯ ಅಧಿಕಾರಿಗಳನ್ನು ಭೇಟಿಯಾಗಲು ಬಿಡಲಿಲ್ಲ. ಮಹಿಳಾ ಸಿಬ್ಬಂದಿಯನ್ನ ಕರೆಸಿ ನಮ್ಮನ್ನು ಪೊಲೀಸ್ ಠಾಣೆಯಿಂದ ಹೊರಗೆ ಕಳಿಸಿದ್ರು ಎಂದು ಬಾಲಕನ ಅಜ್ಜಿ ಹೇಳಿದ್ದಾರೆ.

ಆರೋಪಿಗಳೊಂದಿಗೆ ರಾಜಿ ಮಾಡಿಕೊಳ್ಳುವಂತೆ ಪೊಲೀಸರು ಹೇಳಿದ್ರು. ಆರೋಪಿಗಳು ಪೊಲೀಸರ ಮುಂದೆಯೇ ಬಾಲಕನ ಜೀವನಾಂಶಕ್ಕಾಗಿ ಹಣ ನೀಡುತ್ತೇವೆ ಎಂದು ಆಮಿಷ ಒಡ್ಡಿದ್ರು. ಆದ್ರೆ ನಾವು ನಿರಾಕರಿಸಿದೆವು. ಇವತ್ತಿಗೂ ಎಲ್ಲಾ ಆರೋಪಿಗಳು ಆರಾಮಾಗಿ ಓಡಾಡಿಕೊಂಡಿದ್ದಾರೆ. ಕೆಲವರು ಆಸ್ಪತ್ರೆಗೆ ಬಂದು ಕೇಸ್ ವಾಪಸ್ ತೆಗೆದುಕೊಳ್ಳುವಂತೆ ಹೇಳಿ ಹಣ ಕೊಡಲು ಮುಂದಾದ್ರು. ಆದ್ರೆ ನಮಗೆ ನ್ಯಾಯ ಬೇಕು. ಆರೋಪಿಗಳಿಗೆ ಶಿಕ್ಷೆಯಾಗಬೇಕು ಎಂದಿದ್ದಾರೆ.

ಆದ್ರೆ ಘಟನೆ ನಡೆದ ದಿನ ಬಾಲಕ ಹಾಗೂ ಆತನ ತಂದೆಯ ಹೇಳಿಕೆ ಪಡೆದಾಗ ಲೈಂಗಿಕ ದೌರ್ಜನ್ಯದ ಬಗ್ಗೆ ಏನೂ ಹೇಳಿರಲಿಲ್ಲ. ಈಗ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಹೀಗಾಗಿ ನಾವು ಐಪಿಸಿ ಸೆಕ್ಷನ್ 307 ಹಾಗೂ ಪೋಕ್ಸೋ ಕಾಯ್ದೆಯ ವಿವಿಧ ಸೆಕ್ಷನ್‍ಗಳನ್ನು ಸೇರಿಸಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ. ಸಂತ್ರಸ್ತ ಬಾಲಕ ಹಾಗೂ ಆರೋಪಿಗಳು ಒಂದೇ ಪ್ರದೇಶದಲ್ಲಿ ವಾಸವಿದ್ದು, ಪರಿಚಯಸ್ಥರಾಗಿದ್ದರು. ಪ್ರಕರಣ ಇತ್ಯರ್ಥ ಮಾಡಿಕೊಳ್ಳುವುದಾಗಿ ಹೇಳಿದ್ರು ಎಂದು ತಿಳಿಸಿದ್ದಾರೆ.

ಆರೋಪಿ ಮತ್ತು ಸಂತ್ರಸ್ತ ಬಾಲಕ ಇಬ್ಬರೂ ಮಾದಕವ್ಯಸನಿಗಳೆಂದು ತನಿಖೆ ವೇಳೆ ತಿಳಿದುಬಂದಿದ್ದು, ಪೆಟ್ರೋಲ್ ಮತ್ತು ಥೀನ್ನರ್ ಸವರಿದ ಕರ್ಚೀಫ್ ಸೊಂಟಕ್ಕೆ ಕಟ್ಟಿಕೊಳ್ಳುತ್ತಿದ್ದರು. ಘಟನೆ ನಡೆದ ದಿನ ಬಟ್ಟೆಯನ್ನ ಮೂಸುತ್ತಿದ್ದಾಗ ಯಾರೋ ಬೆಂಕಿ ಹಚ್ಚಿದ್ದು ಅದಕ್ಕೆ ಕರ್ಚೀಫ್ ತಾಗಿ ಬೆಂಕಿ ಹೊತ್ತಿಕೊಂಡಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *