ಚಿಕ್ಕಮಗಳೂರು: ದತ್ತಪೀಠ, ಮುಳ್ಳಯ್ಯನಗಿರಿ, ಹೊನ್ನಮ್ಮನಹಳ್ಳ ರಸ್ತೆ ಭಾಗದಲ್ಲಿ ಗುಡ್ಡ ಕುಸಿತ ಹಿನ್ನೆಲೆ ಗಿರಿಭಾಗದ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಆಗಸ್ಟ್ 30ರವರೆಗೆ ಈ ಮಾರ್ಗದ ಸಂಚಾರ ನಿಷೇಧಿಸಿ ಡಾ. ಬಗಾದಿ ಗೌತಮ್ ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಗುಡ್ಡ ಕುಸಿತ ಪ್ರಕರಣಗಳು ಹೆಚ್ಚಾಗುತ್ತಿದೆ. ಗಿರಿಭಾಗದ ಪದೇ-ಪದೇ ಗುಡ್ಡಗಳು ಕುಸಿದು, ಅದರ ಮಣ್ಣು ರಸ್ತೆ ಮೇಲೆ ಬಿದ್ದು ವಾಹನ ಸಂಚಾರಕ್ಕೆ ಅಡ್ಡಿ ಮಾಡುತ್ತಿದೆ. ಪ್ರಸಿದ್ಧ ಪ್ರವಾಸಿ ತಾಣಗಳಾದ ಮುಳ್ಳಯ್ಯನಗಿರಿ, ದತ್ತಪೀಠ, ಹೊನ್ನಮ್ಮನಹಳ್ಳ ರಸ್ತೆಯಲ್ಲಿ ಗುಡ್ಡ ಕುಸಿಯುತ್ತಿದೆ. ಹೀಗಾಗಿ ಈ ಮಾರ್ಗದ ಸಂಚಾರಕ್ಕೆ ಜಿಲ್ಲಾಡಳಿತ ಬ್ರೇಕ್ ಹಾಕಿದೆ. ಮುನ್ನೆಚ್ಚರಿಕಾ ಕ್ರಮವಾಗಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಿದೆ.
ಈಗಾಗಲೇ ರಾಷ್ಟ್ರೀಯ ಹೆದ್ದಾರಿ 73ರ ಚಾರ್ಮಾಡಿ ಘಾಟ್ ರಸ್ತೆಗೆ ಭಾರೀ ಮಳೆಯಿಂದ ಹಾನಿಯಾಗಿರುವ ಹಿನ್ನೆಲೆಯಲ್ಲಿ ಒಂದು ತಿಂಗಳ ಕಾಲ ಎಲ್ಲಾ ವಾಹನಗಳ ಸಂಚಾರ ಬಂದ್ ಮಾಡಲಾಗಿದೆ. ಭಾರೀ ಮಳೆಗೆ ಚಾರ್ಮಾಡಿ ಘಾಟಿನ ಹಲವು ಭಾಗಗಳಲ್ಲಿ ರಸ್ತೆ ಮೇಲೆ ಗುಡ್ಡ ಕುಸಿತವಾಗಿತ್ತು. ಸದ್ಯ ರಸ್ತೆ ಮೇಲೆ ಬಿದ್ದಿರುವ ಮಣ್ಣು ತೆರವು ಕಾರ್ಯಾಚರಣೆ ಮುಂದುವರಿಸಲಾಗಿದೆ. ಈ ಕಾರ್ಯ ಪೂರ್ಣಗೊಂಡರೂ, ಕೆಲವೆಡೆ ರಸ್ತೆ ಕುಸಿತವಾಗಿರುವುದರಿಂದ ಆಗಸ್ಟ್ 15ರಿಂದ ಸೆಪ್ಟೆಂಬರ್ 14ವರೆಗೂ ಈ ಮಾರ್ಗದಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.
ಚಿಕ್ಕಮಗಳೂರಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್ ಮಾರ್ಗದಲ್ಲಿ ಸುಮಾರು 20ಕ್ಕೂ ಹೆಚ್ಚು ಪ್ರದೇಶದಲ್ಲಿ ಭೂ ಕುಸಿತ ಸಂಭವಿಸಿದೆ. ಇವುಗಳ ದುರಸ್ಥಿಗೆ 1 ತಿಂಗಳ ಸಮಯಾವಕಾಶದ ಅಗತ್ಯವಿದೆ ಎಂದು ಲೋಕೋಪಯೋಗಿ ಇಲಾಖೆ ತಿಳಿಸಿರುವುದರಿಂದ ಮಾರ್ಗವನ್ನು ಬಂದ್ ಮಾಡಲಾಗಿದೆ.
ಕಳೆದ ವರ್ಷದ ಸುರಿದ ಭಾರೀ ಮಳೆಗೆ ಅಲ್ಲಲ್ಲಿ ಗುಡ್ಡ ಕುಸಿದು ಹಲವು ಬಾರಿ ಸಂಚಾರವನ್ನು ಬಂದ್ ಮಾಡಲಾಗಿತ್ತು. ಈ ಬಾರಿಯೂ ಇದೇ ಪರಿಸ್ಥಿತಿ ಮುಂದುವರಿದಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಯ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಭಾರೀ ಪ್ರಮಾಣದ ಮರಗಳು ಕೂಡ ರಸ್ತೆ ಮೇಲೆ ಉರುಳಿ ಬಿದ್ದಿದೆ. ರಸ್ತೆಗಳ ಕೆಲ ತಿರುವುಗಳಲ್ಲಿ ರಸ್ತೆ ಭಾಗಶಃ ಕೊಚ್ಚಿ ಹೋಗಿದೆ. ಶತಮಾನಗಳಿಂದಲೂ ತನ್ನ ಸೌಂದರ್ಯ ಉಳಿಸಿಕೊಂಡಿದ್ದ ಚಾರ್ಮಾಡಿ ಘಾಟಿನಲ್ಲಿ ಈಗ ಗುಡ್ಡ ಕುಸಿತವೇ ಕಣ್ಣಿಗೆ ರಾಚುತ್ತಿದ್ದು, ತಿರುವುಗಳಲ್ಲಿ ಭೂಭಾಗ ಬಾಯ್ತೆರೆದಿದ್ದು ಅಪಾಯಕಾರಿಯಾಗಿ ಪರಿಣಮಿಸಿದೆ.