ಕೋಲಾರ: ಸಮ್ಮಿಶ್ರ ಸರ್ಕಾರದ ಅಸ್ತಿತ್ವದ ಕುರಿತು ಭಾರೀ ಚರ್ಚೆ ನಡೆಯುತ್ತಿದ್ದರೆ, ಇತ್ತ ಕೋಲಾರ ಜಿಲ್ಲೆಯ ಮುಳಬಾಗಿಲು ಶಾಸಕ ಎಚ್ ನಾಗೇಶ್ ಸರ್ಕಾರದ ವಿರುದ್ಧ ಬಹಿರಂಗವಾಗಿಯೇ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಶಾಸಕ ನಾಗೇಶ್, ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಸರಿಯಾಗಿ ಆಗುತ್ತಿಲ್ಲ. ಒಳ್ಳೆಯ ಕೆಲಸ ಮಾಡಲು ನಮಗೆ ಅವಕಾಶ ನೀಡಬೇಕು. ಆದರೆ ಇಲ್ಲಿ ಸೂಕ್ತ ಸ್ಥಾನಮಾನ ನೀಡದೇ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಮತ್ತೆ ಗೆದ್ದು ಬರಲು ನಾವು ಜನರ ನಿರೀಕ್ಷೆಯನ್ನು ಈಡೇರಿಸುವ ಅಗತ್ಯವಿದೆ. ಸರ್ಕಾರದಲ್ಲಿ ನಮ್ಮ ಮಾತಿಗೆ ಬೆಲೆಯೇ ಇಲ್ಲವಾಗಿದೆ. ನಾನೇನು ಪಾಪ ಮಾಡಿದ್ದೇನೆ ಗೊತ್ತಿಲ್ಲ, ಈಗಲಾದ್ರು ನಮಗೇ ಸೂಕ್ತ ಜವಾಬ್ದಾರಿ ನೀಡಿ ನಮ್ಮ ಸಾಮರ್ಥ್ಯ ಸಾಬೀತು ಪಡಿಸಲು ಅವಕಾಶ ನೀಡಬೇಕು ಎಂದರು.
ಬೆಣ್ಣೆ ಮಾತುಗಳಿಂದಲೇ ಕೆಲಸ:
ಶಾಸಕರಾಗಿ ನಾವು ಯಾವುದೇ ಒಂದು ಮನವಿಯನ್ನ ಸರ್ಕಾರ ಮುಂದಿಟ್ಟರೆ ಅದನ್ನು ಮಾಡಿಕೊಡಬೇಕು. ಆದರೆ ಇಲ್ಲಿ ಬೆಣ್ಣೆ ಮಾತುಗಳ ಮೂಲಕವೇ ಎಲ್ಲವನ್ನು ಮಾಡುವುದಾಗಿ ಹೇಳುತ್ತಾರೆ. ಅನ್ನ ಬಡಿಸಿ ಸಾಂಬಾರ್ ಹಾಕುವ ವೇಳೆಗೆ ತಟ್ಟೆ ಕಿತ್ತುಕೊಳ್ಳುತ್ತಾರೆ. ಈ ಕುರಿತು ಅವರೇ ಆತ್ಮವಲೋಕನ ಮಾಡಿಕೊಳ್ಳುವ ಸಮಯ ಬಂದಿದೆ. ಈ ರೀತಿ ಅನೇಕರು ಸರ್ಕಾರದ ವಿರುದ್ಧ ಅಸಮಾಧಾನ ಹೊಂದಿದ್ದಾರೆ. ಆದರೆ ಅವರಿಗೆ ಹೇಳಲು ಧೈರ್ಯವಿಲ್ಲ. ಆದರೆ ನಾನು ಹೇಳುತ್ತಿದ್ದೇನೆ. ಸರ್ಕಾರದ ನಡೆ ಸರಿ ಅನಿಸುತ್ತಿಲ್ಲ ಎಂದು ನೇರವಾಗಿಯೇ ಹೇಳಿದರು.
ಇದೇ ವೇಳೆ ಒಂದು ತಾಲೂಕು ಅಧಿಕಾರಿಯನ್ನು ವರ್ಗಾವಣೆ ಮಾಡಿ ಅಂದರು ಆಗುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಯಾರು ನಮ್ಮ ಮಾತಿಗೆ ಬೆಲೆ ನೀಡುತ್ತಿಲ್ಲ. ಆದರೆ ನಾನು ಕಾಂಗ್ರೆಸ್ ಪಕ್ಷದ ವಿರೋಧಿ ಅಲ್ಲ. ಆದರೆ ಅವರು ತಮ್ಮ ಸಿದ್ಧಾಂತ ಬಗ್ಗೆ ಜಂಬ ಪಡುತ್ತಾರೆ. ಒಬ್ಬ ಶಾಸಕನ ಕಷ್ಟ ಏನು ಎಂದು ಅರ್ಥೈಸಿಕೊಳ್ಳದೇ ಇದ್ದರೆ ಏನು ಪ್ರಯೋಜನ? ನಮ್ಮ ಮಾತಿಗೆ ಬೆಲೆ ಕೊಟ್ಟರೆ ಮಾತ್ರ ಸರ್ಕಾರಕ್ಕೆ ಬೆಲೆ ಇರುತ್ತದೆ ಎಂದು ತಿಳಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv