ತುಮಕೂರು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಮುದ್ದಹನುಮೇಗೌಡ ಸ್ಪರ್ಧೆ!

Public TV
2 Min Read

– ಮೈತ್ರಿ ಅಭ್ಯರ್ಥಿಯಾಗಿ ದೇವೇಗೌಡ್ರು ಸೋಮವಾರ ನಾಮಪತ್ರ

ತುಮಕೂರು: ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ತಮ್ಮ ಹಾಸನ ಕ್ಷೇತ್ರವನ್ನು ಮೊಮ್ಮಗನಿಗೆ ಬಿಟ್ಟು ಕೊಟ್ಟ ಬಳಿಕ ಎಲ್ಲಿಂದ ಸ್ಫರ್ದೆ ಮಾಡುತ್ತಾರೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿತ್ತು. ತುಮಕೂರಿನಿಂದಲೇ ಸ್ಪರ್ಧಿಸುವುದಾಗಿ ಎಚ್‍ಡಿಡಿ ಘೋಷಣೆ ಮಾಡಿದ್ದರು. ಈ ಬೆನ್ನಲ್ಲೇ ಇದೀಗ ಕಾಂಗ್ರೆಸ್ ನಿಂದಲೂ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದು, ಈ ಮೂಲಕ ಜೆಡಿಎಸ್ ವರಿಷ್ಠರ ಹಾದಿ ಕಠಿಣವಾಯ್ತಾ ಎಂಬ ಪ್ರಶ್ನೆಯೊಂದು ಎದ್ದಿದೆ.

ಹೌದು, ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಹಾಲಿ ಸಂಸದ ಮುದ್ದಹನುಮೇಗೌಡರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತುಮಕೂರಿನಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರೆ. ಅಲ್ಲದೆ ಇವರು ಕೂಡ ಸೋಮವಾರವೇ ನಾಮಪತ್ರ ಸಲ್ಲಿಸಲು ನಿರ್ಧರಿಸಿದ್ದಾರೆ. ಈ ಮೂಲಕ ಮೊಮ್ಕ್ಕಳಿಗಾಗಿ ಕ್ಷೇತ್ರ ದಾನ ಮಾಡಿದ ದೇವೇಗೌಡರು ರಿಸ್ಕ್ ತೆಗೆದುಕೊಂಡಂತೆ ಕಾಣುತ್ತಿದೆ ಎಂಬ ಚರ್ಚೆಗಳು ಜೆಡಿಎಸ್ ಅಂಗಳದಲ್ಲಿ ಆರಂಭಗೊಂಡಿವೆ.

ಬೆಂಬಲಿಗರ ಒತ್ತಾಯದ ಮೇರೆಗೆ ಸ್ಪರ್ಧೆ:
ತುಮಕೂರು ಸಂಸದ ಮುದ್ದಹನುಮೇಗೌಡರ ಹೆಬ್ಬೂರಿನ ತೋಟದ ಮನೆಯಲ್ಲಿ ಬೆಂಬಲಿಗರ ಸಭೆ ಇಂದು ನಡೆದಿದೆ. ಕಾಂಗ್ರೆಸ್ ಮುಖಂಡರ ಸೇರಿದಂತೆ ಈ ಸಭೆಯಲ್ಲಿ ನೂರಾರು ಸಂಖ್ಯೆಯಲ್ಲಿ ಬೆಂಬಲಿಗರು ಸೇರಿದ್ದರು. ಸಂಸದ ಮುದ್ದಹನುಮೇಗೌಡರ, ಕಾಂಗ್ರೆಸ್ ಮುಖಂಡರಾದ ಸಾಸಲು ಸತೀಶ್, ಕಲ್ಲಳ್ಳಿ ದೇವರಾಜ್, ಚೌದ್ರಿ ರಂಗಪ್ಪ ಸೇರಿದಂತೆ ಹಲವರು ಭಾಗಿಯಾಗಿದ್ದರು.

ಸಭೆಯಲ್ಲಿ ಮಾತನಾಡಿದ ಮುದ್ದಹನುಮೇಗೌಡರು, ನನಗಾಗಿ ಅನೇಕ ಹೃದಯಗಳು ಮಿಡಿದಿವೆ. ಅವರಿಗೆ ನನ್ನ ಅಭಿನಂದನೆ ಸಲ್ಲಿಸುತ್ತಿದ್ದೇನೆ. 30 ವರ್ಷದಿಂದ ಸಾರ್ವಜನಿಕ ಜೀವನದಲ್ಲಿದ್ದೇನೆ. ನಾನು 10 ದಿನಗಳ ಹಿಂದೆ ಈ ಸಭೆ ನಡೆಸುತ್ತೇನೆ ಎಂಬ ಅರಿವಿರಲಿಲ್ಲ. ನೀತಿ ಸಂಹಿತೆ ಜಾರಿಗೆ ಬರುವವರೆಗೂ ಲೋಕಸಭೆ ಸದಸ್ಯನಾಗಿ ಕೆಲಸ ಮಾಡಿದೆ. ಒಂದೇ ಒಂದು ಕಾರಣ ಹೇಳಿಲ್ಲ. ನನ್ನನ್ನೇ ಯಾಕೆ ಬಲಿಪಶು ಮಾಡುತ್ತೀರಾ ಎಂದು ಪ್ರಶ್ನಿಸಿದ ಅವರು, ಇನ್ನೂ ಕಾಲ ಮಿಂಚಿಲ್ಲ. ಒಂದು ಅವಕಾಶ ಕೊಡಿ. ನನಗೆ ಟಿಕೆಟ್ ಕೊಟ್ರೆ ಇತಿಹಾಸ ಸೃಷ್ಟಿಯಾಗುತ್ತದೆ. ಒಂದು ವೇಳೆ ಟಿಕೆಟ್ ಸಿಗದೇ ಇದ್ದರೆ ಜನರ ನ್ಯಾಯಾಲಯದಲ್ಲಿ ಹೋಗುತ್ತೇನೆ. ಸೀಟ್ ಗೋಸ್ಕರ ಅಂಗಲಾಚುವ ಪರಿಸ್ಥಿತಿ ಬರಲಿದೆ ಅಂದು ನಿರೀಕ್ಷೆ ಮಾಡಿಲ್ಲ. ಯಾರ ಬಗ್ಗೆನೂ ಟೀಕೆ ಮಾಡಿಲ್ಲ. ಮನವಿ ಮಾಡಿದ್ದೇನೆ ಅಷ್ಟೆ ಅಂದ್ರು.

ಕಾರ್ಯಕರ್ತರ ಸಭೆಯಲ್ಲಿ ಮುದ್ದಹನುಮೇಗೌಡರು ಸ್ವತಂತ್ರವಾಗಿ ಸ್ಪರ್ಧೆ ಮಾಡುವಂತೆ ಬೆಂಬಲಿಗರು ಒತ್ತಾಯಿಸಿದ್ರು. ಅಯ್ಯಯ್ಯೊ ಅನ್ಯಾಯ…ನ್ಯಾಯ ಬೇಕು ಎಂದು ಘೋಷಣೆ ಮಾಡಿದ್ರು. ಸ್ಪರ್ಧೆ ಮಾಡದೇ ಇದ್ದರೆ ವಿಷ ಕುಡಿಯುವುದಾಗಿ ಅಭಿಮಾನಿಗಳಿಂದ ಎಚ್ಚರಿಕೆ ನೀಡಿದ್ದಾರೆ.

ಗೊಂದಲದ ಹೇಳಿಕೆ:
ಅಭಿಮಾನಿಗಳ ಒತ್ತಾಯದ ಮೇರೆಗೆ ಮುದ್ದಹನುಮೇಗೌಡ ಅವರು ಸೋಮವಾರ ನಾಮಪತ್ರ ಸಲ್ಲಿಸಲು ನಿರ್ಧರಿಸಿದ್ದಾರೆ. ಸೋಮವಾರ 11 ಗಂಟೆಗೆ ತುಮಕೂರಿನ ಟೌನ್ ಹಾಲ್ ಸರ್ಕಲ್‍ನಿಂದ ಡಿಸಿ ಕಚೇರಿವರೆಗೂ ಮೆರವಣಿಗೆ ನಡೆಸಿ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವುದಾಗಿ ಘೋಷಣೆ ಮಾಡಿದ್ದಾರೆ. ಕಾರ್ಯಕರ್ತರು ಚುನಾವಣಾ ಕಣದಲ್ಲಿ ಇರಬೇಕೆಂದು ಒತ್ತಾಯಿಸುತ್ತಿದ್ದಾರೆ. ಕಾಂಗ್ರೆಸ್ ನಿಂದ ಟಿಕೆಟ್ ಸಿಗುವ ನಿರೀಕ್ಷೆ ಇದೆ. ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿಯೇ ನಾಮಿನೇಷನ್ ಮಾಡುತ್ತೇನೆ ಎಂದು ಹೇಳುವ ಮೂಲಕ ಮುದ್ದಹನುಮೇಗೌಡರು ಮತ್ತೆ ಗೊಂದಲ ಹುಟ್ಟು ಹಾಕಿದ್ದಾರೆ.

ಪಕ್ಷದ ವಿರುದ್ಧವಾಗಿ ನಾಮಪತ್ರ ಸಲ್ಲಿಸೋದು ಮೈತ್ರಿ ಧರ್ಮದ ವಿರುದ್ಧ ಅಲ್ಲವೆ ಎಂಬ ಕಾಂಗ್ರೆಸ್ ನಾಯಕರ ಪ್ರಶ್ನೆಗೆ ಆಕ್ರೋಶಗೊಂಡ ಮುದ್ದಹನುಮೇಗೌಡ, ನಾನು ಹಾಲಿ ಸಂಸದ. ಹಾಲಿ ಸಂಸದರಿಗೆ ಟಿಕೆಟ್ ತಪ್ಪಿಸೋದು ಮೈತ್ರಿ ಧರ್ಮನಾ. ಅದು ಅವರಿಗೆ ಗೊತ್ತಾಗಬೇಕು. ನಾನು ಸಂಸತ್ತಿನಲ್ಲಿ ಕುಂತಿರೋನು ಎಂದು ಕಿಡಿಕಾರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *