ಕೇಂದ್ರದಿಂದ ತರೋದನ್ನು ರಾಜ್ಯಕ್ಕೆ ತನ್ನಿ, ರಾಜೀನಾಮೆ ಕೇಳುತ್ತಾ ಕೂತರೆ ಹೇಗೆ – ಹೆಚ್‌ಡಿಕೆ ವಿರುದ್ಧವೇ ಜಿಟಿಡಿ ಕಿಡಿ

Public TV
2 Min Read

ಮೈಸೂರು: ಕೇಂದ್ರದಿಂದ ರಾಜ್ಯಕ್ಕೆ ಏನು ತರಬೇಕೋ ಅದನ್ನು ನೋಡಿ. ಅದನ್ನು ಬಿಟ್ಟು ಬರೀ ರಾಜೀನಾಮೆ ಕೇಳುತ್ತಾ ಕೂತರೆ ಹೇಗೆ ಎಂದು ಎಚ್‌ಡಿ ಕುಮಾರಸ್ವಾಮಿ (HD Kumaraswamy) ವಿರುದ್ಧ ಜೆಡಿಎಸ್‌ ಶಾಸಕ ಜಿಟಿ ದೇವೇಗೌಡ (GT Devegowda) ನೇರವಾಗಿಯೇ ವಾಗ್ದಾಳಿ ನಡೆಸಿದ್ದಾರೆ.

ದಸರಾ (Dasara) ಉದ್ಘಾಟನೆ ಸಮಾರಂಭದ ವೇದಿಕೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗ ಎಲ್ಲರೂ ಗಾಜಿನ ಮನೆಯಲ್ಲಿ ಇದ್ದೇವೆ. ರಾಜೀನಾಮೆ ಕೊಡಲು ನ್ಯಾಯಾಲಯ ಹೇಳಿದ್ಯಾ? ಎಫ್‌ಐಆರ್‌ ಆದವರು ರಾಜೀನಾಮೆ ಕೊಡಬೇಕಾಗಿದ್ದರೆ ಜೆಡಿಎಸ್‌ನಲ್ಲಿ ಇರುವವರು ರಾಜೀನಾಮೆ ಕೊಡುತ್ತಾರಾ? ಕೇಂದ್ರದಲ್ಲಿ ಮಂತ್ರಿ ಆದವರಿಗೆ ಜವಾಬ್ದಾರಿ ಬೇಡ್ವಾ? ಕುಮಾರಸ್ವಾಮಿಗೆ ರಾಜೀನಾಮೆ ಕೊಡು ಅಂದರೆ ಕೊಡುತ್ತಾರಾ ಎಂದು ಪ್ರಶ್ನಿಸಿದರು. 136 ಸ್ಥಾನ ಗೆದ್ದು ಸಿಎಂ ಆಗಿರುವ ಸಿದ್ದರಾಮಯ್ಯ ರಾಜೀನಾಮೆ ನೀಡಲು ಆಗುತ್ತಾ? ರಾಜೀನಾಮೆ ಕೊಡಿ ರಾಜೀನಾಮೆ ಕೊಡಿ ಅಂದರೆ ನೀಡುವುದಕ್ಕೆ ಸಾಧ್ಯವೇ ಎಂದು ಪ್ರಶ್ನಿಸಿದರು. ಇದನ್ನೂ ಓದಿ: 50 ಕೋಟಿ ನೀಡುವಂತೆ ಬೆದರಿಕೆ – ಹೆಚ್‌ಡಿಕೆ, ರಮೇಶ್ ಗೌಡ ವಿರುದ್ಧ ದೂರು

 

ಒಂದು ಅತ್ಯಾಚಾರ, ಕೊಲೆಯನ್ನು ಮೂರು ತಿಂಗಳು ಮಾಧ್ಯಮ ತೋರಿಸುತ್ತದೆ. ಒಂದು ಎಫ್‌ಐಆರ್‌ ಅನ್ನು ಎಷ್ಟು ದಿನ ತೋರಿಸುತ್ತಿರಾ? ಯಾರ ಯಾರ ಮೇಲೆ ಎಫ್‌ಐಆರ್‌ ಆಗಿದೆಯೋ ಎಲ್ಲರೂ ರಾಜೀನಾಮೆ ಕೊಡಿ. ಎಲ್ಲಾ ವಿಧಾನಸೌಧದ ಮುಂದೆ ನಿಂತುಕೊಳ್ಳಿ. ಬನ್ನಿ ನೋಡೋಣ ಎಂದು ಸವಾಲು ಎಸೆದರು.

ಸಿದ್ದರಾಮಯ್ಯ (Siddaramaiah) ಚಾಮುಂಡಿ ದೇವಿಯ ವರಪುತ್ರ. ಚಾಮುಂಡೇಶ್ವರಿ ಕ್ಷೇತ್ರದಿಂದ ಸಿದ್ದರಾಮಯ್ಯ ಅವರು ರಾಜಕೀಯ ಆರಂಭಿಸಿ ಇಲ್ಲಿಯವರೆಗೆ ಬೆಳೆದಿದ್ದಾರೆ. ಚಾಮುಂಡಿ ದೇವಿಯ ಆಶೀರ್ವಾದ ಮತ್ತು ಜನರ ಆಶೀರ್ವಾದದಿಂದ ಎರಡು ಬಾರಿ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ.ಚಾಮುಂಡೇಶ್ವರಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ – ಜೆಡಿಎಸ್ ಇಬ್ಬರು ಸೇರಿ ಅವರನ್ನು ಸೋಲಿಸಲು ಯತ್ನಿಸಿದೆವು. ಆದರೆ ಚಾಮುಂಡಿ ಆಶೀರ್ವಾದಿಂದ ಸಿದ್ದರಾಮಯ್ಯ ಅಂದು ಜಯಗಳಿಸಿದ್ದು ಎನ್ನುವ ಮೂಲಕ ಸಿಎಂ ಅವರನ್ನು ಹೊಗಳಿದರು.

 

ಜೋಡೆತ್ತಿನ ರೀತಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ದುಡಿದು ಸರ್ಕಾರ ತಂದರು. ಒಬ್ಬ ದಲಿತ ಮುಖಂಡ ಡಾ.ಎಚ್.ಸಿ. ಮಹಾದೇವಪ್ಪ ಅವರನ್ನು ರಾಜ್ಯ ನಾಯಕ ಮಾಡಿದ್ದು ಸಿದ್ದರಾಮಯ್ಯ. ಡಾ.ಎಚ್.ಸಿ. ಮಹಾದೇವಪ್ಪ ಅದೃಷ್ಟವಂತ. ಸಿದ್ದರಾಮಯ್ಯ ಯಾವತ್ತೂ ಕುಟುಂಬ ನೋಡಿದವರಲ್ಲ ಎಂದರು.

Share This Article