ಹಿರಿಯ ಮಲಯಾಳಂ ಸಾಹಿತಿ ವಾಸುದೇವನ್ ನಾಯರ್ ನಿಧನ

Public TV
2 Min Read

ತಿರುವನಂತಪುರಂ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಹಿರಿಯ ಮಲಯಾಳಂ ಸಾಹಿತಿ, ಎಂಟಿ ವಾಸುದೇವನ್ ನಾಯರ್ (91) ಅವರು ಬುಧವಾರ ನಿಧನರಾದರು.

ಹೃದಯ ಸಂಬಂಧಿ ತೊಂದರೆಯಿಂದ ಬಳಲುತ್ತಿದ್ದವಾಸುದೇವನ್ ನಾಯರ್( MT Vasudevan Nair) ಅವರನ್ನು ಕೆಲ ದಿನಗಳ ಹಿಂದೆಯಷ್ಟೇ ಕೋಯಿಕ್ಕೋಡ್‌ ಬೇಬಿ ಮೆಮೋರಿಯಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ರಾತ್ರಿ ಸುಮಾರು 10 ಗಂಟೆಗೆ ನಿಧನ ಹೊಂದಿದರು.

ಮೃತರು ಪತ್ನಿ ಕಲಾಮಂಡಲಂ ಸರಸ್ವತಿ ಹಾಗೂ ಮಗಳಾದ ಅಶ್ವತಿಯನ್ನು ಅಗಲಿದ್ದಾರೆ. ಎಂಟಿ ನಿಧನಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Pinarayi Vijayan), ಪ್ರಧಾನಿ ನರೇಂದ್ರ ಮೋದಿ (PM Narendra Modi) ಸೇರಿದಂತೆ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮತ್ತೊಂದು ಬಂಪರ್ ಆಫರ್ ಬಾಚಿಕೊಂಡ ಶ್ರೀಲೀಲಾ

ಎಂಟಿ ವಾಸುದೇವನ್ ನಾಯರ್ ಅವರಿಗೆ ಗೌರವ ಸೂಚಕವಾಗಿ ಕೇರಳ ಸರ್ಕಾರ ಡಿ. 26 ಮತ್ತು 27 ರಂದು ಅಧಿಕೃತ ಶೋಕಾಚರಣೆ ಘೋಷಿಸಿದೆ.

ಸಣ್ಣ ಕಥೆ, ಚಿತ್ರಕಥೆ, ನಾಟಕ, ಕಾದಂಬರಿ, ಮಕ್ಕಳ ಸಾಹಿತ್ಯ, ಪ್ರವಾಸ ಕಥನ, ಲೇಖನ ಹೀಗೆ ಬರವಣಿಗೆಯ ಎಲ್ಲಾ ಪ್ರಕಾರಗಳಲ್ಲೂ ವಾಸುದೇವನ್ ನಾಯರ್ ಸಾಹಿತ್ಯ ಕೃಷಿಯನ್ನು ಮಾಡಿದ್ದರು. ಪತ್ರಕರ್ತರಾಗಿಯೂ ಸೇವೆ ಸಲ್ಲಿಸಿದ್ದ ಇವರು ನಿರ್ಮಾಲ್ಯಂ ಸೇರಿದಂತೆ 6 ಚಲನಚಿತ್ರಗಳು ಮತ್ತು ಎರಡು ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿದ್ದರು.

1995 ರಲ್ಲಿ ಜ್ಞಾನಪೀಠ, 2005ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ವಯಲಾರ್ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವಲ್ಲತ್ತೋಳ್ ಪ್ರಶಸ್ತಿ, ಜೆ.ಸಿ. ಅವರು ಡೇನಿಯಲ್ ಪ್ರಶಸ್ತಿ ಸೇರಿದಂತೆ ಹಲವಾರು  ಗೌರವಗಳನ್ನು ಇವರು ಪಡೆದುಕೊಂಡಿದ್ದಾರೆ. ಅವರು ನಾಲ್ಕು ಬಾರಿ ಚಿತ್ರಕಥೆಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು 11 ಬಾರಿ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದರು. ಮೂರು ಬಾರಿ ಅತ್ಯುತ್ತಮ ನಿರ್ದೇಶಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಗಳಿಸಿದ್ದರು.

Share This Article