ಆ ಒಂದು ಆಸೆಗಾಗಿ ಧೋನಿ ಈ ಬಾರಿ ಐಪಿಎಲ್‍ಗೆ ನಿವೃತ್ತಿ ಘೋಷಿಸಿಲ್ಲ

Public TV
2 Min Read

ದುಬೈ: ಭಾರತ ಕಂಡ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾದ ಮಹೇಂದ್ರ ಸಿಂಗ್ ಧೋನಿ ತಮ್ಮ ಕೊನೆಯ ಪಂದ್ಯವನ್ನು ತಮ್ಮ ಅತ್ಯಂತ ಪ್ರೀತಿ ಪಾತ್ರವಾದ ಅಭಿಮಾನಿಗಳೊಂದಿಗೆ ಆಡಬೇಕೆಂಬ ಹೆಬ್ಬಯಕೆಯನ್ನು ತೋಡಿಕೊಂಡಿದ್ದಾರೆ. ಹೀಗಾಗಿ ಈ ಬಾರಿಯ ಐಪಿಎಲ್ ಬಳಿಕ ಧೋನಿ ನಿವೃತ್ತಿ ಘೋಷಿಸಲಿದ್ದಾರೆ ಎಂಬ ಸುದ್ದಿಗೆ ತೆರೆ ಬಿದ್ದಿದೆ.

ಐಸಿಸಿಯ ಎಲ್ಲಾ ಮಾದರಿಯ ಟ್ರೋಫಿ ಜೊತೆಗೆ ಐಪಿಎಲ್ ಕಿರೀಟವನ್ನು ಗೆದ್ದಿರುವ ಧೋನಿ 2020ರ ಆಗಸ್ಟ್ 15 ರಂದು ಅಂತರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದರು. ಆ ಬಳಿಕ ಐಪಿಎಲ್‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿ ಮಾತ್ರ ಕಾಣಿಸಿಕೊಳ್ಳುತ್ತಿರುವ ಧೋನಿಗೆ ಈ ಬಾರಿ ದುಬೈನಲ್ಲಿ ನಡೆಯುತ್ತಿರುವ ಐಪಿಎಲ್ ಕೊನೆಯ ಐಪಿಎಲ್ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಸ್ವತಃ ಧೋನಿ ಮಾತನಾಡಿದ್ದು, ತಮ್ಮ ಆ ಒಂದು ಆಸೆಯಿಂದಾಗಿ ಈ ಬಾರಿ ಐಪಿಎಲ್‍ಗೆ ವಿದಾಯ ಘೋಷಿಸುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಪಂಡೋರಾ ಪೇಪರ್ ರಹಸ್ಯ- ಸಚಿನ್ ತೆಂಡೂಲ್ಕರ್ ಹೆಸರು ಉಲ್ಲೇಖ

ಧೋನಿ ಟೀಂ ಇಂಡಿಯಾ ಬಳಿಕ ಅತೀ ಹೆಚ್ಚು ಭಾವನಾತ್ಮಕವಾಗಿ ಸಂಬಂಧವನ್ನು ಹೊಂದಿರುವ ತಂಡವೆಂದರೆ ಅದು ಚೆನ್ನೈ ಸೂಪರ್ ಕಿಂಗ್ಸ್ ತಂಡ. ಐಪಿಎಲ್ 2008ರಲ್ಲಿ ಆರಂಭವಾದ ಬಳಿಕ ಚೆನ್ನೈ ಪರ ಆಡುತ್ತಿರುವ ಧೋನಿ ವಿಶೇಷವಾದ ಸಂಬಂಧವನ್ನು ಚೆನ್ನೈ ತಂಡ ಮತ್ತು ತಮಿಳುನಾಡಿನ ಜನರೊಂದಿಗೆ ಹೊಂದಿದ್ದಾರೆ. ಹಾಗಾಗಿ ತಮ್ಮ ಕೊನೆಯ ಪಂದ್ಯವನ್ನು ಚೆನ್ನೈ ನಗರದ ಎಂ ಚಿದಂಬರಂ ಸ್ಟೇಡಿಯಂನಲ್ಲಿ ತಮ್ಮ ಅಚ್ಚು-ಮೆಚ್ಚಿನ ಪ್ರೇಕ್ಷಕರ ಮುಂದೆ ಆಡಿ ನಿವೃತ್ತಿ ಘೋಷಿಸುವ ಆಸೆಯನ್ನು ಧೋನಿ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಭಾರತ, ಪಾಕಿಸ್ತಾನ ಟಿ20 – ಕೆಲವೇ ನಿಮಿಷಗಳಲ್ಲಿ ಟಿಕೆಟ್ ಸೋಲ್ಡ್ ಔಟ್

14ನೇ ಆವೃತ್ತಿಯ ಐಪಿಎಲ್‍ನಲ್ಲಿ ಆಡುತ್ತಿರುವ ಧೋನಿ ಇಂಡಿಯಾ ಸಿಮೆಂಟ್ಸ್ ಅವರ ವರ್ಚುವಲ್ ಕಾರ್ಯಕ್ರಮದಲ್ಲಿ ಅಭಿಮಾನಿಗಳ ಜೊತೆ ಸಂವಾದ ನಡೆಸುತ್ತಿದ್ದರು. ಈ ವೇಳೆ ಇದು ಕೊನೆಯ ಐಪಿಎಲ್ ಎಂಬ ಪ್ರಶ್ನೆಗೆ ಖಂಡಿತವಾಗಿಯೂ ಅಲ್ಲ. ನಾನು ಚಿದಂಬರಂ ಕ್ರೀಡಾಗಂಣದಲ್ಲಿ ನನ್ನ ಕೊನೆಯ ಪಂದ್ಯವನ್ನು ಆಡಲು ಬಯಸುತ್ತಿದ್ದೇನೆ ಎಂದಿದ್ದಾರೆ. ಇದರಿಂದಾಗಿ ಧೋನಿ ಮುಂದಿನ ಆವೃತ್ತಿ ಐಪಿಎಲ್‍ನಲ್ಲಿಯೂ ಕಾಣಿಸಿಕೊಳ್ಳುವುದರಲ್ಲಿ ಅನುಮಾನವಿಲ್ಲ. ಇದನ್ನೂ ಓದಿ: ಬಾಲಿವುಡ್ ನನ್ನ ಕಪ್ ಆಫ್ ಟೀ ಅಲ್ಲ: ಧೋನಿ

ಕಳೆದ ಬಾರಿ ಐಪಿಎಲ್‍ನಲ್ಲಿ ನಿರಾಸ ಪ್ರದರ್ಶನ ತೋರಿ ಅಂಕಪಟ್ಟಿಯಲ್ಲಿ 7ನೇ ಸ್ಥಾನ ಪಡೆದುಕೊಂಡಿದ್ದ ಚೆನ್ನೈ ತಂಡ ಮತ್ತೆ ಪುಟಿದೇಳಲಿದೆ ಎಂದು ಕಳೆದ ಬಾರಿ ಧೋನಿ ಹೇಳಿದ್ದರು. ಅದರಂತೆ ಈ ಬಾರಿಯ ಐಪಿಎಲ್‍ನಲ್ಲಿ ಉತ್ತಮ ಪ್ರದರ್ಶನ ತೋರಿ ಇದೀಗ ಪ್ಲೇ ಆಫ್ ತಲುಪಿದೆ. ಈ ನಡುವೆ ಧೋನಿ ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದರು ಕೂಡ ನಿವೃತ್ತಿ ಬಗ್ಗೆ ಅನುಮಾನಗಳು ಇದೆ. ಯಾಕೆಂದರೆ ಧೋನಿ ತಮ್ಮ ದಿಢೀರ್ ನಿರ್ಧಾರಗಳಿಂದ ಶಾಕ್ ಕೊಡುವವರು. ಹಾಗಾಗಿ ಧೋನಿ ನಡೆಯ ಬಗ್ಗೆ ಕುತೂಹಲ ಮೂಡಿಸಿದೆ.

Share This Article
Leave a Comment

Leave a Reply

Your email address will not be published. Required fields are marked *