ಅಂಪೈರ್ ಜೊತೆ ವಾಗ್ವಾದ – ಧೋನಿ ನಡೆಗೆ ಹಿರಿಯ ಆಟಗಾರರು ಗರಂ

Public TV
2 Min Read

ಜೈಪುರ: ರಾಜಸ್ಥಾನ ರಾಯಲ್ಸ್ ವಿರುದ್ಧ ನಡೆದ ಟಿ20 ಪಂದ್ಯದ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ, ಮೈದಾನ ಪ್ರವೇಶ ಮಾಡಿ ಅಂಪೈರ್ ಜೊತೆ ವಾಗ್ವಾದ ನಡೆಸಿದ ಘಟನೆ ಬಗ್ಗೆ ಹಲವು ಹಿರಿಯ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಐಪಿಎಲ್ 12ನೇ ಆವೃತ್ತಿಯ ಭಾಗವಾಗಿ ಗುರುವಾರ ನಡೆದ ಪಂದ್ಯದ ಅಂತಿಮ ಓವರಿನಲ್ಲಿ ಅಂಪೈರ್ ನೋಬಾಲ್ ನೀಡಿ ಬಳಿಕ ತಮ್ಮ ನಿರ್ಧಾರದಿಂದ ಹಿಂದಕ್ಕೆ ಸರಿದಿದ್ದರು. ಈ ವೇಳೆ ಬೌಂಡರಿ ಲೈನ್ ಬಳಿ ಕುಳಿತಿದ್ದ ಧೋನಿ ಮೈದಾನಕ್ಕೆ ಆಗಮಿಸಿ ಅಂಪೈರ್ ಜೊತೆ ಚರ್ಚೆ ನಡೆಸಿದ್ದರು. ಬ್ಯಾಟಿಂಗ್ ನಡೆಸುತ್ತಿದ್ದ ಜಡೇಜಾ ಕೂಡ ಅಂಪೈರ್ ರೊಂದಿಗೆ ಮಾತುಕತೆ ನಡೆಸಿದ್ದರು. ಯಾವುದೇ ಸಮಯದಲ್ಲೂ ತಾಳ್ಮೆ ಕಳೆದುಕೊಳ್ಳದೇ ಇರುತ್ತಿದ್ದ ಧೋನಿ ಮಾತ್ರ ಐಪಿಎಲ್ ನಿಯಮಗಳನ್ನು ಮೀರಿ ಮೈದಾನಕ್ಕೆ ಆಗಮಿಸಿದ್ದು ವಿಶೇಷವಾಗಿತ್ತು.

ಧೋನಿ ಅವರ ನಡೆಗೆ ಮ್ಯಾಚ್ ರೆಫ್ರಿ ಪಂದ್ಯದ ಸಂಭಾವನೆಯ ಶೇ.50 ಮೊತ್ತವನ್ನ ದಂಡವಾಗಿ ವಿಧಿಸಿದ್ದಾರೆ. ಇದರ ಬೆನ್ನಲ್ಲೇ ತಂಡದ ಅನುಭವಿ ನಾಯಕರಾಗಿ ಧೋನಿ ಮೈದಾನ ಪ್ರವೇಶ ಮಾಡಿ ಅಂಪೈರ್ ಜೊತೆ ಚರ್ಚೆ ನಡೆಸಿದ್ದು ಸರಿಯಲ್ಲ ಎಂದು ಆಸ್ಟ್ರೇಲಿಯಾ ಮಾಜಿ ಆಟಗಾರ ಮಾರ್ಕ್ ವೋ ಹೇಳಿದ್ದಾರೆ. ಅಲ್ಲದೇ ಟೀಂ ಇಂಡಿಯಾ ಮಾಜಿ ಆಟಗಾರರದ ಆಕಾಶ್ ಚೋಪ್ರಾ, ಹೇಮಂಗ್ ಬದನಿ ಸೇರಿದಂತೆ ಹಲವು ಆಟಗಾರರು ಧೋನಿ ನಡೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಇತ್ತ ಟೂರ್ನಿಯಲ್ಲಿ ಅಂಪೈರ್ ಗಳ ಪ್ರದರ್ಶನವೂ ಕೆಟ್ಟದಾಗಿದೆ ಎಂದು ತಿಳಿಸಿ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಂತಿಮ ಎಸೆತದಲ್ಲಿ ಸಿಕ್ಸರ್ ಸಿಡಿಸಿ ಮಿಚೆಲ್ ಸ್ಯಾಂಟ್ನರ್ ಸಿಎಸ್‍ಕೆ ಗೆ ಗೆಲುವು ತಂದರು. ಈ ಪಂದ್ಯದಲ್ಲಿ ಚೆನ್ನೈ ತಂಡದ ಮೂಲಕ ಐಪಿಎಲ್ ಟೂರ್ನಿಯಲ್ಲಿ 100 ಗೆಲುವುಗಳಲ್ಲಿ ಜಯಗಳಿಸಿದ ಮೊದಲ ತಂಡದ ನಾಯಕ ಎಂಬ ಹೆಗ್ಗಳಿಕೆ ಧೋನಿ ಪಾತ್ರರಾಗಿದ್ದಾರೆ. ಅಂತಿಮ ಓವರಿನ 6 ಎಸೆತಗಳಲ್ಲಿ 18 ರನ್ ಗಳಿಸಬೇಕಾದ ಒತ್ತಡದಲ್ಲಿ ಇದ್ದ ವೇಳೆ ಓವರಿನ ಎಸೆತ ಎದುರಿಸಿದ ಜಡೇಜಾ ಸಿಕ್ಸರ್ ಸಿಡಿಸಿದ್ದರು. ಆದರೆ ಈ ವೇಳೆ ಬ್ಯಾಲೆನ್ಸ್ ತಪ್ಪಿ ಕೆಳಕ್ಕೆ ಬಿದ್ದರು. ಇತ್ತ ಬೌಲರ್ ಕೂಡ ಆಯತಪ್ಪಿ ಕೆಳಕ್ಕೆ ಬಿದ್ದರು. ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Share This Article
Leave a Comment

Leave a Reply

Your email address will not be published. Required fields are marked *