16 ವರ್ಷಗಳ ಸಾರ್ಥಕ ಸಂಭ್ರಮ – ಆರ್‌ಸಿಬಿ ಕಪ್‌ ಗೆದ್ದ ನಂತ್ರ ಏನಾಯ್ತು? ಇಲ್ಲಿದೆ ಸ್ಪೆಷಲ್‌ ವೀಡಿಯೋ…

Public TV
3 Min Read

– ನಮ್‌ ಮನ್ಸು ನಮ್ಗೆ ಒಳ್ಳೆದ್‌ ಮಾಡಿದ್ರೆ ದೇವ್ರು ಏನಂತಿರಾ? ಅಂತಾರೆ ನಮ್‌ ಕನ್ನಡತಿ

ನವದೆಹಲಿ: ಪ್ರತಿ ಬಾರಿಯೂ ʻಈ ಸಲ ಕಪ್‌ ನಮ್ದೆ, ಈ ಸಲ ಕಪ್‌ ನಮ್ದೆʼ (ESCN) ಎನ್ನುತ್ತಿದ್ದ ಆರ್‌ಸಿಬಿ ಅಭಿಮಾನಿಗಳ (RCB Fans) ಕನಸು 16 ವರ್ಷಗಳ ಬಳಿಕ ನನಸಾಗಿದೆ. ಮಹಿಳಾ ಪ್ರೀಮಿಯರ್‌ ಲೀಗ್‌ನ 2ನೇ ಆವೃತ್ತಿಯಲ್ಲಿ ಟ್ರೋಫಿ ಎತ್ತಿಹಿಡಿದ ಆರ್‌ಸಿಬಿ ಮಹಿಳಾ ತಂಡ, ಹೆಣ್ಮಕ್ಕಳೆ ಸ್ಟ್ರಾಂಗು ಗುರು ಅನ್ನೋ ಮಾತನ್ನ ಮತ್ತೊಮ್ಮೆ ಸಾಬೀತು ಮಾಡಿದೆ.

ಆರ್‌ಸಿಬಿ ಜಯಗಳಿಸುತ್ತಿದ್ದಂತೆ ಸೋಶಿಯಲ್‌ ಮೀಡಿಯಾಗಳಲ್ಲಿ ರಾತ್ರಿಯಿಡಿ #RCB, #CongratulationsRCB ಟ್ರೆಂಡ್‌ ಸೃಷ್ಟಿಯಾಗಿತ್ತು. ಅದರಲ್ಲೂ ಬೆಂಗಳೂರಿನ ಅಭಿಮಾನಿಗಳು ಪಟಾಕಿ ಸಿಡಿಸಿ ರಸ್ತೆಯಲ್ಲಿ ಕುಣಿದು ಕುಪ್ಪಳಿಸಿದರು. ಬೆಂಗಳೂರು ಮಾತ್ರವಲ್ಲ ಇಡೀ ದೇಶಾದ್ಯಂತ‌ ಆರ್‌ಸಿಬಿ ಅಭಿಮಾನಿಗಳು ವನಿತೆಯರ ಗೆಲುವನ್ನು ಹಬ್ಬದಂತೆ ಸಂಭ್ರಮಿಸಿದರು.

ಸದ್ಯ ಆರ್‌ಸಿಬಿ ಅಭಿಮಾನಿಗಳಿಗೆ ಮಹಿಳಾ ತಂಡ ಕಪ್‌ ಟ್ರೋಫಿ ಬಾಚಿಕೊಂಡಿತು ಎಂಬುದಷ್ಟೇ ನೆನಪಿದೆ. ನಂತರ ಕೊನೆಯ ಕ್ಷಣಗಳು ಹೇಗಿತ್ತು? 16 ವರ್ಷಗಳ ಸಂಭ್ರಮವನ್ನು ಹೇಗೆ ಕೊಂಡಾಡಿದರು ಅನ್ನೋದನ್ನ ನೀವು ಕಣ್ತುಂಬಿಕೊಳ್ಳಲೇಬೇಕು. ಅದಕ್ಕಾಗಿಯೇ ಆರ್‌ಸಬಿ ಮಿಸ್ಟರ್‌ ನಾಗ್ಸ್‌ ಅವರ ಸ್ಪೆಷಲ್‌ ವೀಡಿಯೋವೊಂದನ್ನ ರಿಲೀಸ್‌ ಮಾಡಿದೆ. ಆರ್‌ಸಿಬಿ ಅಭಿಮಾನಿಗಳಿಗಂತೂ ಮಿಸ್ಟರ್‌ ನಾಗ್ಸ್‌ (Mr. Nags) ಗೊತ್ತೇ ಇರುತ್ತೆ. ಐಪಿಎಲ್‌ ಶುರುವಾಗುತ್ತೆ ಅಂದ್ರೆ ಸಾಕು ಮಿಸ್ಟರ್‌ ನಾಗ್ಸ್‌ ಅಲ್ಲಿದ್ದೇ ಇರುತ್ತಾರೆ. ಅಭಿಮಾನಿಗಳಿಗೆ ಈ ಆರ್‌ಸಿಬಿ ತಂಡ ಎಷ್ಟು ಇಷ್ಟಾನೋ ಅಷ್ಟೇ ಈ ಮಿಸ್ಟರ್‌ ನಾಗ್ಸ್‌ ಕೂಡ ಇಷ್ಟ. ಇವರ ತರಲೆ, ತುಂಟಾಟಗಳಿಗೆ ಫ್ಯಾನ್ ಬೇಸ್‌ ಇದೆ ಅಂದ್ರೆ ತಪ್ಪಾಗಲ್ಲ.

ಕಪ್‌ ಗೆದ್ದ ನಂತರ ಏನಾಯ್ತು?
ಆರ್‌ಸಿಬಿ ಕಪ್‌ ಗೆದ್ದ ಕ್ಷಣವನ್ನು ಅಭಿಮಾನಿಗಳು ಮರೆಯೋಕೆ ಸಾಧ್ಯವೇ ಇಲ್ಲ. ಮುಖದಲ್ಲಿ ನಗು ತೇಲುತ್ತಿದ್ದಂತೆ ಕೆಲ ಆಟಗಾರ್ತಿಯರ ಕಣ್ಣುಗಳು ಒದ್ದೆಯಾಗಿತ್ತು. ಟೂರ್ನಿಯುದ್ಧಕ್ಕೂ ಅಭಿಮಾನಿಗಳು ಪ್ರೋತ್ಸಾಹಿಸಿದ ರೀತಿ, ತಾವು ಮಾಡಿದ ತರಲೆ-ತುಂಟಾಟಗಳು, ಗೆದ್ದ ಬಳಿಕ ಸಿಕ್ಕ ಪ್ರಸಂಶೆಗಳು ಕಂಡು ಅವರಿಗೆ ಮಾತುಗಳೇ ಬಾರದಂತಾಗಿತ್ತು. ಒಬ್ಬರನ್ನೊಬ್ಬರು ಅಪ್ಪಿಕೊಂಡು ಸಂತೈಸಿದರು, ಮೈದಾನದಲ್ಲಿ ಕುಣಿದು ಕುಪ್ಪಳಿಸಿದರು. ಕೆಲ ಅಭಿಮಾನಿಗಳು ನೆಚ್ಚಿನ ಆಟಗಾರ್ತಿಯರಿಂದ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ತೆರೆಯ ಹಿಂದೆ, ಮುಂದೆ ಆರ್‌ಸಿಬಿ ತಂಡಕ್ಕಾಗಿ ಮುಡಿಪಾಗಿದ್ದವರನ್ನು ಪರಿಚಯಿಸುವ ಪ್ರಯತ್ನವೂ ಅಲ್ಲಿ ನಡೆಯಿತು. ಒಟ್ಟಿನಲ್ಲಿ ಆರ್‌ಸಿಬಿ ಟ್ರೋಫಿ ಗೆಲುವು ಇಂದೆಂದು ಕಂಡಿರಂತ ಸ್ಮರಣೀಯ ಗೆಲುವಾಗಿತ್ತು. 16 ವರ್ಷಗಳ ಸಂಭ್ರಮದ ಸಾರ್ಥಕತೆ ಅಲ್ಲಿ ತುಂಬಿತ್ತು.

ಏನಂತಾರೆ ನಮ್‌ ಕನ್ನಡತಿ ಶ್ರೇಯಾಂಕ?
ಆರ್‌ಸಿಬಿ ಟ್ರೋಫಿ ಎತ್ತಿ ಹಿಡಿಯುತ್ತಿದ್ದಂತೆ ತುಂಟ ಹುಡುಗಿಯಂತೆ ಕುಣಿದಾಡುತ್ತಲೇ ಇದ್ದ ಕನ್ನಡತಿ ಶ್ರೇಯಾಂಕಾ ಪಾಟೀಲ್‌ (Shreyanka Patil), ಇತ್ತೀಚೆಗೆ ಸೋಶಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಸೃಷ್ಟಿಸಿದ್ದ ಡೈಲಾಗ್‌ ಹೇಳಿ, ತಾವೂ ತರ್ಲೆ ಮಾಡೋದ್ರಲ್ಲಿ ಹುಡಗರಿಗಿಂತ ಕಡಿಮೆ ಇಲ್ಲ ಅನ್ನೋದನ್ನ ತೋರಿಸಿಕೊಟ್ಟರು. ʻನಮ್‌ ಮನ್ಸು ನಮ್ಗೆ ಒಳ್ಳೆದ್‌ ಮಾಡಿದ್ರೆ ದೇವ್ರುʼ ಅನ್ನೋ ಡೈಲಾಗ್‌ ಅನ್ನ ತನ್ನ ಸ್ಟೈಲ್‌ನಲ್ಲಿ ಹೇಳಿದ್ರು. ʻನಮ್‌ ದೇವ್ರು, ನಮ್‌ ಅಪ್ಪ ಅಮ್ಮನ ಆಶೀರ್ವಾದ ಎಲ್ಲಾ ಇದ್ರೆ ಆರಾಮು, ಏನಂತಿರಾ? ಅಂತಾ ಮಿಸ್ಟರ್‌ ನಾಗ್ಸ್‌ ಅವರನ್ನೇ ಕಿಚಾಯಿಸಿದ್ರು, ಟ್ರೋಫಿ ಗೆದ್ದ ಮೇಲೆ ನನಗಂತೂ ಮಾತೇ ಹೊರಡುತ್ತಿಲ್ಲ ಅನ್ನುತ್ತಲೇ ಮಾಯವಾಗ್ಬಿಟ್ರು!!

ಆರ್‌ಸಿಬಿ ತಂಡದಲ್ಲಿ ಯಾರಿದ್ದರು?
ಸ್ಮೃತಿ ಮಂಧಾನ, ಸೋಫಿ ಮೊಲಿನೆಕ್ಸ್, ಎಲ್ಲಿಸ್ ಪೆರ್ರಿ, ಸೋಫಿ ಡಿವೈನ್, ರಿಚಾ ಘೋಷ್, ಜಾರ್ಜಿಯಾ ವೆರ್ಹೋಮ್‌, ದಿಶಾ ಕಸತ್, ಶ್ರೇಯಾಂಕಾ ಪಾಟೀಲ್, ಆಶಾ ಸೋಭನಾ, ಶ್ರದ್ಧಾ ಪೋಖರ್ಕರ್, ರೇಣುಕಾ ಠಾಕೂರ್ ಸಿಂಗ್, ಸಿಮ್ರಾನ್ ಬಹದ್ದೂರ್, ಇಂದ್ರಾಣಿ ರಾಯ್, ಶುದಿನೆ ರಾಯ್, ಡಿ ಕ್ಲರ್ಕ್, ಸಬ್ಬಿನೇನಿ ಮೇಘನಾ, ಕೇಟ್ ಕ್ರಾಸ್, ಏಕ್ತಾ ಬಿಷ್ಟ್.

Share This Article