ಮಂಡ್ಯ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಸುಮಲತಾ ಭಾಗಿ

Public TV
2 Min Read

– ಫಾರಿನ್ ಟೂರ್ ಹೋದವರು ಯಾರು ಎಂದು ಎಲ್ಲರಿಗೂ ಗೊತ್ತಿದೆ
– ಬಿಜೆಪಿ ಸೇರ್ಪಡೆ ಪ್ರಶ್ನೆಗೆ ಉತ್ತರ ಕೊಟ್ಟ ಸಂಸದೆ

ಮಂಡ್ಯ: ಕೇಂದ್ರದಿಂದ ಪರಿಹಾರ ತರುವ ವಿಚಾರದಲ್ಲಿ ರಾಜ್ಯದ ಬಿಜೆಪಿ ಸಂಸದರನ್ನು ಸಮರ್ಥಿಸಿಕೊಂಡಿದ್ದ ಸಂಸದೆ ಸುಮಲತಾ ಬಿಜೆಪಿ ಸೇರುತ್ತಾರಾ ಎನ್ನುವ ಪ್ರಶ್ನೆ ಹುಟ್ಟಿಕೊಂಡಿತ್ತು. ಈ ಪ್ರಶ್ನೆಗೆ ಪೂರಕವಾಗಿ ಬಿಜೆಪಿ ಸದಸ್ಯರಲ್ಲದೇ ಇದ್ದರೂ ಕಮಲ ನಾಯಕರು ನಡೆಸುತ್ತಿರುವ ಇಂದಿನ ಸಭೆಯಲ್ಲಿ ಸಂಸದೆಗೆ ಕೆಲಸ ಏನು ಎನ್ನುವ ಪ್ರಶ್ನೆ ಎದ್ದಿತ್ತು. ಈ ಎಲ್ಲ ಪ್ರಶ್ನೆಗಳಿಗೆ ಸುಮಲತಾ ಉತ್ತರ ನೀಡುವ ಮೂಲಕ ತನ್ನ ಮೇಲೆ ಕೇಳಿ ಬಂದಿದ್ದ ರಾಜಕೀಯ ಸುದ್ದಿಗಳಿಗೆ ಪೂರ್ಣವಿರಾಮ ಹಾಕಿದ್ದಾರೆ.

ಇಂದು ಮಂಡ್ಯ ಬಿಜೆಪಿ ಕಚೇರಿಯಲ್ಲಿ ನಡೆದಿದ್ದ ಕೋರ್ ಕಮಿಟಿ ಸದಸ್ಯರ ಸಭೆಯಲ್ಲಿ ಸುಮಲತಾ ಭಾಗವಹಿಸಿ ಮಾಧ್ಯಮಗಳ ಮುಂದೆ ಸ್ಪಷ್ಟನೆ ನೀಡಿದರು.

ಈ ಮೊದಲೇ ನಾಲ್ಕೈದು ಬಾರಿ ಬಿಜೆಪಿ ಸಭೆಗೆ ಬರಬೇಕಾಗಿತ್ತು. ಆದರೆ ಕಾರಣಾಂತರದಿಂದ ಸಾಧ್ಯವಾಗಿರಲಿಲ್ಲ. ಅದ್ದರಿಂದ ಇಂದು ಬಂದಿದ್ದೇನೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರು ನನ್ನ ಪರವಾಗಿ ಕೆಲಸ ಮಾಡಿದ್ದರು. ಹಾಗಾಗಿ ಅವರಿಗೆ ಧನ್ಯವಾದ ಹೇಳಬೇಕಾಗಿತ್ತು. ಆ ಕಾರಣದಿಂದ ಇಂದು ಬಿಜೆಪಿ ಸದಸ್ಯರ ಸಭೆಯಲ್ಲಿ ಭಾಗಿಯಾಗಿದ್ದೇನೆ ಎಂದು ತಿಳಿಸಿದರು.

ಇದೇ ವೇಳೆ ನಾನು ಬಿಜೆಪಿ ಪಕ್ಷ ಸೇರುವುದಾದರೆ ಎಲ್ಲರಿಗೂ ಹೇಳಿ ಪಕ್ಷಕ್ಕೆ ಅಧಿಕೃತವಾಗಿ ಸೇರುತ್ತೇನೆ. ಅದನ್ನು ಬಿಟ್ಟು ಮುಚ್ಚಿಟ್ಟು ಮರೆಮಾಡಿ ಪಕ್ಷ ಸೇರ್ಪಡೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಕೆ.ಆರ್.ಪೇಟೆ ಉಪ ಚುನಾವಣೆಯಲ್ಲಿ ಯಾವ ಪಕ್ಷ ಬೆಂಬಲಿಸುತ್ತೀರಾ ಎಂದು ಕೇಳಿದಾಗ, ಆ ಕಾಲ ಬಂದಾಗ ನೋಡೋಣ ಎಂದು ಉತ್ತರಿಸಿದರು.

ಜೋಡೆತ್ತುಗಳು ಈಗ ಎಲ್ಲಿ ಹೋದರು ಎಂಬ ಟೀಕೆಗೆ ತಿರುಗೇಟು ನೀಡಿದ ಸುಮಲತಾ ಅವರು, ಅವರ ಪಕ್ಷದ ಎಂಟು ಜನ ಶಾಸಕರು ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಒಬ್ಬ ಸಂಸದರು ಗೆದ್ದ ತಕ್ಷಣ ಆ ಎಂಟು ಜನ ಶಾಸಕರು ಕೆಲಸ ಮಾಡಬಾರದು ಎಂದು ನಿಯಮ ಇದೆಯೇ ಎಂದು ಪ್ರಶ್ನಿಸಿದರು.

ಸುಮಲತಾ ಅವರು ಫಾರಿನ್ ಟೂರ್ ಹೋಗಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ವಿದೇಶಕ್ಕೆ ಟೂರ್ ಹೋದವರು ಯಾರು ಎಂಬ ಸಂಗತಿ ಎಲ್ಲರಿಗೂ ತಿಳಿದಿದೆ. ಇದರ ಬಗ್ಗೆ ಮಾಧ್ಯಮಗಳು ಕೂಡ ಸುದ್ದಿ ಪ್ರಸಾರ ಮಾಡಿವೆ. ಇದರ ಬಗ್ಗೆ ನಾನು ಜಾಸ್ತಿ ಮಾತನಾಡುವುದಿಲ್ಲ ಎಂದರು.

ಲೋಕಸಭೆ ಚುನಾವಣೆಯಲ್ಲಿ ನನಗೆ ಕಾಂಗ್ರೆಸ್‍ನವರು ಬೆಂಬಲ ನೀಡಿದ್ದಾರೆ. ಕಾಂಗ್ರೆಸ್ ಎಂದರೆ ಕಾಂಗ್ರೆಸ್ ಪಕ್ಷವಲ್ಲ. ಕಾಂಗ್ರೆಸ್ ಪಕ್ಷದ ಕೆಲ ಮುಖಂಡರು ಬಹಳಷ್ಟು ಬೆಂಬಲ ನೀಡಿದ್ದಾರೆ. ಅವರಿಗೂ ಕೂಡ ಈ ಹಿಂದೆ ನಾನು ಧನ್ಯವಾದ ಹೇಳಿದ್ದೇನೆ ಈಗಲೂ ಹೇಳುತ್ತೇನೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *